ಮಂಡ್ಯ:ಬೇರೆಯವರ ಬಗ್ಗೆ ಟೀಕೆ, ಚರ್ಚೆಗಳ ಬಗ್ಗೆ ಗಮನಹರಿಸುವುದಕ್ಕಿಂತ ನಮ್ಮ ಕೆಲಸದ ಬಗ್ಗೆ ದೃಷ್ಟಿ ನೆಟ್ಟರೆ ಸಾರ್ವಜನಿಕರ ಹತ್ತು ಹಲವು ಕೆಲಸಗಳು ಸುಗಮವಾಗಿ ಆಗುತ್ತವೆ ಎಂಬುದು ನನ್ನ ಬಲವಾದ ನಂಬಿಕೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಬಸರಾಳು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಶನಿವಾರ ನಡೆದ ‘ಪ್ರಜಾಸೇವಾ ಆಂದೋಲನ’ ಸಭೆಯಲ್ಲಿ ಅವರು ಮಾತನಾಡಿದರು.
ಬಲಾಢ್ಯ ರಾಜಕಾರಣಿಗಳಿದ್ದರೂ ಜಿಲ್ಲೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಜನಸೇವೆ ಮಾಡುವ ಅವಕಾಶ ನಮಗೆ ಸಿಗಲಿ, ನಿಮ್ಮ ಮೂಲಕ ಜಿಲ್ಲೆ ಒಂದಷ್ಟು ಅಭಿವೃದ್ಧಿಯಾಗಲಿ ಎಂದು ಇದೇ ಬಸರಾಳು ಗ್ರಾಮದ ಹಿರಿಯರೊಬ್ಬರು ಹಾರೈಸಿದ್ದನ್ನು ಸಚಿವರು ಇದೇ ವೇಳೆ ಸ್ಮರಿಸಿದರು. ಜಿಲ್ಲೆಗೆ ಸಮರ್ಪಕ ಸೇವೆ ಸಲ್ಲಿಸಿದ ಸಾರ್ಥಕ ಅನುಭವ ನನಗಿದೆ. ಅದರಲ್ಲೂ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಈ ಸಾರ್ಥಕತೆ ಇನ್ನಷ್ಟು ಹೆಚ್ಚಾಗಿದೆ ಎಂದು ಅಭಿಮಾನದ ಮಾತುಗಳನ್ನಾಡಿದರು.
ಮೈಶುಗರ್ ಫ್ಯಾಕ್ಟರಿಗೆ ಮುಚ್ಚುವ ಭೀತಿಯಿಲ್ಲ
ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎನ್ನುವ ಉದ್ದೇಶದಿಂದಲೇ ಕಾಂಗ್ರೆಸ್ ಸರ್ಕಾರ ಈ ಹಿಂದೆ ನನ್ನನ್ನು ಕೃಷಿ ಸಚಿವನನ್ನಾಗಿ ಮಾಡಿತ್ತು ಎನಿಸುತ್ತಿದೆ. ಮಂಡ್ಯದ ಜೀವನಾಡಿ ಮೈಶುಗರ್ ಫ್ಯಾಕ್ಟರಿಗೆ ಇನ್ನ್ಯಾವತ್ತೂ ಬಾಗಿಲು ಹಾಕುವ ಪರಿಸ್ಥಿತಿ ಬರುವುದಿಲ್ಲ. ಸರ್ಕಾರದ ಬೆಂಬಲದೊಂದಿಗೆ ಮೈಶುಗರ್ ಯಶಸ್ವಿಯಾಗಿ ಮುನ್ನಡೆಯುವ ಶಕ್ತಿ ಹೊಂದಿದೆ. ಇದರ ಜೊತೆಗೆ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ನನ್ನ ಗುರಿಯನ್ನು ಆದಷ್ಟು ಬೇಗ ತಲುಪಲಾಗುವುದು ಎಂದು ಭರವಸೆ ನೀಡಿದರು.
ಐದು ಗ್ಯಾರಂಟಿಗಳೇ ನಮ್ಮ ರೇಟ್ ಕಾರ್ಡ್ – ವಿಪಕ್ಷಗಳಿಗೆ ಸವಾಲು
ಐದು ಗ್ಯಾರಂಟಿಗಳೇ ನಮ್ಮ ಸರ್ಕಾರದ ಅಭಿವೃದ್ಧಿಯ ರೇಟ್ ಕಾರ್ಡ್. ಎಲ್ಲರಿಗೂ ಸಮಾನವಾಗಿ ಯೋಜನೆಗಳನ್ನು ಹಂಚಿಕೆ ಮಾಡಿ, ಸಾರ್ವಜನಿಕರನ್ನು ಗೌರವಿಸುವ ಏಕೈಕ ಸರ್ಕಾರ ನಮ್ಮದು. ವಿರೋಧ ಪಕ್ಷಗಳೂ ರಾಜ್ಯದಲ್ಲಿ ಅಧಿಕಾರ ನಡೆಸಿವೆ. ಆದರೆ, ಅವರು ಯಾವುದಾದರೂ ಅರ್ಥಪೂರ್ಣ ಜನಪರ ಯೋಜನೆಯನ್ನು ಸಾರ್ವಜನಿಕರಿಗೆ ಸಮರ್ಪಿಸಿ, ಕಾರ್ಯಗತಗೊಳಿಸಿದ್ದರೆ ಹೇಳಲಿ, ನಾನು ಅವರಿಗೆ ಸನ್ಮಾನಿಸುತ್ತೇನೆ ಎಂದು ವಿಪಕ್ಷಗಳಿಗೆ ಸವಾಲೆಸೆದರು.
