ಸಮಗ್ರ ಸುದ್ದಿ

ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಬರ ಪರಿಶೀಲನಾ ನಡೆಸಿದ ಡಿಸಿಎಂ ಡಾ.ಜಿ.ಪರಮೇಶ್ವರ್| ರೈತರು ಹಾಗೂ ಜನಸಾಮಾನ್ಯರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ

Share

ಕೊಪ್ಪಳ:ರಾಜ್ಯದಲ್ಲಿ ಪ್ರಸಕ್ತ ಸಾಲಿನ ಬರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ರೈತರು ಹಾಗೂ ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬರ ನಿರ್ವಹಣೆಯನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬಾರದು. ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಉದ್ಯೋಗ ಹಾಗೂ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಬರ ಪರಿಸ್ಥಿತಿ ಹಾಗೂ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ರಾಯಚೂರು ಜಿಲ್ಲೆಯ ಮಳೆ ಕೊರತೆ, ಬೆಳೆ ಹಾನಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಬೆಳೆ ವಿಮೆ, ಉದ್ಯೋಗ ಸೃಷ್ಟಿ, ಆರೋಗ್ಯ ಮತ್ತು ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಬರ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಸರ್ಕಾರ ಈಗಾಗಲೇ ಹಲವು ಹಂತಗಳಲ್ಲಿ ಪರಿಶೀಲನಾ ಸಭೆಗಳನ್ನು ನಡೆಸಿದೆ. ಬೆಂಗಳೂರು, ಬೆಳಗಾವಿ ಹಾಗೂ ಕಲಬುರಗಿ ಕಂದಾಯ ವಿಭಾಗಗಳ ಪರಿಶೀಲನಾ ಸಭೆಗಳು ಪೂರ್ಣಗೊಂಡಿವೆ. ಬೆಳಗಾವಿ ವಿಭಾಗದ ಜೊತೆಗೆ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಬರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದ್ದೇನೆ. ಸ್ಥಳ ಪರಿಶೀಲನೆಯ ಮೂಲಕ ರೈತರ ಸಂಕಷ್ಟವನ್ನು ಅರಿತುಕೊಂಡಿದ್ದೇನೆ ಎಂದು ತಿಳಿಸಿದರು.

ರಾಯಚೂರಿನಲ್ಲಿ ಶೇ.49ರಷ್ಟು ಮಳೆ ಕೊರತೆ; 2.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ

ರಾಯಚೂರು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.49ರಷ್ಟು ಮಳೆ ಕೊರತೆಯಾಗಿದೆ. ಸಿಂಧನೂರು ತಾಲೂಕಿನಲ್ಲಿ ಶೇ.62, ದೇವದುರ್ಗದಲ್ಲಿ ಶೇ.56 ಹಾಗೂ ಮಸ್ಕಿಯಲ್ಲಿ ಶೇ.60ರಷ್ಟು ಮಳೆ ಕೊರತೆ ದಾಖಲಾಗಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 5,72,375 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಈ ಪೈಕಿ 4,82,498 ಹೆಕ್ಟೇರ್ ಪ್ರದೇಶದಲ್ಲಿ, ಅಂದರೆ ಶೇ.84.30ರಷ್ಟು ಬಿತ್ತನೆ ಮಾಡಲಾಗಿದೆ. ಆದರೆ ಮಳೆ ಕೊರತೆಯಿಂದ 2,81,345 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಗೀಡಾಗಿವೆ.

ವಿಶೇಷವಾಗಿ 1,80,398 ಹೆಕ್ಟೇರ್ ಪ್ರದೇಶದ ಹತ್ತಿ ಹಾಗೂ 67,816 ಹೆಕ್ಟೇರ್ ಪ್ರದೇಶದ ತೊಗರಿ ಬೆಳೆಗಳಿಗೆ ತೀವ್ರ ಹಾನಿಯಾಗಿದೆ. ಬೆಳೆ ಹಾನಿಗೆ ಸಂಬಂಧಿಸಿದಂತೆ ರೈತರಿಗೆ ಪರಿಹಾರ ಒದಗಿಸಲು ₹277 ಕೋಟಿ ಅನುದಾನದ ಅಗತ್ಯವಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮುಂಬರುವ ಹಿಂಗಾರು ಹಂಗಾಮಿಗೆ 23,327 ಕ್ವಿಂಟಾಲ್ ಬಿತ್ತನೆ ಬೀಜ ಹಾಗೂ ಯೂರಿಯಾ, ಡಿಎಪಿ ಸೇರಿದಂತೆ ಅಗತ್ಯ ರಸಗೊಬ್ಬರಗಳ ದಾಸ್ತಾನು ಲಭ್ಯವಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಮುಂದೆ ಮಳೆಯಾದರೆ ಮರುಬಿತ್ತನೆಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ರೈತರಿಗೆ ಯಾವುದೇ ಸಂದರ್ಭದಲ್ಲಿಯೂ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಬರದಿಂದ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅಡಿಯಲ್ಲಿ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಆದರೂ ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ತನ್ನ ರಾಜ್ಯ ವಿಪತ್ತು ಸ್ಪಂದನಾ ನಿಧಿ (ಎಸ್‌ಡಿಆರ್‌ಎಫ್) ಮೂಲಕ ಪ್ರತಿಯೊಬ್ಬ ಅರ್ಹ ರೈತನಿಗೆ ₹2,500 ಪರಿಹಾರ ನೀಡುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 1,32,860 ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಹತ್ತಿ ಮತ್ತು ತೊಗರಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ವಿಮೆ ಮಾಡಿಸಿದ್ದಾರೆ. ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಧ್ಯಂತರ ಹಂಗಾಮಿನ ಪ್ರತಿಕೂಲ ಪರಿಸ್ಥಿತಿ (Mid-Season Adversity) ಅಡಿಯಲ್ಲಿ ಹತ್ತಿ ಹಾಗೂ ಸೂರ್ಯಕಾಂತಿ ಬೆಳೆಗಳಿಗೆ ಸಂಬಂಧಿಸಿದಂತೆ 53,988 ಅರ್ಜಿಗಳ ಮೂಲಕ ₹43.36 ಕೋಟಿ ವಿಮಾ ಕ್ಲೇಮ್ ಸಲ್ಲಿಕೆಯಾಗಿದೆ.

