ಸಮಗ್ರ ಸುದ್ದಿ

ಘನತ್ಯಾಜ್ಯ ನಿರ್ವಹಣೆಗೆ ಸಮಗ್ರ ಮೈಕ್ರೋ ಪ್ಲಾನಿಂಗ್ ಅನುಷ್ಠಾನ: ಪ್ರತಿ ಮಂಗಳವಾರ ವಿಶೇಷ ಫೋನ್-ಇನ್ ಕಾರ್ಯಕ್ರಮ

Share

ಬೆಂಗಳೂರು:ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಬ್ಲಾಕ್‌ವಾರು ಮೈಕ್ರೋ ಪ್ಲಾನ್ ರೂಪಿಸಲಾಗಿದ್ದು, ಇದರ ಪರಿಣಾಮಕಾರಿ ಅನುಷ್ಠಾನ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲು ಪ್ರತಿ ಮಂಗಳವಾರ ಬೆಳಿಗ್ಗೆ 7.30ರಿಂದ 9.30ರವರೆಗೆ ಕಸದ ನಿರ್ವಹಣೆಗೆ ಮೀಸಲಾದ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ ಘನತ್ಯಾಜ್ಯ ನಿರ್ವಹಣಾ (SWM) ವಿಭಾಗವು ಏಳು ವಿಭಾಗಗಳಿಗೆ ಪ್ರತ್ಯೇಕ ಮೈಕ್ರೋ ಪ್ಲಾನ್ ಸಿದ್ಧಪಡಿಸಿದೆ. ಮನೆ-ಮನೆಗೆ ತ್ಯಾಜ್ಯ ಸಂಗ್ರಹಣೆ, ಪೌರಕಾರ್ಮಿಕರ ಸ್ಟ್ರೀಟ್ ಮ್ಯಾಪಿಂಗ್, ಆಟೋ ಟಿಪ್ಪರ್‌ಗಳ ಸಂಚಾರ ಮತ್ತು ಬಲ್ಕ್ ವೇಸ್ಟ್ ಜನರೇಟರ್‌ಗಳ (BWG) ಗುರುತಿಸುವಿಕೆ ಹಾಗೂ ನಿರ್ವಹಣೆಯನ್ನು ಸಮನ್ವಯಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಕಸದ ಸಮಸ್ಯೆಗಳಿಗೆ ನೇರ ಸ್ಪಂದನೆ: ಪ್ರತಿ ಮಂಗಳವಾರ ಫೋನ್-ಇನ್

ಮೈಕ್ರೋ ಪ್ಲಾನಿಂಗ್‌ನ ಅನುಷ್ಠಾನವನ್ನು ಪರಿಶೀಲಿಸುವುದರ ಜೊತೆಗೆ, ಸಾರ್ವಜನಿಕರು ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿತ ಸಮಸ್ಯೆಗಳನ್ನು ಮಾತ್ರ ಪ್ರತ್ಯೇಕವಾಗಿ ನೇರವಾಗಿ ಆಲಿಸಲು ಈ ವಿಶೇಷ ಫೋನ್-ಇನ್ ಕಾರ್ಯಕ್ರಮವು ವಲಯ ಜಂಟಿ ಆಯುಕ್ತರುಗಳ ನೇತೃತ್ವದಲ್ಲಿ ಹಾಗೂ DGM ಉಪಸ್ಥಿತಿಯಲ್ಲಿ ನಡೆಯಲಿದೆ.

ಕಸ ಸಂಗ್ರಹಿಸುವ ವಾಹನಗಳ ಆಗಮನದ ಸಮಯ, ಪೌರಕಾರ್ಮಿಕರ ಸೇವೆ, ತಮ್ಮ ಪ್ರದೇಶಕ್ಕೆ ನಿಗದಿಪಡಿಸಿರುವ ಸಂಗ್ರಹಣಾ ವ್ಯವಸ್ಥೆ ಹಾಗೂ ಕಸ ವಿಲೇವಾರಿಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ನಾಗರಿಕರು ಈ ಕಾರ್ಯಕ್ರಮದಲ್ಲಿ ಮಾಹಿತಿ ನೀಡಬಹುದು. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಂಡು ಕಸದ ನಿರ್ವಹಣೆಗೆ ಸಂಬಂಧಿಸಿದ ಅಹವಾಲುಗಳನ್ನು ಮಾತ್ರ ಸಲ್ಲಿಸುವಂತೆ ಪಾಲಿಕೆ ತಿಳಿಸಿದೆ.

