ಚಿಕ್ಕಮಗಳೂರು: ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲು ಪೂರ್ಣಗೊಂಡಿದ್ದು, ನಾಳೆಯೊಳಗೆ ಪ್ರಾಥಮಿಕ ಕರಡು ಅಧಿಸೂಚನೆ ಹೊರಬೀಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲಿಗೆ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ನಮ್ಮ ಸರ್ಕಾರ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಬದ್ಧವಾಗಿದ್ದು, ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಪ್ರಾಥಮಿಕ ಕರಡು ಅಧಿಸೂಚನೆ ಹೊರಡಿಸಿದ ತರುವಾಯ ಆಕ್ಷೇಪಣೆ ಸಲ್ಲಿಕೆಗೆ 10 ದಿನಗಳ ಕಾಲಾವಕಾಶ ನೀಡಲಾಗುವುದು. ನಂತರ ರಾಜ್ಯ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಚುನಾವಣೆ ನಡೆಸುವ ಜವಾಬ್ದಾರಿ ಆಯೋಗ ನಿರ್ವಹಿಸುತ್ತದೆ ಎಂದರು.
ವರ್ಷಾಂತ್ಯದೊಳಗೆ ಜಿ.ಪಂ., ತಾಪಂ ಚುನಾವಣೆ ಖಚಿತವಾಗಿ ನಡೆಯುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಎಸ್.ಐ.ಆರ್. ಪ್ರಕ್ರಿಯೆ ನಡೆಯುತ್ತಿದ್ದು, ಅಂತಿಮ ಮತದಾರರ ಪಟ್ಟಿಯನ್ನು ನೀಡಲು ಕೇಂದ್ರ ಚುನಾವಣಾ ಆಯೋಗ ವಿಳಂಬ ಮಾಡಿದರೆ, ಜನವರಿ ತಿಂಗಳಲ್ಲಿ ಚುನಾವಣೆ ಆಗಬಹುದು ಎನಿಸುತ್ತದೆ ಎಂದು ತಿಳಿಸಿದರು.