ವಿಮಾ ಕಂಪನಿಗಳೊಂದಿಗೆ ಸಮನ್ವಯ ಸಾಧಿಸಿ ಅರ್ಹ ರೈತರಿಗೆ ವಿಮಾ ಪರಿಹಾರದ ಹಣವನ್ನು ಶೀಘ್ರವಾಗಿ ತಲುಪಿಸಬೇಕು. ಬೆಳೆ ವಿಮೆ ಹಣವನ್ನು ರೈತರಿಗೆ ಕೊಡಿಸುವ ನೆಪದಲ್ಲಿ ಮಧ್ಯವರ್ತಿಗಳು ಹಣ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಕೇಳಿಬಂದಿದ್ದು, ವಿಶೇಷವಾಗಿ ರಾಯಚೂರು ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿವೆ ಎಂಬ ಮಾಹಿತಿ ಇದೆ ಎಂದು ಹೇಳಿದರು.

ರೈತರಿಗೆ ನ್ಯಾಯಯುತವಾಗಿ ದೊರೆಯಬೇಕಾದ ವಿಮಾ ಪರಿಹಾರದ ಹಣದಲ್ಲಿ ಮಧ್ಯವರ್ತಿಗಳು ಶೇಕಡಾವಾರು ಪಾಲು ಕೇಳುವುದು ಅಥವಾ ಹಣ ಕಿತ್ತುಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅಂತಹ ಮಧ್ಯವರ್ತಿಗಳನ್ನು ಗುರುತಿಸಿ ತಕ್ಷಣ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಅದೇ ರೀತಿ, ಮೈಕ್ರೋಫೈನಾನ್ಸ್ ಸಂಸ್ಥೆಗಳು ರೈತರಿಗೆ ಕಿರುಕುಳ ನೀಡುತ್ತಿರುವುದು ಕಂಡುಬಂದರೆ ತಕ್ಷಣ ಕ್ರಮ ಜರುಗಿಸಬೇಕು. ಬರದಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತರು ಮತ್ತಷ್ಟು ಆರ್ಥಿಕ ತೊಂದರೆಗೆ ಸಿಲುಕದಂತೆ ರಕ್ಷಣೆ ನೀಡಬೇಕು ಎಂದು ಸೂಚಿಸಿದರು.

ಮಳೆ ಕೊರತೆ ಮುಂದುವರೆದು, ಬಿಸಿಲು ಏರಿಕೆಯಾದಂತೆ ಜನರಿಗೆ ಅನಾರೋಗ್ಯ ಸಮಸ್ಯೆ ಕಾಣುತ್ತದೆ. ಟ್ಯಾಂಕರ್ ನೀರು ಪರೀಕ್ಷಿಸಿ ಪೂರೈಸಬೇಕು. ಜನರ ಆರೋಗ್ಯ ಮೇಲ್ವಿಚಾರಣೆಗಾಗಿ ನಿಯಮಿತ ಸಭೆ ನಡೆಸಿ ಎಂದು ಉಪ ಮುಖ್ಯಮಂತ್ರಿಗಳು ಡಿಎಚ್ಓ ಅವರಿಗೆ ಸೂಚನೆ ನೀಡಿದರು.

