ಸಮಗ್ರ ಸುದ್ದಿ

ಸೆ.26ಕ್ಕೆ ‘ಪರಮ್ ವಿಹಾರ’ದ ವೀಣಾ ನಾದ, ಒಡಿಸ್ಸಿ ನೃತ್ಯ ವೈಭವ

Share

ಬೆಂಗಳೂರು:ಪ್ರವರ್ಧಮಾನಕ್ಕೆ ಬರುತ್ತಿರುವ ಯುವ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಹಾಗೂ ಸಾರ್ವಜನಿಕರಲ್ಲಿ ಕಲೆ-ಸಂಸ್ಕೃತಿಯ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ‘ಪರಮ್ ಕಲ್ಚರ್’ ಸಂಸ್ಥೆಯು ಆಯೋಜಿಸುತ್ತಿರುವ ಮಾಸಿಕ ಸಾಂಸ್ಕೃತಿಕ ಸರಣಿ ‘ಪರಮ್ ವಿಹಾರ’ದ 16ನೇ ಆವೃತ್ತಿಯು ಸೆಪ್ಟೆಂಬರ್ 26ರಂದು ಸಂಜೆ 6ರಿಂದ 8ರವರೆಗೆ ನಗರದ ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ನಡೆಯಲಿದೆ.

ಪ್ರತಿ ತಿಂಗಳ ನಾಲ್ಕನೇ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಾಪ್ರೇಮಿಗಳ ಸನಿಹಕ್ಕೆ ತರುವ ಈ ಸರಣಿಯಲ್ಲಿ, ಈ ಬಾರಿ ಶಾಸ್ತ್ರೀಯ ವೀಣಾ ವಾದನ ಹಾಗೂ ಆಕರ್ಷಕ ಒಡಿಸ್ಸಿ ನೃತ್ಯ ಪ್ರದರ್ಶನಗಳು ಕಲಾ ರಸಿಕರ ಮನಸೂರೆಗೊಳ್ಳಲಿವೆ.

ವೀಣಾ ಜುಗಲ್ಬಂದಿ: ಖ್ಯಾತ ವಿದ್ವಾನ್ ಗೋಪಾಲ್ ವೆಂಕಟರಮಣ ಅವರ ಶಿಷ್ಯೆಯರಾದ ಕುಮಾರಿ ನಿರೀಕ್ಷಾ ಜಿ. ಮತ್ತು ಕುಮಾರಿ ಸಿ.ಸಿ. ಹಾಸಿನಿ ಅವರು ಜಂಟಿಯಾಗಿ ಪ್ರಸ್ತುತಪಡಿಸುವ ವೀಣಾ ವಾದನವು ಸಂಜೆಯ ಸಂಗೀತ ಸಂಭ್ರಮಕ್ಕೆ ನಾದಮಾಧುರ್ಯವನ್ನು ತುಂಬಲಿದೆ.

‘ಜಗದೀಶ್ವರ’ ಒಡಿಸ್ಸಿ ನೃತ್ಯ ವೈಭವ: ಖ್ಯಾತ ನೃತ್ಯಗುರು ಶೃಂಗಾರಮಣಿ ದೇಬಾಶಿಶ್ ಪಟ್ನಾಯಕ್ ಅವರ ಶಿಷ್ಯೆಯಾದ ಕುಮಾರಿ ಅನಯಾ ಪತಿ ಅವರು ‘ಜಗದೀಶ್ವರ: ದ ಡ್ಯಾನ್ಸ್ ಆಫ್ ದ ಡಿವೈನ್’ ಎಂಬ ಪರಿಕಲ್ಪನೆಯಾಧಾರಿತ ವಿಶೇಷ ಒಡಿಸ್ಸಿ ನೃತ್ಯವನ್ನು ಪ್ರಸ್ತುತಪಡಿಸಲಿದ್ದಾರೆ.

ಶಾಸ್ತ್ರೀಯ ಕಲೆಗಳನ್ನು ಸಮುದಾಯದ ನಡುವೆ ಜೀವಂತವಾಗಿಡುವ ಹಾಗೂ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಸಾಂಸ್ಕೃತಿಕ ಸಂಜೆಗೆ ಸಂಗೀತ ಮತ್ತು ನೃತ್ಯಾಸಕ್ತರಿಗೆ ಮುಕ್ತ ಸ್ವಾಗತವಿದೆ.


Share

You cannot copy content of this page