ಸಮಗ್ರ ಸುದ್ದಿ

ಸ್ಥಳೀಯರ ಮನವಿಗೆ ಸ್ಪಂದನೆ: ತಾವರೆಕೆರೆ ಉದ್ಯಾನವನದಲ್ಲಿ 1 ಎಂಎಲ್‌ಡಿ ವಿಕೇಂದ್ರೀಕೃತ ಎಸ್‌ಟಿಪಿಗೆ ಜಲಮಂಡಳಿ ಪ್ರಸ್ತಾವನೆ

Share

ಬೆಂಗಳೂರು:ಸ್ಥಳೀಯ ನಿವಾಸಿಗಳು, ನಡಿಗೆದಾರರು ಹಾಗೂ ಉದ್ಯಾನವನ ಬಳಕೆದಾರರಿಂದ ಬಂದ ನಿರಂತರ ಮನವಿಗಳಿಗೆ ಸ್ಪಂದಿಸಿರುವ ಬೆಂಗಳೂರು ಜಲಮಂಡಳಿ, ತಾವರೆಕೆರೆ ಉದ್ಯಾನವನದ ಸಮೀಪ 1 ಎಂಎಲ್‌ಡಿ ಸಾಮರ್ಥ್ಯದ ವಿಕೇಂದ್ರೀಕೃತ ಒಳಚರಂಡಿ ನೀರು ಸಂಸ್ಕರಣಾ ಘಟಕವನ್ನು (ಎಸ್‌ಟಿಪಿ) ಸ್ಥಾಪಿಸಲು ಮುಂದಾಗಿದೆ.

ತಾವರೆಕೆರೆ ಉದ್ಯಾನವನದ ಸಮೀಪದ ಮಳೆನೀರು ಕಾಲುವೆಯಲ್ಲಿ ಗಣನೀಯ ಪ್ರಮಾಣದ ಒಳಚರಂಡಿ ನೀರು ಹರಿಯುತ್ತಿದೆ. ಇದರಿಂದ ದುರ್ವಾಸನೆ, ನೊಣಗಳ ಕಾಟ ಮತ್ತು ಅನೈರ್ಮಲ್ಯ ಉಂಟಾಗುತ್ತಿರುವ ಕುರಿತು ಸ್ಥಳೀಯ ನಿವಾಸಿಗಳು ಹಾಗೂ ಉದ್ಯಾನವನ ಬಳಕೆದಾರರಿಂದ ಮನವಿಗಳು ಬಂದಿವೆ. ಈ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಕಲ್ಪಿಸುವ ಉದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದೆ.

ಪ್ರಸ್ತಾವಿತ ಯೋಜನೆಯಡಿ ಕಾಲುವೆಯಲ್ಲಿ ಹರಿಯುವ ಒಳಚರಂಡಿ ನೀರನ್ನು ತಡೆದು, 1 ಎಂಎಲ್‌ಡಿ ಎಸ್‌ಟಿಪಿಯಲ್ಲಿ ಕೆಎಸ್‌ಪಿಸಿಬಿ ನಿಗದಿಪಡಿಸಿರುವ ಗುಣಮಟ್ಟಕ್ಕೆ ಅನುಗುಣವಾಗಿ ಸಂಸ್ಕರಿಸಲಾಗುವುದು. ಇದರಿಂದ ಕಾಲುವೆಯಲ್ಲಿ ಹರಿಯುವ ತ್ಯಾಜ್ಯನೀರಿನ ಪ್ರಮಾಣ ಕಡಿಮೆಯಾಗಿ, ಉದ್ಯಾನವನ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನೈರ್ಮಲ್ಯ ಹಾಗೂ ಪರಿಸರದ ಗುಣಮಟ್ಟ ಸುಧಾರಿಸಲಿದೆ.

