ಸಮಗ್ರ ಸುದ್ದಿ

ಕಬ್ಬು ಬೆಳೆಗಾರರ ಬೇಡಿಕೆಗೆ ಕೇಂದ್ರ ತ್ವರಿತ ಸ್ಪಂದನೆ; ಜಂಟಿ ಸಮಿತಿ ರಚನೆ, ಅಧ್ಯಕ್ಷ-ಸದಸ್ಯರ ನೇಮಕ

Share

ನವದೆಹಲಿ: ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ್ದು, ರೈತರ ಬೇಡಿಕೆಗೆ ಸ್ಪಂದಿಸಿ, ಸಕ್ಕರೆ ವಲಯದ ಸಮಸ್ಯೆ ಪರಿಹರಿಸಲು ತ್ವರಿತ ಕ್ರಮಕ್ಕೆ ಮುಂದಾಗಿ ನೀತಿ ಆಯೋಗದ ಮಾಜಿ ಸದ್ಯರ ಸಾರಥ್ಯದಲ್ಲಿ ಜಂಟಿ ಸಮಿತಿ ರಚಿಸಿದೆ.

ಮೊನ್ನೆ ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೊಟ್ಟ ಭರವಸೆಗೆ ಬದ್ಧವಾಗಿ ಕೇಂದ್ರ ಸರ್ಕಾರ ಎರೆಡೇ ಎರೆಡು ದಿನದಲ್ಲಿ ಜಂಟಿ ಸಮಿತಿ ರಚಿಸಿ ಸ್ಪಂದಿಸಿದೆ.

ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ, ಅಹವಾಲನ್ನು ಸಹಾನುಭೂತಿಯಿಂದ ಆಲಿಸಿದ್ದ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹಾಗೂ ಕೃಷಿ ಸಚಿವ ಶಿವರಾಜ ಸಿಂಗ್ ಚವ್ಹಾಣ್ ಅವರು ರೈತರಿಗೆ ಕೊಟ್ಟ ಭರವಸೆಯಂತೆ ತ್ವರಿತವಾಗಿ ಜಂಟಿ ಸಮಿತಿ ರಚಿಸುವ ಮೂಲಕ ರೈತರ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

“ಕಬ್ಬು ಬೆಳೆಗಾರರ ಸಮಸ್ಯೆ” ಕುರಿತಂತೆ ಸಮಗ್ರ ಅಧ್ಯಯನಕ್ಕಾಗಿ ದೆಹಲಿ ಸಭೆಯಲ್ಲಾದ ನಿರ್ಣಯದಂತೆ ರೈತ ಪ್ರಮುಖರು, ಕೃಷಿ ವಿಜ್ಞಾನಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಸಮಿತಿಯನ್ನು ರಚಿಸಲಾಗಿದೆ. ರೈತರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿರಿಸಿದೆ.

ನೀತಿ ಆಯೋಗದ ಮಾಜಿ ಸದಸ್ಯ ಪ್ರೊ.ರಮೇಶ್ ಚಂದ್ ಸಾರಥ್ಯ: ಕೇಂದ್ರ ಸರ್ಕಾರ, ನೀತಿ ಆಯೋಗದ ಮಾಜಿ ಸದಸ್ಯ ಪ್ರೊ.ರಮೇಶ್ ಚಂದ್ ಅವರ ಅಧ್ಯಕ್ಷತೆಯಲ್ಲಿ ಜಂಟಿ ಸಮಿತಿ ರಚಿಸುವ ಮೂಲಕ ಕಬ್ಬು ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ.

ಸಮಿತಿಗೆ ಸದಸ್ಯರೂ ನೇಮಕ: ಈ ಸಮಿತಿಗೆ ಅಧ್ಯಕ್ಷರು ಮಾತ್ರವಲ್ಲ ಪ್ರಮುಖ ಸದಸ್ಯರ ನೇಮಕವೂ ಆಗಿದೆ. ಸಮಿತಿಯು ಕೇಂದ್ರ ಕೃಷಿ ಆಯುಕ್ತರು ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ (ಸಕ್ಕರೆ); ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ಕಾರ್ಯದರ್ಶಿ (ಕಾನೂನು ಮಾಪನಶಾಸ್ತ್ರ) ಅವರನ್ನು ಸದಸ್ಯರನ್ನಾಗಿ ಒಳಗೊಂಡಿದೆ.