ಏಳು ವಿಭಾಗಗಳಿಗೆ ಪ್ರತ್ಯೇಕ ಮೈಕ್ರೋ ಪ್ಲಾನ್

ಪ್ರತಿ ಪ್ರದೇಶದ ಅಗತ್ಯಕ್ಕೆ ಅನುಗುಣವಾಗಿ ಮೈಕ್ರೋ ಪ್ಲಾನ್ ರೂಪಿಸಲು ಬ್ಲಾಕ್‌ಗಳು, ಮನೆಗಳು, ವಾಣಿಜ್ಯ ಅಂಗಡಿಗಳು ಮತ್ತು ಸಂಸ್ಥೆಗಳು, ಜನಸಂಖ್ಯೆ, ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ಮತ್ತು ವಿಧ, ಪೌರಕಾರ್ಮಿಕರ ಹಾಗೂ ಆಟೋ ಟಿಪ್ಪರ್‌ಗಳ ವಿವರ ಹಾಗೂ ಮಾರ್ಗಗಳನ್ನು ಪರಿಗಣಿಸಲಾಗಿದೆ.

ಇದರೊಂದಿಗೆ ಕಾಂಪ್ಯಾಕ್ಟರ್‌ಗಳು, ಮಿನಿ ಟ್ರಾನ್ಸ್‌ಫರ್ ಸ್ಟೇಷನ್‌ಗಳು (MTS), ಬಲ್ಕ್ ವೇಸ್ಟ್ ಜನರೇಟರ್‌ಗಳು (BWG), ಮಾರುಕಟ್ಟೆಗಳು, ವಾಣಿಜ್ಯ ಪ್ರದೇಶಗಳು, ಉದ್ಯಾನವನಗಳು, ಬಸ್ ನಿಲ್ದಾಣಗಳು, ಆಟದ ಮೈದಾನಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕಸದ ಬ್ಲಾಕ್‌ಸ್ಪಾಟ್‌ಗಳು ಮತ್ತು ಹೆಚ್ಚಿನ ಸಾಂದ್ರತೆಯ ವಸತಿ ಪ್ರದೇಶಗಳನ್ನೂ ಯೋಜನೆಯಲ್ಲಿ ಒಳಗೊಂಡಿದೆ.

ನಿಯಂತ್ರಣ ಕೊಠಡಿ ಸಂಪರ್ಕ ವಿವರಗಳು

**ಮೊಬೈಲ್ / ವಾಟ್ಸಾಪ್: 9480685705, ಲ್ಯಾಂಡ್‌ಲೈನ್: 080-22975936 / 080-23636671.

ಈ ಸಮಗ್ರ ಯೋಜನೆಯ ಮೂಲಕ ಮನೆ-ಮನೆಗೆ ತ್ಯಾಜ್ಯ ಸಂಗ್ರಹಣೆ, ರಸ್ತೆ ಸ್ವಚ್ಛತೆ ಹಾಗೂ ಬಲ್ಕ್ ತ್ಯಾಜ್ಯ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಸಮನ್ವಯಗೊಳಿಸುವ ಉದ್ದೇಶ ಹೊಂದಲಾಗಿದ್ದು,
ನಾಗರಿಕರು ಪ್ರತಿ ಮಂಗಳವಾರ ನಡೆಯುವ ವಿಶೇಷ ಫೋನ್-ಇನ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಬೆಂಗಳೂರು ಉತ್ತರ ನಗರ ಪಾಲಿಕೆ ಮನವಿ ಮಾಡಿದೆ.


Share

You cannot copy content of this page