ಸಮಗ್ರ ಸುದ್ದಿ

ಪ್ರಜಾಪ್ರಭುತ್ವ ಎಂದರೆ ಮತದಾನ ಮಾಡುವುದಲ್ಲ ಘನತೆ-ಗೌರವದಿಂದ ಬದುಕುವ ಹಕ್ಕು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ | “ಯುವ ಸಂಸತ್” ಕಾರ್ಯಕ್ರಮದ ಲಾಂಛನ ಬಿಡುಗಡೆ

Share

ಬೆಂಗಳೂರು:ಪ್ರಜಾಪ್ರಭುತ್ವ ಎಂದರೆ ಮತದಾನ ಮಾಡುವುದಲ್ಲ ಘನತೆ-ಗೌರವದಿಂದ ಬದುಕುವ  ಹಕ್ಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಂದು ವಿಧಾನಸೌಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ “ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ” ಕಾರ್ಯಕ್ರಮವನ್ನು  ಉದ್ಘಾಟಿಸಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು ಹಾಗೂ ಇದೇ ಸಂದರ್ಭದಲ್ಲಿ ಯೂತ್ ಪಾರ್ಲಿಮೆಂಟ್ ಕಾರ್ಯಕ್ರಮದ ಲಾಂಛನ ಬಿಡುಗಡೆ ಗೊಳಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಮತ್ತು ಜವಾಹರ್‍ಲಾಲ್ ನೆಹರೂ ಅವರ ನಾಯಕತ್ವದ ತತ್ವಗಳು ದೇಶದ ಪ್ರಜಾಪ್ರಭುತ್ವಕ್ಕೆ ಬಲ ತುಂಬಿವೆ ಎಂದು ಅವರು ಹೇಳಿದರು.

ಜನರು ಸರ್ಕಾರಕ್ಕೆ ಹೆದರಿದರೆ ಅದು ಸರ್ವಾಧಿಕಾರ. ಸರ್ಕಾರ ಜನರನ್ನು ಗೌರವಿಸಿದಾಗ ಪ್ರಜಾಪ್ರಭುತ್ವವಾಗುತ್ತದೆ.  ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ಹಿರಿಯರು ನಮಗೆ ಮಾರ್ಗದರ್ಶನ ಮಾಡಿದ್ದಾರೆ ಎಂದರು.

ಬಡವರಿಗೆ 10-15 ಲಕ್ಷ ನಿವೇಶನಗಳನ್ನು ಹಂಚಬೇಕೆಂದು ಕಾರ್ಯಕ್ರಮ ರೂಪಿಸಲಾಗಿದೆ. ದೇಶದಾದ್ಯಂತ ಪ್ರತಿಯೊಂದು ತಾಲೂಕು ಮಟ್ಟದಲ್ಲೂ ಪಕ್ಷದ ಪರವಾಗಿ ಹಾಗೂ ಜನಸಾಮಾನ್ಯರ ಹಕ್ಕುಗಳ ಪರವಾಗಿ ಕಾರ್ಯನಿರ್ವಹಿಸಲು ‘ಲೀಗಲ್ ಬ್ಯಾಂಕ್’ (ನ್ಯಾಯವಾದಿಗಳ ತಂಡ) ಒಂದನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವದ ವ್ಯವಸ್ಥೆಯು ಪಂಚಾಯತಿಯಿಂದ ಹಿಡಿದು ಪಾರ್ಲಿಮೆಂಟ್ ವರೆಗೆ ವ್ಯಾಪಿಸಿದೆ. ಯುವಜನತೆಯಲ್ಲಿ ರಾಜಕೀಯ ಜಾಗೃತಿ ಹಾಗೂ ನಾಯಕತ್ವ ಬೆಳೆಸಲು ಕಾಲೇಜು ಚುನಾವಣೆಗಳು ಅತ್ಯಗತ್ಯವಾಗಿದ್ದು, ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ರಾಜ್ಯದ ಪ್ರತಿಯೊಂದು ಕಾಲೇಜುಗಳಲ್ಲೂ ಶಿಸ್ತುಬದ್ಧವಾಗಿ ಹಾಗೂ ಕಡ್ಡಾಯವಾಗಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು  ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.

