ಬೆಂಗಳೂರು:ಕರ್ನಾಟಕ ವಿಧಾನಪರಿಷತ್ತಿನ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳು ಸೇರಿದಂತೆ ಒಟ್ಟು ನಾಲ್ಕು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗ (ECI) ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.
ಹಾಲಿ ಸದಸ್ಯರ ನಿವೃತ್ತಿಯಿಂದ ತೆರವಾಗಲಿರುವ ಈ ಕ್ಷೇತ್ರಗಳಿಗೆ ಅಕ್ಟೋಬರ್ 23ರಂದು ಮತದಾನ ನಡೆಯಲಿದೆ.
ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಶಶೀಲ್ ಜಿ. ನಮೋಶಿ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಶ್ರೀ ಪುಟ್ಟಣ್ಣ, ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚಿದಾನಂದ ಎಂ. ಗೌಡ ಹಾಗೂ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಎಸ್‌ವಿ ಸಂಕನೂರ ಅವರ ಅಧಿಕಾರಾವಧಿಯು 2026ರ ನವೆಂಬರ್ 11ರಂದು ಮುಕ್ತಾಯಗೊಳ್ಳಲಿದೆ.
ಚುನಾವಣಾ ವೇಳಾಪಟ್ಟಿ:
ಚುನಾವಣಾ ಅಧಿಸೂಚನೆಯು 2026ರ ಸೆಪ್ಟೆಂಬರ್ 29ರ ಮಂಗಳವಾರದಂದು ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು 2026ರ ಅಕ್ಟೋಬರ್ 6 ಕೊನೆಯ ದಿನವಾಗಿದ್ದು, ಅಕ್ಟೋಬರ್ 7ರಂದು ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂತೆಗೆದುಕೊಳ್ಳಲು 2026ರ ಅಕ್ಟೋಬರ್ 9 ಕೊನೆಯ ದಿನವಾಗಿದೆ. ಅಕ್ಟೋಬರ್ 23ರ ಶುಕ್ರವಾರದಂದು ಬೆಳಿಗ್ಗೆ 8:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ತದನಂತರ ಅಕ್ಟೋಬರ್ 27ರ ಮಂಗಳವಾರದಂದು ಎಣಿಕೆ ಕಾರ್ಯ ನಡೆಯಲಿದ್ದು, ಅಕ್ಟೋಬರ್ 31ರ ಒಳಗಾಗಿ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಚುನಾವಣೆ ಘೋಷಣೆಯಾಗಿರುವ ಕ್ಷೇತ್ರಗಳಾದ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಜಿಲ್ಲೆಗಳಾದ
ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ತುಮಕೂರು; ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಜಿಲ್ಲೆಗಳದ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ; ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಜಿಲ್ಲೆಗಳಾದ ಬಳ್ಳಾರಿ, ಬೀದರ್, ಗುಲ್ಬರ್ಗ (ಕಲಬುರಗಿ), ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಸಂಪೂರ್ಣ ಬಿ.ಬಿ.ಎಂ.ಪಿ (BBMP) ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