ಕೆರೆಗಳಿಗೆ ನೀರು ಗ್ಯಾರೆಂಟಿ – 1,100 ಕೋಟಿ ಯೋಜನೆ
ಬಸರಾಳು ಹಾಗೂ ದೇವಲಾಪುರ ಭಾಗದ ಕೆರೆಗಳನ್ನು ತುಂಬಿಸುವ ಬಗ್ಗೆ ಶಾಸಕ ರವಿಕುಮಾರ್ ಗಣಿಗ ಅವರು ಸಲ್ಲಿಸಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಶೀಘ್ರದಲ್ಲೇ ಈ ಯೋಜನೆಗೆ ಚಾಲನೆ ನೀಡಲಾಗುವುದು. ಈ ಸಂಬಂಧ ಕಾವೇರಿ ನದಿಯಿಂದ ನೀರು ಪೂರೈಸುವ ಸುಮಾರು 1,100 ಕೋಟಿ ಮೊತ್ತದ ಯೋಜನೆ ರೂಪಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಜೊತೆಗೆ ಹೇಮಾವತಿ ನಾಲೆಯ ಸಮಗ್ರ ಅಭಿವೃದ್ಧಿಗೆ 350 ಕೋಟಿ ರೂ. ಅನುದಾನ ನೀಡುವ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ನಾವು ಮಂಡ್ಯದ ಜನ, ಯಾರಿಗೂ ಮೋಸ ಮಾಡುವುದಿಲ್ಲ ಎಂದು ಭಾವುಕರಾಗಿ ಮಾತನಾಡಿದ ಸಚಿವರು, ನಮ್ಮ ಸರ್ಕಾರಕ್ಕಿಂತ ಹೆಚ್ಚಾಗಿ ಯಾರಾದರೂ ಅಭಿವೃದ್ಧಿ ಮಾಡಿದರೆ ಅವರಿಗೆ ಮತ ನೀಡಿ, ಇಲ್ಲವಾದರೆ ನಮಗೆ ಶಕ್ತಿ ತುಂಬುವ ಕೆಲಸ ಮಾಡಿ ಎಂದರು.
ಬಿಜೆಪಿ ಅವಧಿಯ ಅಕ್ರಮದಿಂದ ಆರ್ಥಿಕ ಸಂಕಷ್ಟ
ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಕಾನೂನುಬಾಹಿರವಾಗಿ ಕಾಮಗಾರಿಗಳನ್ನು ನೀಡಲಾಗಿದೆ. ಹೀಗಾಗಿ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿ 1.20 ಲಕ್ಷ ಕೋಟಿ ರೂ. ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ಇನ್ನೂ 30 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕಿದೆ. ನಾಲ್ಕು ವರ್ಷದ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಿದರೂ ಬಿಜೆಪಿ ಅವಧಿಯ ಅಕ್ರಮ ಕಾಮಗಾರಿಗಳ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.
ಸ್ಟಾಲ್‌ಗಳಿಗೆ ಭೇಟಿ, ಸೀಮಂತ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳು ಅಳವಡಿಸಿದ್ದ ಮಳಿಗೆಗಳಿಗೆ ಸಚಿವರು ಭೇಟಿ ನೀಡಿ ಪ್ರಗತಿ ಪರಿಶೀಲಿಸಿದರು. ಸಾವಯವ ಬೆಲ್ಲದ ಮಳಿಗೆಯಲ್ಲಿ ಬೆಲ್ಲ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಸೀಮಂತ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಬಾಗಿನ ನೀಡಿ ಶುಭ ಹಾರೈಸಿದರು.
ಇದೇ ವೇಳೆ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 3,000ಕ್ಕೂ ಹೆಚ್ಚು ಮಂದಿ ತಪಾಸಣೆಗೊಳಗಾದರು. ಕೆರಗೋಡು ಗ್ರಾಮಸ್ಥರಿಗೆ ನಿವೇಶನಗಳ ಹಕ್ಕುಪತ್ರ, ರೈತರಿಗೆ ಹುಲ್ಲು ಕತ್ತರಿಸುವ ಯಂತ್ರ, ವಿಕಲಚೇತನರಿಗೆ ತ್ರಿಚಕ್ರ ವಾಹನ ಹಾಗೂ ಫಲಾನುಭವಿಗಳಿಗೆ ಟ್ಯಾಕ್ಸಿ/ಕ್ಯಾಬ್‌ಗಳನ್ನು ಹಸ್ತಾಂತರಿಸಲಾಯಿತು.
ಅಹವಾಲು ಸ್ವೀಕಾರ
ಕಾರ್ಯಕ್ರಮದಲ್ಲಿ ಪೋಡಿ ದುರಸ್ತಿ, ಶುದ್ಧ ಕುಡಿಯುವ ನೀರು, ಬಸ್ ಸೌಲಭ್ಯ, ಪಡಿತರ ಚೀಟಿ, ವಿದ್ಯುತ್ ಸಂಪರ್ಕ, ನಿವೇಶನ ಸಮಸ್ಯೆ ಸೇರಿದಂತೆ ಹತ್ತಾರು ಸಮಸ್ಯೆಗಳ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು. ಸುಮಾರು ಎರಡು ಗಂಟೆಗಳಿಗೂ ಅಧಿಕ ಕಾಲ ಅಹವಾಲು ಆಲಿಸಿದ ಸಚಿವರು, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿ, ಉಳಿದವುಗಳಿಗೆ ಕಾಲಮಿತಿಯಲ್ಲಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವೇದಿಕೆಯಲ್ಲಿ ಶಾಸಕ ರವಿಕುಮಾರ್ ಗೌಡ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