ಕಿರು ಸಾಲ ಅಥವಾ ಸಣ್ಣ ಸಾಲ ನೀಡುವ ಸಂಸ್ಥೆಗಳಿಂದ ಬಡ ಜನರ ಮೇಲೆ ನಡೆಯುವ ಬಲವಂತದ ವಸೂಲಿ ಹಾಗೂ ಮಾನಸಿಕ ಕಿರುಕಳ ನಡೆಯುದನ್ನು ನಾವು ಖಂಡಿಸುತ್ತೇವೆ. ಬರ ಎದುರಾದ ಈ ಪರಿಸ್ಥಿತಿಯಲ್ಲಿ ಸಾಲ ವಸೂಲಾತಿ ಕಿರುಕುಳ ಪ್ರಕರಣಗಳು ಮರುಕಳಿಸಿದಲ್ಲಿ ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೇ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಬೇರೆ ಬೇರೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಕೂಡದೇ ನಿಯಮಿತವಾಗಿ ಕ್ಷೇತ್ರ ಭೇಟಿ ನಡೆಸಿ ಜನತೆಗೆ ಸ್ಪಂದನೆ ನೀಡಬೇಕು. ರಾಜ್ಯದಲ್ಲಿ ಈಗ ಮುಂದುವರೆದ ಬರದ ಸವಾಲನ್ನು ನಾವು ನೀವು ಸೇರಿ ಎದುರಿಸಬೇಕು. ಈ ದಿಶೆಯಲ್ಲಿ ಅಧಿಕಾರಿ ವರ್ಗದ ಸಮನ್ವಯತೆ ತುಂಬಾ ಮುಖ್ಯ. ಅಧಿಕಾರಿಗಳು ಕ್ಷೇತ್ರ ಭೇಟಿ ನಡೆಸದೇ ಮಾಹಿತಿ ಕೊಡುವಲ್ಲಿ ನಿರ್ಲಕ್ಷ್ಯ ತೋರುವಂತಿಲ್ಲ ಎಂದು ಎಚ್ಚರಿಸಿದರು.

ಕುಡಿಯುವ ನೀರಿಗೆ ಮೊದಲ ಆದ್ಯತೆ; ಜಲಾಶಯಗಳ ನೀರನ್ನು ಎಚ್ಚರಿಕೆಯಿಂದ ಬಳಸಲು ಸೂಚನೆ

ಬರ ಪರಿಸ್ಥಿತಿಯಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ಸರ್ಕಾರ ಮತ್ತು ಜಿಲ್ಲಾಡಳಿತದ ಮೊದಲ ಆದ್ಯತೆಯಾಗಿರಬೇಕು. ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಗ್ರಾಮಗಳು ಹಾಗೂ ನಗರ ಪ್ರದೇಶಗಳಿಗೆ ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಉಪಮುಖ್ಯಮಂತ್ರಿಗಳು ಸೂಚಿಸಿದರು.

ರಾಯಚೂರು ಜಿಲ್ಲೆಯಲ್ಲಿ ಡಿಸೆಂಬರ್ ನಂತರ ತೊಂದರೆಯಾಗಲಿದೆ. ಕುಡಿಯುವ ನೀರಿಗೆ ನೀಡಿದ ಅನುದಾನವನ್ನು ಸಮರ್ಪಕವಾಗಿ ಬಳಸುತ್ತಿದ್ದೇವೆ ಎಂದು ರಾಯಚೂರು ಜಿಲ್ಲಾಧಿಕಾರಿ ಪೂವಿಕಾ ಅವರು ಸಭೆಗೆ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿಗಳು, ಮತ್ತೊಂದು ಹಂತದಲ್ಲಿ ತಲಾ ಒಂದು ಕೋಟಿ ರೂ.ಗಳನ್ನು ಎಲ್ಲಾ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಕೊಡುವ ಯೋಚನೆ ಇದೆ. ಯಾವುದೇ ರೀತಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಕುಡಿವ ನೀರಿಗೆ ತೊಂದರೆಯಾಗಬಾರದು. ಸಮರ್ಪಕ ಕುಡಿವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ರೂಪಿಸಲು ನಿರ್ದೇಶನ ನೀಡಿದರು.

ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ ಶೇ.63ರಷ್ಟು ಹಾಗೂ ನಾರಾಯಣಪುರ ಜಲಾಶಯದಲ್ಲಿ ಶೇ.90ರಷ್ಟು ನೀರು ಸಂಗ್ರಹವಿದೆ. ಆದರೂ ಒಟ್ಟಾರೆ ನೀರಿನ ಲಭ್ಯತೆಯಲ್ಲಿ ಕೊರತೆಯಿರುವುದರಿಂದ ಜಲಾಶಯಗಳಲ್ಲಿನ ನೀರನ್ನು ಅತ್ಯಂತ ಜಾಗರೂಕತೆಯಿಂದ ಬಳಸಬೇಕು. ಕುಡಿಯುವ ನೀರಿನ ಅಗತ್ಯಕ್ಕೆ ಮೊದಲ ಆದ್ಯತೆ ನೀಡಿ, ಲಭ್ಯವಿರುವ ನೀರನ್ನು ಸಮರ್ಪಕವಾಗಿ ಕಾಯ್ದಿರಿಸಬೇಕು ಎಂದು ತಿಳಿಸಿದರು.

