ಸಮಗ್ರ ಸುದ್ದಿ

ಪ್ರತಿ ರೈತರಿಗೆ ₹2,500ರಂತೆ ಇನ್‌ಪುಟ್ ಸಬ್ಸಿಡಿ : ಕೇಂದ್ರದ ನೆರವಿನ ಬಳಿಕ ಮುಂದಿನ ಪರಿಹಾರ ಕ್ರಮ: ಡಾ. ಜಿ. ಪರಮೇಶ್ವರ್

Share

ಬೆಂಗಳೂರು:ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ತಕ್ಷಣದ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಪ್ರತಿ ರೈತರಿಗೆ ₹2,500ರಂತೆ ಇನ್‌ಪುಟ್ ಸಬ್ಸಿಡಿ ನೀಡಲು ನಿರ್ಧರಿಸಿದೆ. ಸುಮಾರು 45ರಿಂದ 50 ಲಕ್ಷ ರೈತರಿಗೆ ಈ ನೆರವು ತಲುಪಲಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹1,250 ಕೋಟಿ ವೆಚ್ಚವಾಗಲಿದೆ. ಕೇಂದ್ರದಿಂದ ಎನ್‌ಡಿಆರ್‌ಎಫ್ ನೆರವು ನಿರೀಕ್ಷಿಸುತ್ತಿದ್ದರೂ, ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ತಕ್ಷಣವೇ ನೆರವು ನೀಡುತ್ತಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ಈಗಾಗಲೇ ಹಲವು ರೀತಿಯ ನೆರವು ನೀಡುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಸುಮಾರು ₹22,000 ಕೋಟಿ ವಿದ್ಯುತ್ ಸಬ್ಸಿಡಿ ನೀಡಲಾಗುತ್ತಿದೆ. ₹1,250 ಕೋಟಿ ಮೊದಲ ಹಂತದ ನೆರವು ಸಣ್ಣ ಮೊತ್ತವಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ದೊರೆಯುವ ಪರಿಹಾರದ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬರದಿಂದ ರಾಜ್ಯದಲ್ಲಿ ಉಂಟಾಗಿರುವ ಒಟ್ಟು ನಷ್ಟದ ಪ್ರಮಾಣ ₹40,000 ಕೋಟಿಗೂ ಅಧಿಕವಾಗುವ ಸಾಧ್ಯತೆಯಿದೆ. ಈಗಾಗಲೇ ಮೊದಲ ಹಂತದ ಮೆಮೊರಾಂಡಂ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮೆಮೊರಾಂಡಂಗಳನ್ನು ಸಲ್ಲಿಸಲಾಗುವುದು. ಅಂತಿಮವಾಗಿ ಸಂಪೂರ್ಣ ನಷ್ಟದ ಅಂದಾಜು ಸಿದ್ಧಪಡಿಸಿ, ಎನ್‌ಡಿಆರ್‌ಎಫ್ ಮಾರ್ಗಸೂಚಿಗಳನ್ವಯ ರಾಜ್ಯಕ್ಕೆ ಎಷ್ಟು ಪರಿಹಾರ ಬೇಕು ಎಂಬುದನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರವು ನೀಡುವ ರೀತಿಯ ಆಧಾರದ ಮೇಲೆ ಮುಂದಿನ ಪರಿಹಾರ ಕ್ರಮಗಳನ್ನು ನಿರ್ಧರಿಸಲಾಗುವುದು. ಈ ಹಂತದಲ್ಲಿ ಪರಿಷ್ಕೃತ ಪರಿಹಾರ ಮೊತ್ತದ ಕುರಿತು ಯಾವುದೇ ಬದ್ಧತೆ ನೀಡಲು ಸಾಧ್ಯವಿಲ್ಲ ಎಂದು ಡಾ. ಪರಮೇಶ್ವರ ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಐಎಎಸ್ ಅಧಿಕಾರಿಯೊಬ್ಬರನ್ನು ಒಳಗೊಂಡ ತಂಡವನ್ನು ಕಳುಹಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ತಂಡದ ಭೇಟಿ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಿ, ತನ್ನ ಮಾರ್ಗಸೂಚಿಗಳ ಪ್ರಕಾರ ಬರ ಪರಿಸ್ಥಿತಿ ಹಾಗೂ ನಷ್ಟವನ್ನು ಮೌಲ್ಯಮಾಪನ ಮಾಡಿದ ಬಳಿಕ ಮುಂದಿನ ಪರಿಹಾರದ ಪ್ರಮಾಣ ಸ್ಪಷ್ಟವಾಗಲಿದೆ ಎಂದರು.

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ತಾವು ಸ್ಪಷ್ಟಪಡಿಸಿದ್ದೇವೆ. ಸರ್ವಪಕ್ಷ ಸಭೆ ನಡೆಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿಯೋಗವನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ತಿಳಿಸಿದರು.

ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಕರ್ನಾಟಕದ ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟವನ್ನು ಮನವರಿಕೆ ಮಾಡಿಕೊಡಲಾಗುವುದು. ವಿರೋಧ ಪಕ್ಷದವರು ಬರಲು ಸಿದ್ಧರಿದ್ದರೆ, ಅವರನ್ನು ಸಹ ಜೊತೆಯಲ್ಲಿ ಕರೆದೊಯ್ಯಲು ಸರ್ಕಾರ ಸಿದ್ಧವಾಗಿದೆ. ನಿಯೋಗದ ದೆಹಲಿ ಭೇಟಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಮಾಹಿತಿ ನೀಡಿದರು.

ವಿಶೇಷಚೇತನರ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯೆ:* ರಾಮನಗರದಲ್ಲಿ ವಿಶೇಷಚೇತನರು ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಂಬಂಧಪಟ್ಟ ಇಲಾಖೆ ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ ಸಚಿವ ಸಂಪುಟದ ಮುಂದೆ ತರಬೇಕು. ಮುಖ್ಯಮಂತ್ರಿಗಳು ಹಣಕಾಸು ಸಚಿವರು. ಅವರೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಚಿವ ಸಂಪುಟಕ್ಕೆ ಬಂದಲ್ಲಿ, ಎಲ್ಲರೂ ಸಹಕರಿಸುವುದಾಗಿ ತಿಳಿಸಿದರು.


Share

You cannot copy content of this page