ಸಮಗ್ರ ಸುದ್ದಿ

ಹುರೂನ್‌ ಇಂಡಿಯಾ ‘ಚೀತಾ’ ಸೂಚ್ಯಂಕದಲ್ಲಿ ಬೆಂಗಳೂರು ದೇಶದಲ್ಲೇ ಅಗ್ರಸ್ಥಾನ: ಸಚಿವ ಪ್ರಿಯಾಂಕ್ ಖರ್ಗೆ

Share

ಬೆಂಗಳೂರು: 2026ರ ASK ಪ್ರೈವೇಟ್ ವೆಲ್ತ್ ಹುರೂನ್ ಇಂಡಿಯಾ ‘ಚೀತಾ’ ಸೂಚ್ಯಂಕದಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನ ಪಡೆದಿದ್ದು, ಒಟ್ಟು 110 ನವೋದ್ಯಮಗಳಲ್ಲಿ 36 ನವೋದ್ಯಮಗಳು ಬೆಂಗಳೂರಿನಲ್ಲಿ ನೆಲೆಯೂರಿವೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ X ಖಾತೆಯಲ್ಲಿ ತಿಳಿಸಿದ್ದಾರೆ.

ಎನ್‌ಸಿಆರ್‌ 25 ಮತ್ತು ಮುಂಬೈ 16 ನವೋದ್ಯಮ ಗಳೊಂದಿಗೆ ಬೆಂಗಳೂರಿನ ನಂತರದ ಸ್ಥಾನ ಪಡೆದಿವೆ. 2021ರಲ್ಲಿ 54 ಇದ್ದ ‘ಚೀತಾ’ ನವೋದ್ಯಮಗಳ ಸಂಖ್ಯೆ 2026ರಲ್ಲಿ 110ಕ್ಕೆ ಏರಿಕೆಯಾಗಿದೆ.

‘ಚೀತಾ’ ಎಂದರೆ ಷೇರುಪೇಟೆಯಲ್ಲಿ ನೋಂದಣಿಯಾಗದ, 20 ರಿಂದ 50 ಕೋಟಿ ಅಮೆರಿಕನ್ ಡಾಲರ್ ಮೌಲ್ಯ ಹೊಂದಿರುವ ಹಾಗೂ ಮುಂದಿನ ಐದು ವರ್ಷಗಳಲ್ಲಿ ಯೂನಿಕಾರ್ನ್ ಆಗುವ ಸಾಮರ್ಥ್ಯ ಹೊಂದಿರುವ ನವೋದ್ಯಮಗಳಾಗಿವೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ.

“ಬೆಂಗಳೂರಿನ ನವೋದ್ಯಮ ಪರಿಸರದ ವೈವಿಧ್ಯತೆ ಮತ್ತು ಬೆಳವಣಿಗೆಗೆ ಈ ಸಾಧನೆ ಸಾಕ್ಷಿಯಾಗಿದೆ. ಹಣಕಾಸು ತಂತ್ರಜ್ಞಾನ, ಸಾಫ್ಟ್‌ವೇರ್ ಸೇವೆಗಳು, ಕೃತಕ ಬುದ್ಧಿಮತ್ತೆ, ಅಂತರಿಕ್ಷ ಮತ್ತು ರಕ್ಷಣಾ ತಂತ್ರಜ್ಞಾನ, ವಿದ್ಯುತ್ ಚಾಲಿತ ಸಾರಿಗೆ, ಆರೋಗ್ಯ ತಂತ್ರಜ್ಞಾನ ಹಾಗೂ ಗ್ರಾಹಕ ಉತ್ಪನ್ನಗಳಂತಹ ವಿವಿಧ ಕ್ಷೇತ್ರಗಳಲ್ಲಿ ಬೆಂಗಳೂರಿನ ನವೋದ್ಯಮಗಳು ಮುಂಚೂಣಿಯಲ್ಲಿವೆ.” ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕ್ವಿಪಿಐಎಐ (QpiAI), ದಿಗಂತರಾ (Digantara), ಪಿಕ್ಸೆಲ್‌ (Pixxel), ರಿವರ್‌ ಮೊಬಿಲಿಟಿ (River Mobility) ಮತ್ತು ಅಲ್ಟ್ರಾಹ್ಯೂಮನ್ (Ultrahuman) ಸೇರಿದಂತೆ ಬೆಂಗಳೂರಿನ ಹಲವು ನವೋದ್ಯಮಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ರಾಜ್ಯದ ನಾವೀನ್ಯತೆ ಮತ್ತು ಉದ್ಯಮಶೀಲತೆಯ ವ್ಯಾಪ್ತಿಯನ್ನು ತೋರಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎಲ್ಲ ಸಂಸ್ಥಾಪಕರು ಮತ್ತು ನವೋದ್ಯಮಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದಿಸಿದ್ದು, ಇವು ಮುಂದಿನ ಪೀಳಿಗೆಯ ದೊಡ್ಡ ಭಾರತೀಯ ಉದ್ಯಮಗಳನ್ನು ನಿರ್ಮಿಸುತ್ತಿವೆ ಎಂಬುದು ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದ್ದಾರೆ.


Share

You cannot copy content of this page