ಪ್ರೊ.ರಮೇಶ್ ಚಂದ್ ನೇತೃತ್ವದ ಈ ಜಂಟಿ ಸಮಿತಿ ಶೀಘ್ರವೇ ಕಾರ್ಯೋನ್ಮುಖವಾಗಲಿದ್ದು, ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಲಿದೆ. ಮತ್ತು ರೈತರ ಆತಂಕಗಳ ನಿವಾರಣೆಗೆ ಸಂಬಂಧಪಟ್ಟಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಕೇಂದ್ರಕ್ಕೆ ಶಿಫಾರಸು ಮಾಡಲಿದೆ.

SAP ಬಗ್ಗೆಯೂ ಪರಿಶೀಲನೆ: ಕಬ್ಬು ಬೆಳೆಗಾರರ ಬೇಡಿಕೆಯಂತೆ ಇತರೆ ರಾಜ್ಯಗಳಲ್ಲಿ ನೀಡಿದಂತೆ ಕರ್ನಾಟಕದಲ್ಲೂ ರಾಜ್ಯ ಸರ್ಕಾರ SAP ನೀಡಬಹುದಾದ ಸಾಧ್ಯತೆ ಬಗ್ಗೆ ಜಂಟಿ ಸಮಿತಿ ಸಮಗ್ರ ಪರಿಶೀಲನೆ ನಡೆಸಲಿದೆ.

ರೈತರೊಂದಿಗೂ ಸಮಾಲೋಚನೆ:
ಪ್ರೊ.ರಮೇಶ್ ಚಂದ್ ಸಾರಥ್ಯದ ಈ ಜಂಟಿ ಸಮಿತಿ ವಿಶೇಷವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಕಬ್ಬು ಬೆಳೆಗಾರರನ್ನೂ ನೇರವಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ಅವಲೋಕಿಸಲಿದೆ. ಅಲ್ಲದೆ, ವಾಸ್ತವಿಕ ಚಿತ್ರಣ ಬಗ್ಗೆ ಸಮಾಲೋಚನೆ, ಸಂಶೋಧನೆ ನಡೆಸಾಕಿರುವ ಈ ಜಂಟಿ ಸಮಿತಿ ಕೇಂದ್ರ ಸರ್ಕಾರಕ್ಕೆ ನಿರ್ದಿಷ್ಟ ಶಿಫಾರಸುಗಳನ್ನು ಒಳಗೊಂಡ ಸಮಗ್ರ ವರದಿಯನ್ನು ತ್ವರಿತವಾಗಿ ಸಲ್ಲಿಸಲಿದೆ.

ಕೃಷಿ ವೆಚ್ಚ ಮತ್ತು ಇತರ ಸಂಬಂಧಿತ ಅಂಶಗಳನ್ನು ಪರಿಗಣಿಸಿ ಕಬ್ಬು ಬೆಳೆಗಾರರಿಗೆ ಲಾಭದಾಯಕ ಆದಾಯ ಹೆಚ್ಚಿಸುವ ಬೇಡಿಕೆ ಸೇರಿದಂತೆ ಸಕ್ಕರೆ ವಲಯದ ಸಾಧಕ-ಬಾಧಕಗಳ ಕುರಿತು ಸಮಗ್ರ ಅಧ್ಯಯನ ನಡೆಸಲಿದೆ.

ಸಕ್ಕರೆ ಉತ್ಪಾದನಾ ವೆಚ್ಚ, ಮಾರುಕಟ್ಟೆ ಆದಾಯ ಮತ್ತು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಕಾರ್ಯಸಾಧ್ಯತೆ ಹಿನ್ನೆಲೆಯಲ್ಲಿ ಸಕ್ಕರೆಯ ‘ಎಕ್ಸ್-ಮಿಲ್’ ಕನಿಷ್ಠ ಮಾರಾಟ ಬೆಲೆ (MSP) ಪರಿಷ್ಕರಿಸಬೇಕೆಂಬ ರೈತರ ಬೇಡಿಕೆಯನ್ನು ಪರಿಶೀಲಿಸಲಿದೆ. ಅಲ್ಲದೆ, ಸಕ್ಕರೆ ಪ್ರಮಾಣದ ಕಬ್ಬು ಇಳುವರಿ ಪರೀಕ್ಷೆ ಮತ್ತು ಪ್ರಸ್ತುತ ವರದಿ ಮಾಡುವ ಅಸ್ತಿತ್ವದಲ್ಲಿರುವ ವಿಧಾನಗಳು, ಇಳುವರಿ ಪಾರದರ್ಶಕ ಪರಿಶೀಲನೆ ಕ್ರಮಗಳು ಹಾಗೂ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕ ಮಾಡುವ ಪ್ರಸ್ತುತ ಪದ್ಧತಿ, ಅಳತೆ ಮಾಪನಗಳ ಹೊಂದಾಣಿಕೆ ಮತ್ತು ತಪಾಸಣೆ ವ್ಯವಸ್ಥೆ ಸೇರಿದಂತೆ ಸಮಗ್ರವಾಗಿ ಪರಿಶೀಲನೆ ನಡೆಸಲಿದೆ ಈ ಜಂಟಿ ಸಮಿತಿ.