ರಾಯಚೂರು ಜಿಲ್ಲೆಯ 19 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 30 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, 35 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಜಿಲ್ಲೆಯ 263 ಕುಡಿಯುವ ನೀರಿನ ಕೆರೆಗಳ ಪೈಕಿ 24 ಕೆರೆಗಳಲ್ಲಿ ಶೇ.25ಕ್ಕಿಂತ ಕಡಿಮೆ ನೀರು ಸಂಗ್ರಹವಿದೆ. ಕುಡಿಯುವ ನೀರಿನ ತುರ್ತು ಅಗತ್ಯಕ್ಕಾಗಿ 320 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬಾಡಿಗೆಗೆ ಪಡೆದಿರುವ ಖಾಸಗಿ ಕೊಳವೆಬಾವಿಗಳ ಬಾಕಿ ಬಿಲ್‌ಗಳನ್ನು ತಕ್ಷಣ ಪಾವತಿಸಬೇಕು. ನೀರು ಪೂರೈಸುವವರಿಗೂ ಆರ್ಥಿಕ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಯಾವುದೇ ಗ್ರಾಮ ಅಥವಾ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಸೂಚಿಸಿದರು.

ನಗರ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆ ಗಂಭೀರವಾಗಿದೆ. ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿ, ಮಸ್ಕಿ, ಸಿಂಧನೂರು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದರೆ, ಕೆಲವೆಡೆ ಎಂಟರಿಂದ ಹತ್ತು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಈ ಪರಿಸ್ಥಿತಿ ಸುಧಾರಣೆಗೆ ಆದ್ಯತೆ ನೀಡಬೇಕು. ರಾಯಚೂರು ನಗರದ ಹಳೆಯ ಕುಡಿಯುವ ನೀರಿನ ಪೈಪ್‌ಲೈನ್ ಬದಲಾವಣೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ತುರ್ತು ಅಗತ್ಯಗಳಿಗಾಗಿ ₹5 ಕೋಟಿ ಅನುದಾನ ಒದಗಿಸಲಾಗಿದೆ. ಈ ಹಣವನ್ನು ಅತ್ಯಂತ ವಿವೇಚನೆಯಿಂದ, ಅಗತ್ಯವಿರುವ ಪ್ರದೇಶಗಳಿಗೆ ಆದ್ಯತೆ ನೀಡಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ನೀರಿನ ಸಮಸ್ಯೆ ನಿವಾರಣೆಗೆ ಮೊದಲಿಗೆ ಲಭ್ಯವಿರುವ ಜಲಾಶಯಗಳು ಹಾಗೂ ಇತರ ನೀರಿನ ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾದರೆ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಬೇಕು. ನಂತರವೂ ಸಮಸ್ಯೆ ಮುಂದುವರಿದರೆ ಇರುವ ಕೊಳವೆಬಾವಿಗಳನ್ನು ಮತ್ತಷ್ಟು ಆಳಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು. ಹೊಸ ಕೊಳವೆಬಾವಿಗಳನ್ನು ಕೊರೆಯುವುದನ್ನು ಕೊನೆಯ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಸೂಚಿಸಿದರು.

ಯಾವುದೇ ಪರ್ಯಾಯ ವ್ಯವಸ್ಥೆಯಿಂದ ನೀರು ಒದಗಿಸಲು ಸಾಧ್ಯವಾಗದ ಸಂದರ್ಭದಲ್ಲಿ ಹಾಗೂ ತುರ್ತು ಅಗತ್ಯವಿದ್ದಾಗ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಟ್ಯಾಂಕರ್ ನೀರಿನ ಗುಣಮಟ್ಟ ಹಾಗೂ ಪೂರೈಕೆ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ ವಿಪತ್ತು ನಿರ್ವಹಣೆಯ ಪಿ.ಡಿ. ಖಾತೆಗಳಲ್ಲಿ ಅಗತ್ಯ ಅನುದಾನ ಲಭ್ಯವಿದೆ. ಅನುದಾನ ಬಿಡುಗಡೆಯಾಗಿಲ್ಲ ಎಂಬ ನೆಪವೊಡ್ಡಿ ಕುಡಿಯುವ ನೀರು ಅಥವಾ ಇತರ ತುರ್ತು ಪರಿಹಾರ ಕಾಮಗಾರಿಗಳನ್ನು ವಿಳಂಬ ಮಾಡಬಾರದು. ಸರ್ಕಾರದ ಮಾರ್ಗಸೂಚಿಗಳ ಅನ್ವಯ ಲಭ್ಯವಿರುವ ಹಣವನ್ನು ತಕ್ಷಣ ಬಳಸಿಕೊಳ್ಳಬೇಕು ಎಂದು ನಿರ್ದೇಶಿಸಿದರು.

