ಬೆಂಗಳೂರು : ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸಲುವಾಗಿ
ಹಲಸೂರು ಕೆರೆಯಲ್ಲಿ ಹಾಗೂ ಸುತ್ತಮುತ್ತ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಾದ ರಿಜ್ವಾನ್ ಅರ್ಷದ್
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಲಸೂರು ಕೆರೆಯಲ್ಲಿ ಇಂದು ಸಂಜೆ ವಿವಿಧ ಇಲಾಖೆಗಳ ಜೊತೆಗೆ ಪೂರ್ವಭಾವಿ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಹಬ್ಬದ ಪ್ರಯುಕ್ತ ಭಕ್ತಾದಿಗಳು ಗಣೇಶ ಮೂರ್ತಿಗಳ ವಿಸರ್ಜನೆಗೆ ಹಲಸೂರು ಕೆರೆಗೆ ಆಗಮಿಸುವುದರಿಂದ ಗಣೇಶ ಮೂರ್ತಿಗಳ ವಿಸರ್ಜನೆಗೆ ಆಯಾಯ ಇಲಾಖೆಗಳು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ಕೆರೆ ಸುತ್ತಮುತ್ತಲಿನ ಎಲ್ಲಾ ರಸ್ತೆಗಳಲ್ಲಿ ಬೆಸ್ಕಾಂ ಅಧಿಕಾರಿಗಳು ನಿರಂತರ ವಿದ್ಯುತ್ ಸರಬರಾಜು ಮಾಡುವುದು. ಬೀದಿ ದೀಪಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುವಂತೆ ನೋಡಿಕೊಳ್ಳುಬೇಕು ಎಂದು ನಿರ್ದೇಶಿಸಿದರು.
ರಸ್ತೆಗಳಲ್ಲಿ ಗಣೇಶ ಮೂರ್ತಿ ತರುವ ವಾಹನಗಳಿಗೆ ತಗಲುವಂತಹ ಹಾಗೂ ಮರದ ಒಣಗಿದ ರೆಂಬೆ-ಕೊಂಬೆ ತೆಗೆಯುವುದು. ಮುಂಜಾಗೃತ ಕ್ರಮವಾಗಿ ಕೆರೆಯಲ್ಲಿ ಮುಳುಗು ತಜ್ಞರನ್ನು ನಿಯೋಜನೆ ಮಾಡಬೇಕು ಎಂದರು.
ಪೊಲೀಸ್ ವಿಭಾಗವು ಸೂಕ್ತ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಸಂಚಾರ ದಟ್ಟಣೆ ಉಂಟಾಗದಂತೆ ಸಂಚಾರ ಪೊಲೀಸ್ ವಿಭಾಗವು ಕ್ರಮ ವಹಿಸುವುದು. ಸೂಕ್ತ ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡುವುದು. ಹಬ್ಬದ ವಾತಾವರಣ ಮೂಡಿಸಲು ಕೆರೆ ಸುತ್ತ ಆಕರ್ಷಕ ಲೈಟಿಂಗ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಅದೇ ದಿನ ತೆರವುಗೊಳಿಸಿ ಶುಚಿಗೊಳಿಸುವುದು. ಹಾಗೂ ಹೆಚ್ಚುವರಿಯಾಗಿ ಆಟೋ ಟಿಪ್ಪರ್ ಮತ್ತು ಸ್ವಚ್ಛತಾ ಸಿಬ್ಬಂದಿಗಳ ನಿಯೋಜಿಸಬೇಕು.
ಕೆರೆಯನ್ನು ಸಂಪರ್ಕಿಸುವ ನಾಲ್ಕೂ ದಿಕ್ಕಿನ ರಸ್ತೆಗಳಲ್ಲಿ ಹೋದ ವರ್ಷಕ್ಕಿಂತ ಈ ವರ್ಷ ಹೆಚ್ಚುವರಿ ಮೊಬೈಲ್ ಟ್ಯಾಂಕರ್ ಅಳವಡಿಸುವುದು. ಆಂಬುಲೆನ್ಸ್ ಹಾಗೂ ವೈದ್ಯಕೀಯ ತಂಡ ನಿಯೋಜನೆ ಮಾಡುವುದು. ಅಗ್ನಿಶಾಮಕ ತಂಡದ ನಿಯೋಜನೆ ಮಾಡಬೇಕು ಎಂದರು.
ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಜಿ ಅವರು ಮಾತನಾಡಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಹಲಸೂರು ಕೆರೆ ಪ್ರಮುಖ ಸ್ಥಳವಾಗಿದ್ದು ಗಣೇಶ ಮೂರ್ತಿಗಳ ವಿಸರ್ಜನೆ ಯಾವುದೇ ಅಡಚಣೆಯಿಲ್ಲದೆ,* ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆಯುವಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಮಾನ್ಯ ಸಚಿವರು ನೀಡಿದ ನಿರ್ದೇಶನದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.
ಸಭೆಯಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ವೆಂಕಟಾಚಲಪತಿ, ಕಂದಾಯ ಅಪರ ಆಯುಕ್ತರಾದ ಶ್ರೀಮತಿ ಲಕ್ಷ್ಮಮ್ಮ, ಜಂಟಿ ಆಯುಕ್ತರಾದ ಹೇಮಂತ್ ಶರಣ್, ಕಾನೂನು & ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರು, ಎಸಿಪಿ, ಅಗ್ನಿಶಾಮಕ, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.
