ಸಮಗ್ರ ಸುದ್ದಿ

ಮೊದಲ ಹಂತದ ಬರ ಪರಿಹಾರ ಕಾರ್ಯ ತಕ್ಷಣದಿಂದಲೇ ಆರಂಭ: ಡಾ.ಜಿ.ಪರಮೇಶ್ವರ

Share

ಬೆಳಗಾವಿ: ಬರ ಪರಿಹಾರ ಕಾರ್ಯವನ್ನು ತಕ್ಷಣದಿಂದಲೇ ಆರಂಭಿಸಲಾಗುವುದು. ಕೃಷಿ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು (ಆರ್‌ಡಿಪಿಆರ್) ಜಂಟಿಯಾಗಿ ಪರಿಹಾರ ಕಾರ್ಯಗಳ ರೂಪುರೇಷೆ ಸಿದ್ಧಪಡಿಸುತ್ತಿದ್ದು, ತಕ್ಷಣದಿಂದಲೇ ಕಾರ್ಯಾರಂಭಿಸಲು ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) 26ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರ ಪರಿಹಾರದ ಮೊದಲ ಕಂತಿನ ರೂಪದಲ್ಲಿ ಸದ್ಯಕ್ಕೆ ನೆರವು ನೀಡಲಾಗುತ್ತಿದೆ. ಇದು ಅಂತಿಮ ಪರಿಹಾರವಲ್ಲ. ತಕ್ಷಣವೇ ರೈತರಿಗೆ ಹಾಗೂ ಬರಪೀಡಿತ ಪ್ರದೇಶಗಳಿಗೆ ಯಾವುದಾದರೂ ಪರಿಹಾರ ಒದಗಿಸಬೇಕು ಎಂಬ ಉದ್ದೇಶದಿಂದ ಮೊದಲ ಕಂತನ್ನು ನೀಡಲಾಗುತ್ತಿದೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮೊದಲ ಕಂತಿನ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ. 101 ಬರಪೀಡಿತ ತಾಲೂಕುಗಳನ್ನು ಆಧರಿಸಿ ಸುಮಾರು ₹18 ಸಾವಿರ ಕೋಟಿ ನಷ್ಟವಾಗಿದ್ದು, ಮೊದಲ ಹಂತದಲ್ಲಿ ಸುಮಾರು ₹3,500 ಕೋಟಿ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರ ಎಷ್ಟು ನೆರವು ನೀಡುತ್ತದೆ ಎಂಬುದು ಅವರ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.

ಇದೇ ವೇಳೆ ಎರಡನೇ ಹಾಗೂ ಮೂರನೇ ಹಂತದ ಪರಿಹಾರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮನವಿಪತ್ರಗಳನ್ನು ಕೂಡಲೇ ಸಲ್ಲಿಸಲಾಗುವುದು. ಈಗಾಗಲೇ ಹೆಚ್ಚುವರಿಯಾಗಿ 77 ಅಂಶಗಳ ವರದಿ ಸಿದ್ಧವಾಗಿದ್ದು, ಅದನ್ನೂ ಕೇಂದ್ರಕ್ಕೆ ಸಲ್ಲಿಸಲಾಗುವುದು. ಮುಂದಿನ ಹಂತದಲ್ಲಿ ಮತ್ತೊಂದು 50 ಅಂಶಗಳ ವರದಿ ಸಿದ್ಧವಾಗಲಿದ್ದು, ಇವೆಲ್ಲವನ್ನೂ ಒಟ್ಟುಗೂಡಿಸಿ ಕೇಂದ್ರದ ಮುಂದೆ ರಾಜ್ಯದ ನಷ್ಟ ಹಾಗೂ ಪರಿಹಾರದ ಅಗತ್ಯವನ್ನು ಸಮಗ್ರವಾಗಿ ಮಂಡಿಸಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ತಾವು ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿದರು. ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗುವುದು. ವಿಪತ್ತು ನಿರ್ವಹಣೆಯ ಜವಾಬ್ದಾರಿ ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿರುವುದರಿಂದ ಅವರನ್ನೂ ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಲಾಗುವುದು. ಕೇಂದ್ರದಿಂದ ಎಷ್ಟು ನೆರವು ದೊರೆಯುತ್ತದೆ ಎಂಬುದರ ಮೇಲೆ ಮುಂದಿನ ಪರಿಹಾರ ಕ್ರಮಗಳು ಅವಲಂಬಿತವಾಗಿರುತ್ತವೆ ಎಂದು ಅವರು ಹೇಳಿದರು.

ಎನ್‌ಡಿಆರ್‌ಎಫ್ ಮಾರ್ಗಸೂಚಿ ಸಡಿಲಿಕೆಗೆ ನಿರಂತರ ಒತ್ತಡ:

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿಗಳನ್ನು ಬದಲಾಯಿಸಬೇಕು ಎಂಬ ಬೇಡಿಕೆಯನ್ನು ರಾಜ್ಯ ಸರ್ಕಾರ ನಿರಂತರವಾಗಿ ಕೇಂದ್ರದ ಮುಂದೆ ಇಡುತ್ತಿದೆ. ಈ ಸಂಬಂಧ ಈಗಾಗಲೇ ಸುಮಾರು 10ರಿಂದ 11 ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಬರೆಯಲಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯನವರು, ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ನಾನು ಕೂಡ ಮಾರ್ಗಸೂಚಿಗಳನ್ನು ಬದಲಾಯಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದರು.

ಪ್ರಸ್ತುತ ಇರುವ ಮಾರ್ಗಸೂಚಿಗಳನ್ನು ಬದಲಾಯಿಸಿದರೆ ರಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಬರವನ್ನು ಘೋಷಿಸಿ ಪರಿಹಾರ ಕೇಳಬಹುದು ಹಾಗೂ ಕೇಂದ್ರ ಸರ್ಕಾರ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ ಎಂಬ ಕಾರಣದಿಂದ ಕೇಂದ್ರ ಸರ್ಕಾರ ಮಾರ್ಗಸೂಚಿ ಬದಲಾವಣೆಗೆ ಹಿಂದೇಟು ಹಾಕುತ್ತಿರಬಹುದು ಎಂದು ಪರಮೇಶ್ವರ ಅಭಿಪ್ರಾಯಪಟ್ಟರು. ಆದರೆ, ರಾಜ್ಯದ ರೈತರು ಹಾಗೂ ಬರಪೀಡಿತ ಜನರಿಗೆ ತಕ್ಷಣ ಪರಿಹಾರ ದೊರೆಯಬೇಕಿರುವುದರಿಂದ ಕೇಂದ್ರದ ಮೇಲೆ ಒತ್ತಡ ಹೇರುವುದಾಗಿ ಅವರು ಹೇಳಿದರು.


Share

You cannot copy content of this page