ಉದ್ಯಾನವನದ ಗಿಡಗಳು ಮತ್ತು ಹಸಿರು ಪ್ರದೇಶಗಳ ನಿರ್ವಹಣೆಗೆ ಪ್ರಸ್ತುತ ಕುಡಿಯುವ ನೀರನ್ನು ಬಳಸಲಾಗುತ್ತಿದೆ. ಪ್ರಸ್ತಾವಿತ ಘಟಕದಿಂದ ಲಭ್ಯವಾಗುವ ಸಂಸ್ಕರಿಸಿದ ನೀರನ್ನು ತೋಟಗಾರಿಕೆ ಮತ್ತು ಹಸಿರು ಪ್ರದೇಶಗಳ ನಿರ್ವಹಣೆಗೆ ಬಳಸುವ ಮೂಲಕ ಕುಡಿಯುವ ನೀರನ್ನು ಉಳಿಸುವ ಉದ್ದೇಶ ಹೊಂದಲಾಗಿದೆ.

ಹೆಚ್ಚುವರಿ ಸಂಸ್ಕರಿಸಿದ ನೀರನ್ನು ನಿರ್ಮಾಣ ಕಾಮಗಾರಿಗಳು, ತೋಟಗಾರಿಕೆ, ರಸ್ತೆ ಮತ್ತು ಆವರಣಗಳ ಸ್ವಚ್ಛತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ವಿವಿಧ ಕುಡಿಯೇತರ ಅಗತ್ಯಗಳಿಗೆ ಬಳಸಲು ಉದ್ದೇಶಿಸಲಾಗಿದೆ.

ಯೋಜನೆ ಅನುಷ್ಠಾನಗೊಂಡಲ್ಲಿ, ತಾವರೆಕೆರೆ ಉದ್ಯಾನವನವನ್ನು ನಗರ ತ್ಯಾಜ್ಯನೀರು ಸಂಸ್ಕರಣೆ, ಜಲಸಂರಕ್ಷಣೆ, ಪರಿಸರ ಪುನರುಜ್ಜೀವನ ಮತ್ತು ಸಂಸ್ಕರಿಸಿದ ನೀರಿನ ಮರುಬಳಕೆಯ ಸ್ವಾವಲಂಬಿ ಪರಿಸರ ಮಾದರಿಯಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ.

ಯೋಜನೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪ್ರಸ್ತುತ ಪರಿಶೀಲನೆ ಮತ್ತು ಮೌಲ್ಯಮಾಪನ ಹಂತದಲ್ಲಿದೆ. ಜಾರಿಯಲ್ಲಿರುವ ನಿಯಮಗಳು ಮತ್ತು ಟೆಂಡರ್ ಷರತ್ತುಗಳಿಗೆ ಅನುಗುಣವಾಗಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಹಾಗೂ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಜಲಮಂಡಳಿ ತಿಳಿಸಿದೆ.

ಯೋಜನೆಯ ಪ್ರಮುಖ ಪ್ರಯೋಜನಗಳು:

  • ಸ್ಥಳೀಯ ನಿವಾಸಿಗಳು ಮತ್ತು ಉದ್ಯಾನವನ ಬಳಕೆದಾರರಿಗೆ ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ
  • ಕಾಲುವೆಯಲ್ಲಿ ಹರಿಯುವ ಒಳಚರಂಡಿ ನೀರಿನ ತಡೆ ಮತ್ತು ಸಂಸ್ಕರಣೆ
  • ದುರ್ವಾಸನೆ, ನೊಣಗಳ ಕಾಟ ಮತ್ತು ಅನೈರ್ಮಲ್ಯದ ನಿಯಂತ್ರಣ
  • ಉದ್ಯಾನವನ ಮತ್ತು ಸುತ್ತಮುತ್ತಲಿನ ಪರಿಸರದ ಪುನರುಜ್ಜೀವನ
  • ತೋಟಗಾರಿಕೆಗೆ ಬಳಸಲಾಗುತ್ತಿರುವ ಕುಡಿಯುವ ನೀರಿನ ಉಳಿತಾಯ
  • ಸಂಸ್ಕರಿಸಿದ ನೀರಿನ ಪರಿಣಾಮಕಾರಿ ಮರುಬಳಕೆ
  • ಕಾಲುವೆಗಳು ಮತ್ತು ಜಲಮೂಲಗಳಿಗೆ ಸೇರುವ ತ್ಯಾಜ್ಯನೀರಿನ ಪ್ರಮಾಣ ಕಡಿತ

Share

You cannot copy content of this page