ತಮ್ಮ ಹಳೆಯ ದಿನಗಳ ನೆನಪು: ತಮ್ಮ ಶಾಲಾ-ಕಾಲೇಜು ದಿನಗಳಲ್ಲಿ ಸ್ಪರ್ಧಿಸಿದ್ದ ಚುನಾವಣೆಗಳನ್ನು ನೆನಪಿಸಿಕೊಂಡ ಮುಖ್ಯಮಂತ್ರಿಗಳು, ನಾಯಕತ್ವ ಗುಣವಿರುವವರನ್ನು ತಡೆಯಲು ರಾಜಕೀಯವಾಗಿ ಹೇಗೆ ತುಳಿಯಲಾಗುವುದು ಎಂಬುದನ್ನು ನಾನು ವೈಯಕ್ತಿಕವಾಗಿ ಅನುಭವಿಸಿದ್ದೇನೆ ಎಂದು ತಮ್ಮ ಹಳೆಯ ಅನುಭವಗಳನ್ನು ಹಂಚಿಕೊಂಡರು.

ಯುವಜನತೆಗೆ ಸಂವಿಧಾನಿಕ ಮೌಲ್ಯ ತಲುಪಿಸಲು ಸರ್ಕಾರ ಬದ್ಧಡಿಸಿಎಂ ಡಾ.ಜಿ.ಪರಮೇಶ್ವರ್

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿ, ದೇಶದಲ್ಲಿ 80 ವರ್ಷಗಳ ನಂತರವೂ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಕಾರಣಕರ್ತರಾದ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರಿಗೆ ಮೊದಲ ನಮನಗಳನ್ನು ಸಲ್ಲಿಸುತ್ತಾ, 12ನೇ ಶತಮಾನದಲ್ಲಿ ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಬಸವಣ್ಣನವರು ಪ್ರಾರಂಭಿಸಿದ ಅನುಭವ ಮಂಟಪವೇ ಜಗತ್ತಿನ ಪ್ರಥಮ ಪ್ರಜಾಪ್ರಭುತ್ವದ ಮಾದರಿ ಎಂದರು.

ಸಾಮಾಜಿಕ ಪ್ರಜಾಸತ್ತತೆಯ ಅಡಿಪಾಯವಿಲ್ಲದೆ ರಾಜಕೀಯ ಪ್ರಜಾಸತ್ತತೆಯ ನೆಲೆ ನಿಲ್ಲಲು ಸಾಧ್ಯವಿಲ್ಲ ಎಂಬ ಅಂಬೇಡ್ಕರ್ ಅವರ ಮಾತನ್ನು ಸ್ಮರಿಸಿದ ಅವರು, ದೇಶದಲ್ಲಿ  ಶೇಕಡಾ 65 ರಷ್ಟು ಇರುವ ಯುವಜನತೆಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಲುಪಿಸುವ ಉದ್ದೇಶದಿಂದ ‘ಯುವ ಸಂಸತ್’ ಹಾಗೂ ಶಾಲೆ-ಕಾಲೇಜುಗಳಲ್ಲಿ ಸಂವಿಧಾನದ ಪ್ರಸ್ತಾವನೆ ಓದುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿದರೆ ಮೊದಲು ತೊಂದರೆಗೆ ಒಳಗಾಗುವವರು ಸಮಾಜದ ಕೆಳಸ್ತರದಲ್ಲಿರುವ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು. ಹೀಗಾಗಿ ಸಂವಿಧಾನಾತ್ಮಕ ಮೀಸಲಾತಿ ಹಾಗೂ ರಕ್ಷಣೆ ಅತ್ಯಗತ್ಯ ಎಂದು ಹೇಳಿದರು.

ಯಾವ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ವ್ಯವಸ್ಥೆ ಇದೆ, ಯಾವ ದೇಶದಲ್ಲಿ ಮಾನವತ್ವದ ಹಕ್ಕುಗಳಿಗೆ ಬೆಲೆ ಇದೆ, ಯಾವ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವಿದೆ, ಯಾವ ದೇಶದ ಆಡಳಿತದಲ್ಲಿ ಜನಸಮುದಾಯದ ಭಾಗವಹಿಸುವಿಕೆ ಇದೆ ಮತ್ತು ಯಾವ ದೇಶದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಇದೆ ಆ ದೇಶಗಳಲ್ಲಿ ಮಾತ್ರ ಇಂದು ಶಾಂತಿಯುತ ವಾತಾವರಣವಿದೆ. ಅದನ್ನೇ ನಾವು ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ ಎಂದರು.