ಜಾನುವಾರುಗಳಿಗೆ ಮೇವು ಹಾಗೂ ಲಸಿಕೆಗಳ ಕೊರತೆಯಾಗಬಾರದು

ರಾಯಚೂರು ಜಿಲ್ಲೆಯಲ್ಲಿ ಪ್ರಸ್ತುತ 5.70 ಲಕ್ಷ ಟನ್ ಮೇವು ಲಭ್ಯವಿದ್ದು, ಮುಂದಿನ 31 ವಾರಗಳಿಗೆ ಸಾಕಾಗಲಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ ಈ ಅಂಕಿಅಂಶಗಳನ್ನು ಮಾತ್ರ ಆಧರಿಸಿ ನಿರ್ಲಕ್ಷ್ಯ ವಹಿಸಬಾರದು. ವಾಸ್ತವವಾಗಿ ಎಷ್ಟು ಮೇವು ಲಭ್ಯವಿದೆ ಎಂಬುದನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ತಂಡಗಳ ಮೂಲಕ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿಗಳು ಸೂಚಿಸಿದರು.

ಜಿಲ್ಲೆಯಿಂದ 49,000 ಮೇವಿನ ಬೀಜದ ಕಿಟ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಈವರೆಗೆ 16,644 ಕಿಟ್‌ಗಳನ್ನು ವಿತರಿಸಲಾಗಿದೆ. ಉಳಿದ ಕಿಟ್‌ಗಳನ್ನು ಶೀಘ್ರವಾಗಿ ರೈತರಿಗೆ ತಲುಪಿಸಬೇಕು. ನೀರಾವರಿ ಸೌಲಭ್ಯ ಹಾಗೂ ಕೊಳವೆಬಾವಿ ಸೇರಿದಂತೆ ನೀರಿನ ಮೂಲಗಳನ್ನು ಹೊಂದಿರುವ ರೈತರನ್ನು ಮೇವು ಬೆಳೆಯಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಮೇವಿನ ಬೀಜದ ಕಿಟ್‌ಗಳ ವಿತರಣೆಗೆ ಹಾಗೂ ಮೇವು ಕೊರತೆ ನಿವಾರಣೆಗೆ ಪಶುಸಂಗೋಪನಾ ಇಲಾಖೆಗೆ ರಾಜ್ಯ ಸರ್ಕಾರ ಈಗಾಗಲೇ ₹25 ಕೋಟಿ ಬಿಡುಗಡೆ ಮಾಡಿದೆ. ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಅಪೌಷ್ಟಿಕತೆಯಿಂದ ಜಾನುವಾರುಗಳಲ್ಲಿ ಬಂಜೆತನ, ರೋಗನಿರೋಧಕ ಶಕ್ತಿಯ ಕುಸಿತ ಹಾಗೂ ಸೋಂಕುಗಳು ಹೆಚ್ಚುತ್ತಿರುವ ಕುರಿತು ವರದಿಗಳು ಬಂದಿವೆ. ಇದನ್ನು ಪಶುವೈದ್ಯಕೀಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಬೇಕು. ಅಗತ್ಯ ಔಷಧಿಗಳು ಹಾಗೂ ಲಸಿಕೆಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಜಾನುವಾರುಗಳಿಗೆ ನಿಗದಿತ ಅವಧಿಯಲ್ಲಿ ಲಸಿಕೆ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ನಿರ್ದೇಶಿಸಿದರು.

ಮುಂದಿನ ದಿನಗಳಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿರುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಹಾಗೂ ಅಗತ್ಯ ಪಶುವೈದ್ಯಕೀಯ ಸೇವೆಗಳನ್ನು ಒದಗಿಸಲು ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ರೈತರಿಗೆ ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ಹೆಚ್ಚಿನ ನೀರು ಅಗತ್ಯವಿರುವ ಬೆಳೆಗಳ ಬದಲಾಗಿ ನೀರಿನ ಲಭ್ಯತೆಗೆ ಅನುಗುಣವಾದ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ಗುಳೆ ತಡೆಯಲು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ; ಬಾಕಿ ಕೂಲಿ ಹಣ ತಕ್ಷಣ ಪಾವತಿಸಿ

ಬರಗಾಲದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರು ಉದ್ಯೋಗವಿಲ್ಲದೆ ಊರು ತೊರೆದು ಗುಳೆ ಹೋಗುವ ಪರಿಸ್ಥಿತಿ ಉಂಟಾಗಬಾರದು. ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಇದಕ್ಕಾಗಿ ಲಭ್ಯವಿರುವ ಎಲ್ಲ ಯೋಜನೆಗಳು ಮತ್ತು ಅನುದಾನವನ್ನು ಬಳಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

