ಸಮಗ್ರ ಸುದ್ದಿ

ರೋರಿಕ್–ದೇವಿಕಾ ರಾಣಿ ಎಸ್ಟೇಟ್‌ನಲ್ಲಿ ಕೈಗೊಳ್ಳಲಾಗುತ್ತಿರುವ ಎಕೋ ಟೂರಿಸಂ ಕಾಮಗಾರಿಗಳನ್ನು ಚುರುಕುಗೊಳಿಸಿ: ಸಚಿವ ಕೆ.ಜೆ. ಜಾರ್ಜ್

Share

ಬೆಂಗಳೂರು: ರೋರಿಕ್–ದೇವಿಕಾ ರಾಣಿ ಎಸ್ಟೇಟ್‌ನಲ್ಲಿ ಎಕೋ ಟೂರಿಸಂ ಅಭಿವೃದ್ಧಿಗೆ ಸಂಬಂಧಿಸಿದಂತೆ ನ್ಯಾಯಾಲಯದ ನಿರ್ದೇಶನದ ಮಿತಿಯಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಂದು ರೋರಿಕ್–ದೇವಿಕಾ ರಾಣಿ ಎಸ್ಟೇಟ್‌ಗೆ ಭೇಟಿ ನೀಡಿದ ಸಚಿವರು, ಅಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿ, ಅನುಮತಿಸಲಾದ ಅಭಿವೃದ್ಧಿ ಕಾರ್ಯಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚಿಸಿದರು.

ಎಸ್ಟೇಟ್‌ನ ನೈಸರ್ಗಿಕ ಪರಿಸರ, ಹಸಿರು ವಲಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿಕೊಂಡೇ ಪ್ರವಾಸಿಗರಿಗೆ ಅಗತ್ಯ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಚಿವರು ತಿಳಿಸಿದರು.

“ರೋರಿಕ್–ದೇವಿಕಾ ರಾಣಿ ಎಸ್ಟೇಟ್ ಕಲೆ, ಸಂಸ್ಕೃತಿ ಮತ್ತು ನೈಸರ್ಗಿಕ ಪರಂಪರೆಯ ವಿಶಿಷ್ಟ ತಾಣವಾಗಿದೆ. ಇಲ್ಲಿ ಕೈಗೊಳ್ಳುವ ಪ್ರತಿಯೊಂದು ಕಾಮಗಾರಿಯೂ ನ್ಯಾಯಾಲಯದ ನಿರ್ದೇಶನಗಳು ಮತ್ತು ಪರಿಸರ ಸಂರಕ್ಷಣಾ ಮಾನದಂಡಗಳಿಗೆ ಅನುಗುಣವಾಗಿರಬೇಕು. ಅನುಮತಿಸಲಾದ ಕಾಮಗಾರಿಗಳನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಿ, ಈ ತಾಣವನ್ನು ಸಂರಕ್ಷಣೆ ಆಧಾರಿತ ಎಕೋ ಟೂರಿಸಂ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ,” ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ರೋರಿಕ್–ದೇವಿಕಾ ರಾಣಿ ಎಸ್ಟೇಟ್‌ನ ಅಭಿವೃದ್ಧಿಯನ್ನು ಕೇವಲ ಮೂಲಸೌಕರ್ಯ ಕಾಮಗಾರಿಯಾಗಿ ನೋಡುತ್ತಿಲ್ಲ. ಇಲ್ಲಿನ ಪರಿಸರ, ಪರಂಪರೆ ಮತ್ತು ಕಲಾತ್ಮಕ ಮಹತ್ವವನ್ನು ಕಾಪಾಡಿಕೊಂಡೇ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಸಮತೋಲನದ ಮಾದರಿಯನ್ನು ರೂಪಿಸಲಾಗುತ್ತಿದೆ. ನ್ಯಾಯಾಲಯ ಅನುಮತಿಸಿರುವ ಕಾಮಗಾರಿಗಳನ್ನು ಆದ್ಯತೆ ಆಧಾರದಲ್ಲಿ ಕೈಗೆತ್ತಿಕೊಂಡು, ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಮುಂದಿನ ಹಂತಗಳನ್ನು ಯೋಜಿಸಲಾಗುವುದು,” ಎಂದರು.

ಸಚಿವರು ಕಾಮಗಾರಿಗಳ ಪ್ರಗತಿ, ಪ್ರವಾಸಿಗರ ಮೂಲಸೌಲಭ್ಯ, ಪರಿಸರ ಸಂರಕ್ಷಣೆ ಹಾಗೂ ಯೋಜನೆಯ ಮುಂದಿನ ಹಂತಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಶಿವಪ್ರಸಾದ್ ಪಿ.ಆರ್. ಹಾಗೂ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶಿವರಾಮ್ ಬಾಬು ಎಂ., ಐಎಫ್‌ಎಸ್ ಸೇರಿದಂತೆ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page