ಪ್ರಪಂಚದಲ್ಲಿ 90 ಪ್ರಜಾಪ್ರಭುತ್ವದ ದೇಶಗಳಿವೆ. ಇನ್ನುಳಿದ ದೇಶಗಳಲ್ಲಿ ನಡೆಯುವಂತಹ ವಿದ್ಯಮಾನಗಳೇ ಬೇರೆ, ಆಡಳಿತವೇ ಬೇರೆ. ನಮ್ಮ ನೆರೆಯ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳಗಳಲ್ಲಿ ಏನೇನು ನಡೆಯಿತು ಎಂಬುದನ್ನು ಗಮನಿಸಿದ್ದೇವೆ. ಆದರೆ ನಮ್ಮ ದೇಶದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಅಡಿಪಾಯ ಭದ್ರವಾಗಿರುವುದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವಂತಹ ಪರಿಸ್ಥಿತಿ ಉದ್ಭವಾಗಿಲ್ಲ ಎಂದರು.

ಸಂವಿಧಾನ ರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜ್ಯವ್ಯಾಪಿ ಯುವ ಸಂಸತ್ ಅಭಿಯಾನ:ಸಚಿವ ಕೆ.ಹೆಚ್. ಮುನಿಯಪ್ಪ

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೆ.ಹೆಚ್. ಮುನಿಯಪ್ಪ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದ ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ರಾಜ್ಯಾದ್ಯಂತ ಯುವ ಸಂಸತ್ ಕಾರ್ಯಕ್ರಮ ಹಾಗೂ ಸಂವಿಧಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಆರಂಭವಾಗುವ ಈ ಯುವ ಸಂಸತ್ ಚರ್ಚಾಗೋಷ್ಠಿಗಳು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯಲಿದ್ದು, ನವೆಂಬರ್ 26ರ ಸಂವಿಧಾನ ದಿನಾಚರಣೆಯವರೆಗೆ ಮುಂದುವರಿಯಲಿವೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯ ಹಾಗೂ ಮಹಾತ್ಮ ಗಾಂಧೀಜಿಯವರ ಕನಸಿನ ಭಾರತವನ್ನು ನಿರ್ಮಿಸಲು ಯುವ ಜನತೆಯ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.

ವಸತಿ ಶಾಲೆಗಳ ಶೈಕ್ಷಣಿಕ ಪ್ರಗತಿ:

ರಾಜ್ಯದ 874 ಮೊರಾರ್ಜಿ ದೇಸಾಯಿ ಹಾಗೂ ಕ್ರೈಸ್ ವಸತಿ ಶಾಲೆಗಳಲ್ಲಿ ಶೇಕಡಾ 95ರಿಂದ 99 ರಷ್ಟು ಉತ್ತಮ ಫಲಿತಾಂಶ ದಾಖಲಾಗುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ಹೋಬಳಿಗಳಲ್ಲಿಯೂ ವಸತಿ ಶಾಲೆಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಬಾಕಿ ಇರುವ 70 ಹೊಸ ಶಾಲೆಗಳ ಪೈಕಿ 40 ಶಾಲೆಗಳಿಗೆ ಈಗಾಗಲೇ ಅನುಮತಿ ನೀಡಲಾಗಿದೆ. ಉಳಿದ ಶಾಲೆಗಳ ನಿರ್ಮಾಣಕ್ಕಾಗಿ ರೂ.600 ಕೋಟಿಗೂ ಅಧಿಕ ಅನುದಾನ ಕಾಯ್ದಿರಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ.

ಸಮಾಜ ಕಲ್ಯಾಣ ಇಲಾಖೆಯ ನಿಲಯಗಳಲ್ಲಿ ಕಳೆದ 20 ವರ್ಷಗಳಿಂದ ವಾರ್ಡನ್ ಹುದ್ದೆಗಳಿಗೆ ಬಡ್ತಿ ನೀಡಿರುವುದಿಲ್ಲ. ಆದ್ದರಿಂದ ಸುಮಾರು 540 ವಾರ್ಡನ್ ಮತ್ತು ಅಡುಗೆ ಸಿಬ್ಬಂದಿಗೆ ಹೊಸ ವೇತನ ಶ್ರೇಣಿಯೊಂದಿಗೆ ಬಡ್ತಿ ನೀಡಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಅಲ್ಲದೇ, 20 ರಿಂದ 30 ವರ್ಷ ಹಳೆಯದಾದ 2,011ಕ್ಕೂ ಹೆಚ್ಚು ವಿದ್ಯಾರ್ಥಿನಿಲಯಗಳನ್ನು ಅತ್ಯಾಧುನಿಕ ಮಾದರಿಯಲ್ಲಿ ನವೀಕರಿಸಿ, ಮೂಲಸೌಕರ್ಯಗಳನ್ನು ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವವೆಂದರೆ ಕೇವಲ ಒಂದು ದಿನದ ಆಚರಣೆಯಲ್ಲ;ಅದು ಸಂವಿಧಾನದ ಹಕ್ಕುಸಚಿವ ಶಿವರಾಜ್ ಎಸ್. ತಂಗಡಗಿ