ರಾಯಚೂರು ಜಿಲ್ಲೆಯಲ್ಲಿ 2.78 ಲಕ್ಷ ಸಕ್ರಿಯ ನರೇಗಾ ಜಾಬ್ ಕಾರ್ಡ್‌ಗಳಿದ್ದು, 4.82 ಲಕ್ಷ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಈವರೆಗೆ 19.54 ಲಕ್ಷ ಮಾನವ ದಿನಗಳ ಉದ್ಯೋಗ ಸೃಜಿಸಲಾಗಿದೆ. ಆದರೆ ಕಾರ್ಮಿಕರಿಗೆ ₹12.73 ಕೋಟಿ ಕೂಲಿ ಮೊತ್ತ ಪಾವತಿಯಾಗುವುದು ಬಾಕಿ ಇದೆ. ದುಡಿದ ಕಾರ್ಮಿಕರಿಗೆ ಸಕಾಲದಲ್ಲಿ ಕೂಲಿ ದೊರೆಯದಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಬಾಕಿ ಕೂಲಿ ಹಣವನ್ನು ತಕ್ಷಣ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕೃಷಿ ಹೊಂಡ ನಿರ್ಮಾಣ, ಕೆರೆ ಅಭಿವೃದ್ಧಿ ಸೇರಿದಂತೆ 4,929 ಕಾಮಗಾರಿಗಳನ್ನು ಯೋಜಿಸಲಾಗಿದೆ. ಈ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಿ ಗ್ರಾಮೀಣ ಜನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ನಿರ್ದೇಶಿಸಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಆಗಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ವಿಬಿ–ಜಿ ರಾಮ್ ಜಿ ಯೋಜನೆ ಸೇರಿದಂತೆ ಲಭ್ಯವಿರುವ ಯೋಜನೆಗಳಡಿ ಕೆಲಸ ಮಾಡುವ ಕಾರ್ಮಿಕರಿಗೆ ವಾರದೊಳಗೆ ವೇತನ ಪಾವತಿಯಾಗುವಂತೆ ನೋಡಿಕೊಳ್ಳಬೇಕು. ಕೂಲಿ ಪಾವತಿಯಲ್ಲಿ ವಿಳಂಬವಾಗದಂತೆ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಈ ಭಾಗದಲ್ಲಿ ಉದ್ಯೋಗಕ್ಕಾಗಿ ಗುಳೆ ಹೋಗುವವರ ಪ್ರಮಾಣ ಹೆಚ್ಚಾಗಿದೆ. ಬರದಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಗ್ರಾಮೀಣ ಜನರು ಜೀವನೋಪಾಯಕ್ಕಾಗಿ ಬೇರೆ ಊರುಗಳಿಗೆ ತೆರಳುವ ಪರಿಸ್ಥಿತಿಯನ್ನು ತಪ್ಪಿಸಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸ್ಥಳೀಯ ಉದ್ಯೋಗ ಸೃಷ್ಟಿಗೆ ವಿಶೇಷ ಗಮನ ಹರಿಸಬೇಕು ಎಂದು ಹೇಳಿದರು.

ಬರ ಪರಿಸ್ಥಿತಿಯಲ್ಲಿ ರೈತರಿಗೆ ಆರ್ಥಿಕ ಸ್ಥಿರತೆ ಹಾಗೂ ಸ್ವಾವಲಂಬನೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ‘ನೇಗಿಲ ಯೋಗಿ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ತಾಂತ್ರಿಕ ಹಾಗೂ ಆರ್ಥಿಕ ಬೆಂಬಲ ಒದಗಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಯೋಜನೆಯಡಿ ರೈತರಿಗೆ ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್, ಟಿಲ್ಲರ್ ಸೇರಿದಂತೆ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವ ಅಥವಾ ನೇರವಾಗಿ ಆರ್ಥಿಕ ನೆರವು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.

ಮೂರು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಒಂದು ವರ್ಷದಲ್ಲಿ ಪ್ರತಿ ಎಕರೆಗೆ ಗರಿಷ್ಠ ಮೂರು ಕೃಷಿ ಚಟುವಟಿಕೆಗಳಿಗೆ, ಪ್ರತಿ ಚಟುವಟಿಕೆಗೆ ₹500 ಪ್ರೋತ್ಸಾಹ ಧನ ನೀಡಲು ಉದ್ದೇಶಿಸಲಾಗಿದೆ. ಇದರಂತೆ ಅರ್ಹ ರೈತರಿಗೆ ಮೂರು ಎಕರೆಗೆ ಒಟ್ಟು ಗರಿಷ್ಠ ₹4,500 ವಾರ್ಷಿಕ ಪ್ರೋತ್ಸಾಹ ಧನವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ನೀಡಲು ಯೋಜಿಸಲಾಗಿದೆ. ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಪ್ರತ್ಯೇಕ ಮೊಬೈಲ್ ಆ್ಯಪ್ ಹಾಗೂ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿವರಿಸಿದರು.

ಇದರ ಜೊತೆಗೆ ‘ರೈತ ಮಿತ್ರ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ರೈತರಿಗೆ ಕೃಷಿಯ ಪ್ರತಿಯೊಂದು ಹಂತದಲ್ಲಿಯೂ ಸೂಕ್ತ ಮಾರ್ಗದರ್ಶನ, ಹವಾಮಾನ ಮತ್ತು ಮಾರುಕಟ್ಟೆ ಆಧಾರಿತ ಕೃಷಿ ಪದ್ಧತಿಗಳ ಮಾಹಿತಿ ಹಾಗೂ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ತಲುಪಿಸುವ ಉದ್ದೇಶ ಹೊಂದಲಾಗಿದೆ.

