ಬೆಂಗಳೂರು:ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಿ, ಸೆಂಟ್ರಲೈಸ್‌ಡ್ ಕಂಟ್ರೋಲ್ ಮಾನಿಟರಿಂಗ್ ಸಿಸ್ಟಮ್ (ಸಿಸಿಎಂಎಸ್) ಅಳವಡಿಸದಿರುವ ಗುತ್ತಿಗೆದಾರರಿಗೆ ನಿಯಮಾನುಸಾರ ದಂಡ ವಿಧಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯಲ್ಲಿ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವ ಕುರಿತಂತೆ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪೂರ್ವ ನಗರ ಪಾಲಿಕೆಯನ್ನು ಹೊರತುಪಡಿಸಿ ಉಳಿದ 4 ನಗರ ಪಾಲಿಕೆಗಳಲ್ಲಿ ಈಗಾಗಲೇ 4.5 ಲಕ್ಷ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಸಿಸಿಎಂಎಸ್ ಅಳವಡಿಸದಿರುವ ಪ್ರದೇಶಗಳಲ್ಲಿ ಕೂಡಲೇ ಸಿಸಿಎಂಎಸ್ ಅಳವಡಿಸುವಂತೆ ನಿರ್ದೇಶನ ನೀಡಿದರು.
ನಗರದಲ್ಲಿ ಎಲ್‌ಇಡಿ ಬೀದಿ ದೀಪಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ದುರಸ್ತಿಯಾಗಿರುವ ಬೀದಿ ದೀಪಗಳು ಹಾಗೂ ಸಹಾಯ ತಂತ್ರಾಂಶದಲ್ಲಿ ದಾಖಲಾಗುವ ದೂರುಗಳನ್ನು ತ್ವರಿತವಾಗಿ ಪರಿಹರಿಸಬೇಕು. ಸರಿಯಾಗಿ ಕಾರ್ಯನಿರ್ವಹಿಸದ ಗುತ್ತಿಗೆದಾರರಿಗೆ ನಿಯಮಾನುಸಾರ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರ‍್ಯಾಂಡಮ್ ಚೆಕ್ ಮಾಡಿ:
ಆಯಾ ನಗರ ಪಾಲಿಕೆಗಳಲ್ಲಿ ಎಲ್‌ಇಡಿ ಬೀದಿ ದೀಪಗಳು ಹಾಗೂ ಸಿಸಿಎಂಎಸ್‌ಗಳನ್ನು ಅಳವಡಿಸಿರುವ ಕುರಿತು ವಿಭಾಗವಾರು ಅಧಿಕಾರಿಗಳ ತಂಡಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಬಳಿಕ ರ‍್ಯಾಂಡಮ್ ಚೆಕ್ ನಡೆಸಿ, ಎಲ್‌ಇಡಿ ಬೀದಿ ದೀಪಗಳು ಹಾಗೂ ಸಿಸಿಎಂಎಸ್‌ಗಳನ್ನು ನಿಗದಿತ ಮಾನದಂಡದಂತೆ ಸರಿಯಾಗಿ ಅಳವಡಿಸಲಾಗಿದೆಯೇ ಎಂಬುದರ ಕುರಿತು ನಿಖರವಾದ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.
ಪೂರ್ಣಗೊಳಿಸಿದ ವರದಿ ನೀಡಿ:
ನಗರದಲ್ಲಿ ಎಲ್‌ಇಡಿ ಬೀದಿ ದೀಪಗಳು ಹಾಗೂ ಸಿಸಿಎಂಎಸ್ ಅಳವಡಿಸಿರುವುದಕ್ಕೆ ಸಂಬಂಧಿಸಿದಂತೆ ಆಯಾ ನಗರ ಪಾಲಿಕೆವಾರು ಆಯುಕ್ತರ ಸಹಿಯೊಂದಿಗೆ ಪೂರ್ಣಗೊಳಿಸಿದ ವರದಿಯನ್ನು (Completion Report) ತ್ವರಿತವಾಗಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಪ್ರತಿನಿತ್ಯ ವರದಿ ನೀಡಿ:
ನಗರದಲ್ಲಿ ಈವರೆಗೆ 4.5 ಲಕ್ಷ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ಒಟ್ಟು 22,677 ಸಿಸಿಎಂಎಸ್‌ಗಳನ್ನು ಅಳವಡಿಸಬೇಕಿದೆ. ಈ ಪೈಕಿ ಇಲ್ಲಿಯವರೆಗೆ 11,275 ಸಿಸಿಎಂಎಸ್‌ಗಳನ್ನು ಮಾತ್ರ ಅಳವಡಿಸಲಾಗಿದೆ. ಬಾಕಿ ಇರುವ ಸಿಸಿಎಂಎಸ್‌ಗಳನ್ನು ತ್ವರಿತಗತಿಯಲ್ಲಿ ಅಳವಡಿಸಬೇಕು. ಈ ಸಂಬಂಧ ಪ್ರತಿನಿತ್ಯ ಮುಖ್ಯ ಆಯುಕ್ತರ ಕಚೇರಿಗೆ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೆಚ್ಚಿನ ತಂಡಗಳನ್ನು ನಿಯೋಜಿಸಿ:
ನಗರದಲ್ಲಿ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಿದ ನಂತರ ಅವುಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕಾಗುತ್ತದೆ. ಜೊತೆಗೆ, ದುರಸ್ತಿಯಾಗಿರುವ ಬೀದಿ ದೀಪಗಳ ಕುರಿತು ನಾಗರಿಕರು ಸಹಾಯ 2.0 ತಂತ್ರಾಂಶದಲ್ಲಿ ದೂರುಗಳನ್ನು ದಾಖಲಿಸುತ್ತಾರೆ. ಈ ಸಂಬಂಧ ಗುತ್ತಿಗೆದಾರರು ನಾಗರಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ಸಲುವಾಗಿ ಹೆಚ್ಚಿನ ತಂಡಗಳನ್ನು ನಿಯೋಜಿಸಿಕೊಂಡು, ದುರಸ್ತಿ ಕಾರ್ಯವನ್ನು ತಕ್ಷಣ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಆಯುಕ್ತರಾದ ವೆಂಕಟಾ ಚಲಪತಿ, ಮುಖ್ಯ ಅಭಿಯಂತರರಾದ ಆನಂದ್, ಕಾರ್ಯಪಾಲಕ ಅಭಿಯಂತರರು, ಗುತ್ತಿಗೆದಾರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
