ಸಮಗ್ರ ಸುದ್ದಿ

ಕಳೆದ ಎರಡು ತಿಂಗಳಲ್ಲಿ 709 ನಿವೇಶನಗಳು ಸ್ವಚ್ಛ; ಆಯುಕ್ತ ಕೆ.ಎನ್. ರಮೇಶ್

Share

ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾನ್ಯ ಬೆಂಗಳೂರು ಅಭಿವೃದ್ಧಿ ಸಚಿವರಾದ * ಕೃಷ್ಣಬೈರೇಗೌಡ ರವರ ನಿರ್ದೇಶನದಂತೆ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನವನ್ನು ಕಳೆದ ಎರಡು ತಿಂಗಳಿಂದ ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ಅವರು ತಿಳಿಸಿದರು.

ನಗರ ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಆದ್ಯತೆ

ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಕಸ ಹಾಗೂ ತ್ಯಾಜ್ಯ ಸಂಗ್ರಹವಾಗಿ ಬ್ಲಾಕ್‌ಸ್ಪಾಟ್‌ಗಳಾಗಿ ಪರಿವರ್ತನೆಗೊಳ್ಳುವುದನ್ನು ತಪ್ಪಿಸುವುದು ಪಾಲಿಕೆಯ ಪ್ರಮುಖ ಆದ್ಯತೆಯಾಗಿದೆ. ಇಂತಹ ಸ್ಥಳಗಳಲ್ಲಿ ಸೊಳ್ಳೆ, ವಿಷಜಂತುಗಳು ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಡೆಯಲು ನಿವೇಶನಗಳ ಮಾಲೀಕರಿಗೆ ಸ್ವಚ್ಛತೆಗೆ ಸೂಚನೆ ನೀಡಲಾಗುತ್ತಿದೆ. ಸ್ವಚ್ಛತೆ ಕಾಪಾಡದ ಮಾಲೀಕರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.

1,242 ಖಾಲಿ ನಿವೇಶನಗಳ ಪೈಕಿ 709 ನಿವೇಶನಗಳು ಸ್ವಚ್ಛ

ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದಡಿ ಆಗಸ್ಟ್ 01 ರಿಂದ ಇಲ್ಲಿಯ ವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,242 ಅಸ್ವಚ್ಚ ಖಾಲಿ ನಿವೇಶನಗಳನ್ನು ಗುರುತಿಸಲಾಗಿದೆ. ಅಭಿಯಾನದ ಅಂಗವಾಗಿ ನಿವೇಶನ ಮಾಲೀಕರಿಂದಲೇ 668 ನಿವೇಶನಗಳನ್ನು ಸ್ವಚ್ಛಗೊಳಿಸಿದ್ದು, ಪಾಲಿಕೆಯ ವತಿಯಿಂದ 41 ನಿವೇಶನಗಳನ್ನು ಈವರೆಗೆ ಸ್ವಚ್ಛಗೊಳಿಸಲಾಗಿದೆ (ಒಟ್ಟಾರೆ 709 ಸ್ವಚ್ಛ). ಉಳಿದ 533 ನಿವೇಶನಗಳ ಸ್ವಚ್ಛತಾ ಕಾರ್ಯ ಬಾಕಿ ಇರುತ್ತದೆ.

ನಿಯಮ ಉಲ್ಲಂಘಿಸಿದ 372 ಮಾಲೀಕರಿಗೆ ನೋಟಿಸ್

ಖಾಲಿ ನಿವೇಶನಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ 533 ಖಾಲಿ ನಿವೇಶನಗಳ ಮಾಲೀಕರ ವಿರುದ್ಧ ಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಈವರೆಗೆ ಒಟ್ಟು 372 ನಿವೇಶನ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ವಿವಿಧ ವಿಭಾಗಗಳ ಪ್ರಗತಿ ವಿವರ:

ಬೆಂಗಳೂರು ದಕ್ಷಿಣ ವಿಭಾಗ: ಒಟ್ಟು 518 ನಿವೇಶನಗಳನ್ನು ಗುರುತಿಸಲಾಗಿದ್ದು, 305 ನಿವೇಶನಗಳನ್ನು ಮಾಲೀಕರು ಹಾಗೂ 13 ನಿವೇಶನಗಳನ್ನು ಪಾಲಿಕೆ ಸ್ವಚ್ಛಗೊಳಿಸಿದೆ. ಬಾಕಿ ಉಳಿದಿರುವ 200 ನಿವೇಶನಗಳ ಸ್ವಚ್ಛತೆಗೆ ಸೂಚಿಸಲಾಗಿದ್ದು, 93 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ಬೊಮ್ಮನಹಳ್ಳಿ ವಿಭಾಗ: ಒಟ್ಟು 498 ನಿವೇಶನಗಳಿದ್ದು, ಈವರೆಗೆ 276 ನಿವೇಶನಗಳು ಮಾಲೀಕರಿಂದ ಹಾಗೂ 1 ನಿವೇಶನ ಪಾಲಿಕೆಯಿಂದ ಸ್ವಚ್ಛಗೊಂಡಿವೆ. ಬಾಕಿ 221 ನಿವೇಶನಗಳಿದ್ದು, ನಿಯಮ ಉಲ್ಲಂಘಿಸಿದ 140 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ಬಿಟಿಎಂ ವಿಭಾಗ: ಒಟ್ಟು 111 ನಿವೇಶನಗಳ ಪೈಕಿ ಮಾಲೀಕರಿಂದ 23 ಮತ್ತು ಪಾಲಿಕೆಯಿಂದ 5 ನಿವೇಶನಗಳು ಸ್ವಚ್ಛವಾಗಿವೆ. ಬಾಕಿ ಉಳಿದಿರುವ 83 ನಿವೇಶನಗಳಿಗೆ ಸಂಬಂಧಿಸಿದಂತೆ 62 ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ.

ಪದ್ಮನಾಭನಗರ ವಿಭಾಗ: ಒಟ್ಟು 62 ನಿವೇಶನಗಳ ಪೈಕಿ 38 ನಿವೇಶನಗಳನ್ನು ಮಾಲೀಕರು, 18 ನಿವೇಶನಗಳನ್ನು ಪಾಲಿಕೆ ಸಿಬ್ಬಂದಿ ಸ್ವಚ್ಛಗೊಳಿಸಿದ್ದು, ಕೇವಲ 6 ನಿವೇಶನಗಳು ಬಾಕಿ ಇವೆ. ಇಲ್ಲಿ 35 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ಜಯನಗರ ವಿಭಾಗ: ಒಟ್ಟು 53 ನಿವೇಶನಗಳ ಪೈಕಿ ಮಾಲೀಕರಿಂದ 26 ಹಾಗೂ ಪಾಲಿಕೆಯಿಂದ 4 ನಿವೇಶನಗಳು ಸ್ವಚ್ಛವಾಗಿದ್ದು, 23 ನಿವೇಶನಗಳು ಬಾಕಿ ಉಳಿದಿವೆ. ಈ ಸಂಬಂಧ 42 ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ನಿವೇಶನ ಮಾಲೀಕರಲ್ಲಿ ಆಯುಕ್ತರ ಮನವಿ

ಖಾಲಿ ನಿವೇಶನಗಳ ಮಾಲೀಕರು ತಮ್ಮ ಜಾಗದಲ್ಲಿ ಕಸ-ತ್ಯಾಜ್ಯ ಬೀಳದಂತೆ ಸೂಕ್ತ ತಂತಿ ಬೇಲಿ ಅಳವಡಿಸಿ, ನಿರಂತರವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೆ, ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಪಾಲಿಕೆಯೊಂದಿಗೆ ಕೈಜೋಡಿಸಬೇಕೆಂದು ಆಯುಕ್ತರಾದ ಕೆ. ಎನ್. ರಮೇಶ್ ಮನವಿ ಮಾಡಿದ್ದಾರೆ.


Share

You cannot copy content of this page