ಕೃಷಿ ಇಲಾಖೆ ಅಧಿಕಾರಿಗಳು ಕೇವಲ ಕಚೇರಿಗಳಿಗೆ ಸೀಮಿತವಾಗದೆ ರೈತರ ಹೊಲಗಳಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಬೇಕು. ನಿಜವಾದ ರೈತ ಮಿತ್ರರಾಗಿ ರೈತರಿಗೆ ಅಗತ್ಯ ಮಾರ್ಗದರ್ಶನ ಮತ್ತು ನೆರವು ಒದಗಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಸಿಡಿಲು ಬಡಿದು ನಾಲ್ವರು ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ಒಟ್ಟು ₹20 ಲಕ್ಷ ಪರಿಹಾರ ನೀಡಲಾಗಿದೆ. 104 ಜಾನುವಾರುಗಳ ಪ್ರಾಣಹಾನಿಗೆ ₹11.13 ಲಕ್ಷ ಪರಿಹಾರ ಒದಗಿಸಲಾಗಿದೆ. ಅದೇ ರೀತಿ 48 ಮನೆಗಳ ಹಾನಿಗೂ ಪರಿಹಾರ ವಿತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಗಳಲ್ಲಿ ₹251.56 ಲಕ್ಷ ಅನುದಾನ ಲಭ್ಯವಿದ್ದು, ಇದನ್ನು ನಿಯಮಾನುಸಾರ ಅಗತ್ಯ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಹಾವು ಕಡಿತ ಹಾಗೂ ಬಣವೆ ನಷ್ಟಕ್ಕೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿಯನ್ನು ತ್ವರಿತಗೊಳಿಸಬೇಕು ಎಂದು ಸೂಚಿಸಿದರು.

ಬರ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಕೊರತೆಯಿಂದ ಜನರು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಪ್ರಮಾಣ ಹೆಚ್ಚಾಗುತ್ತದೆ. ನೀರನ್ನು ಹೆಚ್ಚು ದಿನ ಸಂಗ್ರಹಿಸಿಟ್ಟುಕೊಳ್ಳುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾದಂತಹ ರೋಗಗಳು ಹರಡುವ ಸಾಧ್ಯತೆಯಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಜನವರಿ 2026ರಿಂದ ಈವರೆಗೆ ರಾಯಚೂರು ಜಿಲ್ಲೆಯಲ್ಲಿ 13 ಡೆಂಗ್ಯೂ ಮತ್ತು 2 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ. ಉಷ್ಣಾಂಶ ಹೆಚ್ಚಾದಂತೆ ವಿವಿಧ ರೋಗಗಳ ಹರಡುವಿಕೆಯ ಅಪಾಯವೂ ಹೆಚ್ಚಾಗಬಹುದಾಗಿದ್ದು, ಆರೋಗ್ಯ ಇಲಾಖೆ ಸನ್ನದ್ಧವಾಗಿರಬೇಕು ಎಂದು ಸೂಚಿಸಿದರು.

ವಿಶೇಷವಾಗಿ ಕುಡಿಯುವ ನೀರು ಸಂಗ್ರಹಿಸುವ ಪಾತ್ರೆಗಳು, ತೊಟ್ಟಿಗಳು ಹಾಗೂ ಇತರ ಸ್ಥಳಗಳಲ್ಲಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ಜನರಿಗೆ ಸೂಕ್ತ ತಿಳಿವಳಿಕೆ ನೀಡಬೇಕು. ಟ್ಯಾಂಕರ್ ಮೂಲಕ ಪೂರೈಸುವ ನೀರು ಹಾಗೂ ಸಂಗ್ರಹಿತ ನೀರಿನ ಶುಚಿತ್ವವನ್ನು ಪರಿಶೀಲಿಸಬೇಕು ಎಂದು ನಿರ್ದೇಶಿಸಿದರು.

ಬರಗಾಲದ ವರ್ಷಗಳಲ್ಲಿ ಕಲುಷಿತ ನೀರಿನ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ, ಸ್ವಚ್ಛತೆ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳು ನಿಯಮಿತವಾಗಿ ಟಾಸ್ಕ್‌ಫೋರ್ಸ್ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳಿಂದ ವಾರಕ್ಕೊಮ್ಮೆ ವರದಿ ಪಡೆದು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪರಿಸ್ಥಿತಿಯ ಮಾಹಿತಿ ನೀಡಬೇಕು. ಅಧಿಕಾರಿಗಳು ಪರಸ್ಪರ ನಿರಂತರ ಸಂಪರ್ಕದಲ್ಲಿದ್ದು ಯಾವುದೇ ತುರ್ತು ಸಮಸ್ಯೆ ಎದುರಾದರೂ ತಕ್ಷಣ ಸ್ಪಂದಿಸಬೇಕು ಎಂದು ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ರಾಜ್ಯ ಎದುರಿಸುತ್ತಿರುವ ಬರ ಪರಿಸ್ಥಿತಿ ಸಾಮಾನ್ಯವಾದುದಲ್ಲ. ಹಿಂಗಾರು ಹಂಗಾಮಿನಲ್ಲಿಯೂ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಬಹುದಾದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಇಲಾಖೆಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