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಮಾತನಾಡಿ, ಪ್ರಜಾಪ್ರಭುತ್ವವೆಂದರೆ ಕೇವಲ ಒಂದು ದಿನದ ಆಚರಣೆಯಲ್ಲ. ಅದು ನಮ್ಮ ಸಂವಿಧಾನ, ಹಕ್ಕು ಮತ್ತು ಜವಾಬ್ದಾರಿ. ಭಾರತದ ಪ್ರಜಾಪ್ರಭುತ್ವದ ಶಕ್ತಿ ಎಂದರೆ ಅಧಿಕಾರ ಯಾರೊಬ್ಬರ ಸ್ವತ್ತಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಜನರ ಮತದಿಂದ ಸರ್ಕಾರ ರಚನೆಯಾಗುತ್ತದೆ ಮತ್ತು ಜನರಿಗಾಗಿ ಸರ್ಕಾರ ಕೆಲಸ ಮಾಡಬೇಕು ಎಂಬುದು ಸಂವಿಧಾನದ ಆಶಯವಾಗಿದೆ.

ಅಂಬೇಡ್ಕರ್ ಆಶಯಗಳ ಸಾಕಾರವೇ ಪ್ರಜಾಪ್ರಭುತ್ವಕ್ಕೆ ನಿಜವಾದ ಗೌರವ. ಸಂವಿಧಾನ ನೀಡಿರುವ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸ್ವಾತಂತ್ರ್ಯದ ಆಶಯಗಳನ್ನು ಎತ್ತಿಹಿಡಿಯುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ತೋರಿದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮಾರ್ಗದಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.

ಸಾಮಾಜಿಕವಾಗಿ ತುಳಿತಕ್ಕೊಳಗಾದ ಕುಟುಂಬದಲ್ಲಿ ಜನಿಸಿದ ಅಂಬೇಡ್ಕರ್ ಅವರು ಬಾಲ್ಯದಿಂದಲೇ ಅಸಮಾನತೆ ಮತ್ತು ಅವಮಾನವನ್ನು ಎದುರಿಸಿದರು. ಆದರೆ ಆ ನೋವನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡು, ವಿಶ್ವದ ಅತ್ಯುತ್ತಮ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ಜ್ಞಾನ ಮತ್ತು ವಿಚಾರಧಾರೆಯ ಮೂಲಕ ಸಮಾಜಕ್ಕೆ ಹೊಸ ದಾರಿ ತೋರಿಸಿದರು. ‘ಶಿಕ್ಷಣ ಪಡೆಯಿರಿ, ಸಂಘಟಿತರಾಗಿ, ಹೋರಾಡಿರಿ’ ಎಂಬ ಅವರ ಸಂದೇಶ ಇಂದಿಗೂ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದೆ. ಈ ದೇಶಕ್ಕೆ ಅಂಬೇಡ್ಕರ್ ಅವರು ಸಂವಿಧಾನ ಕೊಡುಗೆಯಾಗಿ ನೀಡಿದ ಪರಿಣಾಮ ಇಂದು ನಾನು ಇಲ್ಲಿ ನಿಂತು ಮಾತನಾಡುತ್ತಿದ್ದೇನೆ ಎಂದರು.

