ಸಮಗ್ರ ಸುದ್ದಿ

ಹೆಚ್ಚುವರಿಯಾಗಿ 1,117 ಸಹಾಯಕ ಚುನಾವಣಾ ನೋಂದಣಾಧಿಕಾರಿಗಳ ನೇಮಕ: ಶಿಲ್ಪಾ ನಾಗ್

Share

ಬೆಂಗಳೂರು:ಚುನಾವಣೆ ಪ್ರಕ್ರಿಯೆಯು ಯಾವುದೇ ಸಮಸ್ಯೆಗಳಿಲ್ಲದೆ ಸುಗಮವಾಗಿ ನಡೆಯುವಂತೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಹೆಚ್ಚುವರಿಯಾಗಿ 1,117 ಸಹಾಯಕ ಚುನಾವಣಾ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಶಿಲ್ಪಾ ನಾಗ್ ಅವರು ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಸಂಬಂಧ ಹಕ್ಕು ಮತ್ತು ಆಕ್ಷೇಪಣೆಗಳ ಕುರಿತು ಇಂದು ನಡೆದ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ವ್ಯಾಪ್ತಿಯಲ್ಲಿ ಒಟ್ಟು 814 ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಹೆಚ್ಚುವರಿಯಾಗಿ 1,117 ಸಹಾಯಕ ಚುನಾವಣಾ ನೋಂದಣಾಧಿಕಾರಿಗಳನ್ನು ನೇಮಕ ಮಾಡುವುದರೊಂದಿಗೆ ಒಟ್ಟು 1,193 ಸಹಾಯಕ ಚುನಾವಣಾ ನೋಂದಣಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ನೋಟಿಸ್ ವಿಚಾರಣೆ:

ನೋಟಿಸ್ ವಿಚಾರಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಭಾರತ ಚುನಾವಣಾ ಆಯೋಗವು ಪ್ರಮಾಣಿತ ಕಾರ್ಯವಿಧಾನವನ್ನು ರೂಪಿಸಿದೆ. ಎಸ್‌ಐಆರ್‌ ಪ್ರಕ್ರಿಯೆಯಲ್ಲಿ Unmapped ಅಥವಾ Logical Discrepancies ಕಾರಣದಿಂದ ನೋಟಿಸ್ ನೀಡಲಾಗಿದ್ದಲ್ಲಿ ಅಥವಾ ನಮೂನೆ-6 ಮತ್ತು 7ಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಅಗತ್ಯವಿದ್ದಲ್ಲಿ, ಇಆರ್‌ಒ ಅಥವಾ ಬಿಎಲ್‌ಒಗಳು ಸಂಬಂಧಪಟ್ಟ ಮತದಾರರ ಮನೆಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಪಡೆದು, ಪರಿಶೀಲಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ. ಆದ್ದರಿಂದ ಅಂತಹ ಮತದಾರರು ವಿಚಾರಣೆಗೆ ಖುದ್ದಾಗಿ ಹಾಜರಾಗುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದರು.

ವಿಶೇಷ ಪ್ರಕರಣಗಳಲ್ಲಿ ಆನಲೈನ್ ಮೂಲಕ ನೋಟಿಸ್ ಹಿಯರಿಂಗ್

ಅಲ್ಲದೇ, ವಿಶೇಷ ಪ್ರಕರಣಗಳಲ್ಲಿ ಚುನಾವಣಾ ನೋಂದಣಾಧಿಕಾರಿಗಳ ನಿರ್ಧಾರದಂತೆ ಆನ್‌ಲೈನ್ ಮೂಲಕ ವಿಚಾರಣಾ ಪ್ರಕ್ರಿಯೆಯನ್ನು ನಡೆಸಲಾಗುವುದು.

ಜಿಬಿಎ ವ್ಯಾಪ್ತಿಯಲ್ಲಿ 24 ಲಕ್ಷಕ್ಕೂ ಅಧಿಕ ನೋಟಿಸ್‌ಗಳು:

ಜಿಬಿಎ ವ್ಯಾಪ್ತಿಯಲ್ಲಿ 56 ಲಕ್ಷಕ್ಕೂ ಅಧಿಕ ಮತದಾರರಿದ್ದು, 24 ಲಕ್ಷಕ್ಕೂ ಅಧಿಕ ನೋಟಿಸ್‌ಗಳನ್ನು ಜನರೇಟ್ ಮಾಡಲಾಗಿದೆ. ಈಗಾಗಲೇ ಶೇ.100ರಷ್ಟು ನೋಟಿಸ್‌ಗಳನ್ನು ವಿತರಿಸಲಾಗಿದ್ದು, ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.

ಈವರೆಗೆ ಒಟ್ಟು 3,70,329 ನೋಟಿಸ್‌ಗಳ ವಿಚಾರಣೆ ಬಾಕಿ ಇದ್ದು, ನಿಗದಿತ ಅವಧಿಯೊಳಗೆ ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮೈಕ್ರೋ ಪ್ಲಾನಿಂಗ್ ಮಾಡಲಾಗಿದೆ ಎಂದು ಅವರು ತಿಳಿಸಿದರು.

ನಮೂನೆ-6, 7 ಮತ್ತು 8ರ ವಿಲೇವಾರಿ:

ನಮೂನೆ-6, 7 ಮತ್ತು 8ಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 5,42,893 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 1,02,712 ಅರ್ಜಿಗಳನ್ನು ಅಂಗೀಕರಿಸಲಾಗಿದ್ದು, 3,89,698 ಅರ್ಜಿಗಳು ಬಾಕಿ ಇವೆ. ಭಾರತ ಚುನಾವಣಾ ಆಯೋಗದ ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು.

ವಿಶೇಷ ಅಭಿಯಾನ:

18 ವರ್ಷ ಪೂರ್ಣಗೊಂಡಿರುವ ಮೊದಲ ಬಾರಿಗೆ ಮತದಾರರಾಗಿ ನೋಂದಾಯಿಸಿಕೊಳ್ಳಲು ಅರ್ಹರಾಗಿರುವವರು ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದಿರುವ ಅರ್ಹ ವ್ಯಕ್ತಿಗಳಿಗೆ ನಮೂನೆ-6 ಅನ್ನು ಒದಗಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಭಾರತ ಚುನಾವಣಾ ಆಯೋಗವು ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಂಡ ನಂತರ ವಿಶೇಷ ಅಭಿಯಾನ ಹಾಗೂ ಶಿಬಿರಗಳನ್ನು ಆಯೋಜಿಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವೇಳಾಪಟ್ಟಿ:

  • ಕರಡು ಮತದಾರರ ಪಟ್ಟಿ ಪ್ರಕಟಣೆ: 24.08.2026
  • ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ: 24.08.2026 ರಿಂದ 23.09.2026
  • ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿ ವಿಲೇವಾರಿ: 24.08.2026 ರಿಂದ 22.10.2026
  • ಅಂತಿಮ ಮತದಾರರ ಪಟ್ಟಿ ಪ್ರಕಟಣೆ: 27.10.2026

ಈ ವೇಳೆ ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಕೆ.ಎನ್ ರಮೇಶ್, ಸಹಾಯಕ ಆಯುಕ್ತರಾದ ವಿಜಯ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.


Share

You cannot copy content of this page