ಎಲ್‌ ನಿನೊ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಹಠಾತ್ ಭಾರಿ ಮಳೆ, ಪ್ರವಾಹ ಹಾಗೂ ಸಿಡಿಲು ಬಡಿಯುವ ಘಟನೆಗಳು ಸಂಭವಿಸುವ ಸಾಧ್ಯತೆಯಿದೆ. ಹೀಗಾಗಿ ಹವಾಮಾನ ಇಲಾಖೆಯ ಮುನ್ಸೂಚನೆಗಳ ಆಧಾರದ ಮೇಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಅಳವಡಿಸಿರುವ ಎಲ್ಲ ಮಳೆಮಾಪನ ಕೇಂದ್ರಗಳು (Rain Gauge Stations) ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ರಾಜ್ಯದ ಪ್ರತಿ ತಾಲೂಕಿಗೂ ಹಿರಿಯ ಕೆಎಎಸ್ ಅಧಿಕಾರಿಯೊಬ್ಬರನ್ನು ತಾಲೂಕು ಉಸ್ತುವಾರಿ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಈ ಅಧಿಕಾರಿಗಳ ಸೇವೆಯನ್ನು ಬರ ನಿರ್ವಹಣೆಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮುಖ್ಯ ಕಾರ್ಯದರ್ಶಿಯವರು ಈ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ತಿಳಿಸಿದರು.

ಕಂದಾಯ ಇಲಾಖೆ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಹಾಗೂ ಸಂಬಂಧಿಸಿದ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಜನರ ಮೂಲಭೂತ ಅವಶ್ಯಕತೆಗಳಾದ ಕುಡಿಯುವ ನೀರು, ಆಹಾರ, ಉದ್ಯೋಗ, ಆರೋಗ್ಯ ಸೇವೆ ಹಾಗೂ ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಮಾಡುವ ಜವಾಬ್ದಾರಿ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಮೇಲಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಮತ್ತು ಅಗತ್ಯ ಲಸಿಕೆಗಳು, ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು, ಸಾರ್ವಜನಿಕರಿಗೆ ಸುರಕ್ಷಿತ ಕುಡಿಯುವ ನೀರು ಮತ್ತು ಗ್ರಾಮೀಣ ಜನರಿಗೆ ಉದ್ಯೋಗಾವಕಾಶಗಳನ್ನು ಖಚಿತಪಡಿಸಬೇಕು. ಮಳೆ ಕೊರತೆ, ತಾಪಮಾನ ಏರಿಕೆ ಹಾಗೂ ಹಠಾತ್ ಹವಾಮಾನ ಬದಲಾವಣೆಗಳಿಂದ ಎದುರಾಗಬಹುದಾದ ಎಲ್ಲ ಸವಾಲುಗಳಿಗೂ ಜಿಲ್ಲಾಡಳಿತ ಸಿದ್ಧವಾಗಿರಬೇಕು ಎಂದು ನಿರ್ದೇಶಿಸಿದರು.

ಉಪಮುಖ್ಯಮಂತ್ರಿ ಪರಮೇಶ್ವರ ಅವರು ಬರಪೀಡಿತ ಪ್ರದೇಶಗಳಾದ ಕೊಪ್ಪಳ ತಾಲೂಕಿನ ವಣಬಳ್ಳಾರಿ, ಯಲಬುರ್ಗಾ ತಾಲೂಕಿನ ಗುನ್ನಾಳ, ಕುಷ್ಟಗಿ ತಾಲೂಕಿನ ನಂದಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ, ಕಲಮಂಗಿ, ಲಿಂಗಸೂಗುರು ತಾಲೂಕಿನ ತೊಡಗಿ ಗ್ರಾಮಗಳಲ್ಲಿ ಬರಪರಿಶೀಲನೆ ನಡೆಸಿ, ರೈತರೊಂದಿಗೆ ನೇರವಾಗಿ ಮತನಾಡಿ ಸಮಸ್ಯೆಯನ್ನು ಆಲಿಸಿದರು.

ಸಭೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಹೆಚ್.ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಕುಷ್ಟಗಿ ಶಾಸಕರಾದ ದೊಡ್ಡನಗೌಡ ಪಾಟೀಲ, ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಹಿಟ್ನಾಳ್, ರಾಯಚೂರು ಜಿಲ್ಲಾಧಿಕಾರಿ ಪೂವಿತಾ, ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ವರ್ಣೀತ್ ನೇಗಿ, ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕುಮಾರ್ ಕಾಂದೂ ಮುಂತಾದವರು ಇದ್ದರು.


Share

You cannot copy content of this page