ಸಮಗ್ರ ಸುದ್ದಿ

ಗೋನೂರು ಕೆರೆಯಲ್ಲಿ ಮುಖ್ಯಮಂತ್ರಿಗಳಿಂದ ಭದ್ರೆಗೆ ಗಂಗಾಪೂಜೆ| ಅಗತ್ಯ ಸಿದ್ದತೆ ಕೈಗೊಳ್ಳಲು ಸಚಿವ ಟಿ.ರಘುಮೂರ್ತಿ ಸೂಚನೆ

Share

ಚಿತ್ರದುರ್ಗ: ಲಕ್ಕವಳ್ಳಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ನಗರದ ಸಮೀಪದ ಗೋನೂರು ಕೆರೆ ತಲುಪಿರುವ ಭದ್ರೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಗಿನ ಅರ್ಪಿಸಿ, ಗಂಗಾಪೂಜೆ ನೆರವೇರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಗೋನುರು ಕೆರೆಯ ಬಳಿ ಅಗತ್ಯ ಸಿದ್ದತೆಯನ್ನು ಕೈಗೊಳ್ಳುವಂತೆ, ಅಧಿಕಾರಿಗಳಿಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಸೂಚಿಸಿದರು.

ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಕುರಿತು ಸಭೆ ನಡೆಸಿ ಅವರು ಮಾತನಾಡಿದರು.

ಕೂಡಲೇ ಸಣ್ಣ ನೀರಾವರಿ ಇಲಾಖೆ ವತಿಯಿಂದ ಗೋನೂರು ಕೆರೆಯ ಸುತ್ತಲೂ ಸ್ವಚ್ಚತಾ ಕಾರ್ಯಕೈಗೊಳ್ಳಬೇಕು. ಕೆರೆಗೆ ನೀರು ಸೇರುತ್ತಿರುವ ಜಾಗ ಹಾಗೂ ಗೋನೂರು ಕೆರೆ ಕೋಡಿ ಸಮೀಪ ಮುಖ್ಯಮಂತ್ರಿಗಳು ಭದ್ರಾ ನದಿ ನೀರಿಗೆ ಪೂಜೆ ನೆರವೇರಿಸುವರು. ಬಳಿಕ ಅಕ್ವಾಡೆಕ್ಟ್ ಕಾಮಗಾರಿಯನ್ನು ಸಹ ವೀಕ್ಷಣೆ ನಡೆಸಲಿದ್ದಾರೆ. ಬಳಿಕೆ ನಗರದಲ್ಲಿ ಆಯೋಜಿಸಿರುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಶಿಷ್ಟಾಚಾರ ಪಾಲನೆ ತಾಕೀತು:

ಭದ್ರಾ ಮೇಲ್ದಂಡೆ ಯೋಜನೆಯು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರಿನ ಜಿಲ್ಲಾ ವ್ಯಾಪ್ತಿಯನ್ನು ಹೊಂದಿದ್ದು, ಸಂಬಂಧ ಪಟ್ಟ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಿಸಿದ ತಾಲ್ಲೂಕಿನ ಶಾಸಕರುಗಳನ್ನು ತಪ್ಪದೇ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಮುಖ್ಯಮಂತ್ರಿಗಳ ಕಚೇರಿಯಿಂದ ಈ ಹಿಂದೆ ಯೋಜನೆಗೆ ಶ್ರಮಿಸಿದ ಅಂದಿನ ಮುಖ್ಯಮಂತ್ರಿಗಳು ಹಾಗೂ ನಾಯಕರುಗಳನ್ನು ಆಹ್ವಾನಿಸಲಾಗುತ್ತಿದೆ. ಆದ್ದರಿಂದ ಅತ್ಯಂತ ಜಾಗರೂಕವಾಗಿ ಶಿಷ್ಟಾಚಾರ ಪಾಲನೆ ಮಾಡಬೇಕು. ಪ್ರಸ್ತುತ ಜಲಸಂಪನ್ಮೂಲ ಸಚಿವರಾದ ಚಲುವರಾಯಸ್ವಾಮಿ ಅವರು ಈ ಸಂಬಂಧ ಜಿಲ್ಲೆಗೆ ಭೇಟಿ ನೀಡಲಿದ್ದು, ಕಾರ್ಯಕ್ರಮ ವಿವರ, ದಿನಾಂಕ ಸ್ಪಷ್ಟಪಡಿಸಲಿದ್ದಾರೆ ಎಂದು ಸಚಿವ ಟಿ.ರಘುಮೂರ್ತಿ ಹೇಳಿದರು.

ಪೈಪ್‍ಲೈನ್ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ:

ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಪೈಪ್‍ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳು ಶ್ರಮಿಸಬೇಕು. ಭದ್ರಾ ಜಲಾಶಯದಿಂದ ಪ್ರಾಯೋಗಿಕವಾಗಿ ನೀರು ಹರಿಸಲು 3 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಕೇವಲ 0.5 ಟಿ.ಎಂ.ಸಿ ಮಾತ್ರ ಗೋನೂರು ಕೆರೆಯವರೆಗೆ ಬಂದು ಸೇರಿದೆ. ಅಂಜ್ಜಪುರಂದ ವೈ ಜಂಕ್ಷನ್ ಬಳಿ ರೈತರು ಅವರ ಭಾಗದ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನೂ 2.5 ಟಿ.ಎಂ.ಸಿ ನೀರು ಹರಿಯಲಿದ್ದು, ಅವರ ಭಾಗದ ಕೆರೆಗಳಿಗೂ ನೀರು ನೀಡಲಾಗುತ್ತದೆ. ಅಧಿಕಾರಿಗಳು ಇದನ್ನು ಮನವರಿಕೆ ಮಾಡಿಕೊಟ್ಟು, ಗೋನೂರು ಕೆರೆ ನೀರು ಹರಿಯುವುದಕ್ಕೆ ಅನುವು ಮಾಡಿಕೊಡಬೇಕು. ಹೊಸದುರ್ಗ, ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಕೆರೆಗಳಿಗೂ ನೀರು ಹರಿಸಲಾಗುವುದು. ಜೆ.ಎನ್.ಕೋಟೆ ಜನರು ಅವರ ಕೆರೆಗೂ ನೀರು ನೀಡುವಂತೆ ಬೇಡಿಕೆ ಸಲ್ಲಿಸಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸಚಿವ ಟಿ.ರಘಮೂರ್ತಿ ತಾಕೀತು ಮಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ರಮ್ಯ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿಯರ್ ರವಿಶಂಕರ್, ಸಹಾಯಕ ಇಂಜಿನಿಯರ್ ಹರೀಶ್, ಜಿ.ಪಂ.ಸಿಪಿಓ ಗಾಯಿತ್ರಿ, ನಗರಸಭೆ ಆಯುಕ್ತೆ ಲಕ್ಷ್ಮಿ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.


Share

You cannot copy content of this page