ಅಂಬೇಡ್ಕರ್ ಅವರು ಜಾತಿ, ಧರ್ಮ, ಲಿಂಗ ಹಾಗೂ ಆರ್ಥಿಕ ಸ್ಥಿತಿಯ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯನೂ ಸಮಾನ ಎಂಬ ಮಹತ್ವದ ತತ್ವವನ್ನು ಸಂವಿಧಾನದ ಮೂಲಕ ಗಟ್ಟಿಗೊಳಿಸಿದರು. ಅಂಬೇಡ್ಕರ್ ಅವರು ಕೇವಲ ಸಂವಿಧಾನ ಶಿಲ್ಪಿಯಲ್ಲ, ಅವರು ಸಾಮಾಜಿಕ ನ್ಯಾಯದ ಮಹಾನ್ ಹೋರಾಟಗಾರ, ಶೋಷಿತರ ಧ್ವನಿ, ಸಮಾನತೆಯ ಪ್ರತಿಪಾದಕ ಹಾಗೂ ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರು. ಇಂದು ನಾವು ಅನುಭವಿಸುತ್ತಿರುವ ಪ್ರಜಾಪ್ರಭುತ್ವದ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಹಿಂದೆ ಅವರ ದೂರದೃಷ್ಟಿ ಹಾಗೂ ಪರಿಶ್ರಮದ ದೊಡ್ಡ ಕೊಡುಗೆಯಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವ ಲದಲ್ಲಿ ಸರ್ಕಾರವು ಪ್ರಜೆಗಳಿಗೆ ಉತ್ತರ ನೀಡಬೇಕುಸಚಿವ ರಿಜ್ವಾನ್ ಅರ್ಷದ್

ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ರಿಜ್ವಾನ್ ಅರ್ಷದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಎಂದರೆ ಕೇವಲ ಐದು ವರ್ಷಕ್ಕೊಮ್ಮೆ ವೋಟ್ ಹಾಕುವುದು ಅಥವಾ ಸರ್ಕಾರವನ್ನು ಬದಲಾಯಿಸುವುದು ಮಾತ್ರವಲ್ಲ. ರಾಜಪ್ರಭುತ್ವದಲ್ಲಿ ಪ್ರಜೆಯು ಸರ್ಕಾರಕ್ಕೆ ಉತ್ತರ ನೀಡಬೇಕಿತ್ತು, ಆದರೆ ಪ್ರಜಾಪ್ರಭುತ್ವದಲ್ಲಿ ಸರ್ಕಾರವು ಪ್ರಜೆಗಳಿಗೆ ಉತ್ತರ ನೀಡಬೇಕು ಎಂದರು.

ಸ್ವಾತಂತ್ರ್ಯ ಲಭಿಸಿದಾಗ ದೇಶದಲ್ಲಿ ಬಡತನ, ಅಜ್ಞಾನ ಮತ್ತು ಅಸಮಾನತೆ ಹೆಚ್ಚಾಗಿದ್ದರೂ ಸಹ, ನಮ್ಮ ವ್ಯವಸ್ಥೆಯು ಬಡವ-ಶ್ರೀಮಂತ, ಕಾರ್ಮಿಕ-ಉದ್ಯಮಿ, ಪುರುಷÀ-ಮಹಿಳೆ, ದಲಿತರು ಅಥವಾ ಅಲ್ಪಸಂಖ್ಯಾತರು ಎಂಬ ಭೇದಭಾವವಿಲ್ಲದೆ ಎಲ್ಲರಿಗೂ “ಒಬ್ಬ ವ್ಯಕ್ತಿಗೆ ಒಂದು ವೋಟ್” ಎಂಬ ಸಮಾನ ಹಕ್ಕನ್ನು ನೀಡಿದೆ.

ಡಾ. ಬಿ. ಆರ್. ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದ ಅವರು, ರಾಜಕೀಯ ಪ್ರಜಾಪ್ರಭುತ್ವವು ಪ್ರಜಾಪ್ರಭುತ್ವವಾಗಿ ಪರಿವರ್ತನೆಯಾಗದಿದ್ದರೆ ಅದಕ್ಕೆ ನಿಜವಾದ ಅರ್ಥವಿರುವುದಿಲ್ಲ. ಮಹಾತ್ಮ ಗಾಂಧೀಜಿಯವರ ಕನಸಿನಂತೆ, ಸಮಾಜದ ಅತ್ಯಂತ ದುರ್ಬಲ ವ್ಯಕ್ತಿಗೂ ಪ್ರಬಲ ವ್ಯಕ್ತಿಗೆ ಸಿಗುವಷ್ಟೇ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ಪ್ರಜಾಪ್ರಭುತ್ವ ಸಫಲವಾಗುತ್ತದೆ. ನಾಗರಿಕರಿಗೆ ಸರ್ಕಾರವನ್ನು ಮತ್ತು ತಮ್ಮ ಹಕ್ಕುಗಳನ್ನು ಪ್ರಶ್ನಿಸುವ ಸ್ವಾತಂತ್ರ್ಯವಿದ್ದಾಗ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಮಾಧ್ಯಮ ಸ್ವಾತಂತ್ರ್ಯ ಮತ್ತು ಸಂವಿಧಾನದ ಮೂಲ ಆಶಯಗಳನ್ನು ಎತ್ತಿಹಿಡಿಯಲು ಸಮಾಜವು ಒಗ್ಗೂಡಿ ಹೋರಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.

ನ್ಯಾಯಪರವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ –ವಿವೇಕ್ ಸುಬ್ಬಾರೆಡ್ಡಿ**

ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಹಾಗೂ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿ, 1.5 ಬಿಲಿಯನ್ ಜನಸಂಖ್ಯೆ ಹೊಂದಿರುವ ದೇಶದಲ್ಲಿ, ಎಲ್ಲ ಪ್ರಜೆಗಳ ಆಶೋತ್ತರಗಳು ಮತ್ತು ಕನಸುಗಳಿಗೆ ಸರ್ಕಾರಗಳು ಶ್ರದ್ಧೆಯಿಂದ ಅವಕಾಶ ಕಲ್ಪಿಸಿಕೊಟ್ಟಾಗ ಮಾತ್ರ ನೈಜ ಪ್ರಜಾಪ್ರಭುತ್ವ ಸಾಕಾರಗೊಳ್ಳುತ್ತದೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಮೂರೂ ಅಂಗಗಳು ಜನಪರವಾಗಿ ಹಾಗೂ ನ್ಯಾಯಪರವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಭಾರತವು 121 ಪ್ರಮುಖ ಭಾಷೆಗಳು, 1969 ಮಾತೃಭಾಷೆÉಗಳು, 4000 ಜಾತಿಗಳು, 46 ಲಕ್ಷ ಉಪಜಾತಿಗಳು ಹಾಗೂ 32 ಪ್ರಾಂತ್ಯಗಳನ್ನು ಹೊಂದಿರುವ ಅಗಾಧ ವೈವಿಧ್ಯಮಯ ರಾಷ್ಟ್ರವಾಗಿದೆ.  ಇಷ್ಟೊಂದು ವೈವಿಧ್ಯತೆ ಹೊಂದಿರುವ ದೇಶವನ್ನು ಒಂದೇ ಸಂವಿಧಾನದಡಿ ಒಗ್ಗೂಡಿಸಿದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಕೊಡುಗೆ ಮತ್ತು ಸಂವಿಧಾನ ಸಭೆಯ 500ಕ್ಕೂ ಹೆಚ್ಚು ಪ್ರತಿನಿಧಿಗಳ ಸುದೀರ್ಘ ಚರ್ಚೆಗಳನ್ನು ಸದಾ ಸ್ಮರಿಸಬೇಕಾಗಿದೆ ಎಂದರು.

1950ರಲ್ಲೇ ಭಾರತವು ಪುರುಷ ಮತ್ತು ಮಹಿಳೆಯರಿಗೆ ಸಮಾನವಾಗಿ ಮತದಾನದ ಹಕ್ಕನ್ನು ನೀಡಿತು. ಆದರೆ ಅಮೆರಿಕ, ಫ್ರಾನ್ಸ್‍ನಂತಹ ಮುಂದುವರಿದ ದೇಶಗಳು ಮಹಿಳೆಯರಿಗೆ ಪೂರ್ಣ ಪ್ರಮಾಣದ ಮತದಾನದ ಹಕ್ಕು ನೀಡಲು ದಶಕಗಳ ಕಾಲ ತೆಗೆದುಕೊಂಡಿದ್ದವು. ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಈ ಆಧುನಿಕ ಯುಗದಲ್ಲಿ ದೇಶವನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ತರಲು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಪಿ.ಟಿ. ಪರಮೇಶ್ವರ್ ನಾಯಕ್,  ಶಾಸಕರಾದ ಎಸ್. ಡಿ. ತಮ್ಮಯ್ಯ, ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಗ್ಯಾರಂಟಿ  ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹ್ರೂಸ್ ಖಾನ್, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ಅಲೆಮಾರಿ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ,  ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಜಿ.ಪಲ್ಲವಿ, ಕರ್ನಾಟಕ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಪಿ.ಹರಿಶೇಖರನ್, ಸಮಾಜಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಮೋಹನ್ ರಾಜ್ ಕೆ.ಪಿ.,  ಆಯುಕ್ತರಾದ ಡಾ. ರಾಕೇಶ್ ಕುಮಾರ್ ಕೆ ಸೇರಿದಂತೆ ಹಲವು ಗಣ್ಯರು ಹಾಗೂ ವಕೀಲ ವೃಂದದವರು, ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.


Share

You cannot copy content of this page