ಯಾಂತ್ರೀಕೃತ ವಿಧಾನದಲ್ಲಿ ಕಟಾವು ಮಾಡಿದ ಕಬ್ಬಿನ ತೂಕದಲ್ಲಿ ಕಡಿತಗೊಳಿಸುವ ಪ್ರಸ್ತುತ ಪದ್ಧತಿಗಳನ್ನು ಮತ್ತು ಯಾಂತ್ರೀಕೃತ ಕಟಾವಿನಿಂದ ಉಂಟಾಗುವ ನೈಜ ನಷ್ಟದ ಪ್ರಮಾಣವನ್ನೂ ಸಮಿತಿಯು ಪರಿಶೀಲಿಸಲಿದೆ.

ರೈತರಿಗೆ ಪಾವತಿಸಬೇಕಾದ ಬೆಲೆ ಹಾಗೂ ರೈತರ ಮೇಲೆ ಬೀರಬಹುದಾದ ಆರ್ಥಿಕ ಪರಿಣಾಮವನ್ನು ಮೌಲ್ಯಮಾಪನ ಮಾಡಲಿದ್ದು, ಅಗತ್ಯವೆಂದು ಕಂಡುಬರುವ ಇತರ ಸಂಬಂಧಿತ ವಿಷಯಗಳನ್ನೂ ಪರಿಗಣಿಸಲಿದ್ದು, ಈ ಸಮಿತಿ ರೈತರು, ಸಕ್ಕರೆ ಕಾರ್ಖಾನೆಗಳ ಸಂಘಗಳು, ರಾಜ್ಯ ಸರ್ಕಾರ, ತಜ್ಞರು ಹಾಗೂ ಸಂಬಂಧಿತ ಸಂಸ್ಥೆಗಳೊಂದಿಗೆ ಅಗತ್ಯ ಸಮಾಲೋಚನೆ ಸಹ ನಡೆಸಲಿದೆ.

ಬೇರೆ ರಾಜ್ಯಗಳಲ್ಲಿನ ಅಂಶಗಳ ಮೇಲೂ ಅಧ್ಯಯನ: ಈ ಜಂಟಿ ಸಮಿತಿ ಕರ್ನಾಟಕ, ಮಹಾರಾಷ್ಟ್ರ ಮಾತ್ರವಲ್ಲದೆ, ಕಬ್ಬು ಬೆಳೆಯುವ ಇತರೆ ರಾಜ್ಯಗಳಲ್ಲೂ ಪ್ರಸ್ತುತ ಬೆಲೆ ಮತ್ತು ಸ್ಥಳೀಯ ಸರ್ಕಾರಗಳು ಕಬ್ಬು ಬೆಳೆಗಾರರ ಬೆಂಬಲಕ್ಕೆ ಕೈಗೊಂಡ ಕ್ರಮ, ವಾಸ್ತವಿಕ ಅಂಶಗಳ ಅಧ್ಯಯನ ಹಾಗೂ ಅಗತ್ಯ ಸಲಹೆ- ಸಹಕಾರ ಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಜಂಟಿ ಸಮಿತಿ ಅಧ್ಯಕ್ಷರ ಹಿನ್ನೆಲೆ: ಈ ಜಂಟಿ ಸಮಿತಿಗೆ ಅಧ್ಯಕ್ಷರಾಗಿ ನೇಮಕವಾಗಿರುವ ಪ್ರೊ.ರಮೇಶ್ ಚಂದ್ ಅವರು ಖ್ಯಾತ ಕೃಷಿ ಅರ್ಥಶಾಸ್ತ್ರಜ್ಞರು ಹಾಗೂ ಸಾರ್ವಜನಿಕ ನೀತಿ ತಜ್ಞರಾಗಿದ್ದಾರೆ. 2015ರಿಂದ 2026ರವರೆಗೆ ನೀತಿ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ ಮತ್ತು ಈ ಹಿಂದೆ ICAR-NIAP ನಿರ್ದೇಶಕರಾಗಿ ಹಾಗೂ ಹದಿನೈದನೇ ಹಣಕಾಸು ಆಯೋಗದ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ ಅನುಭವಿ.

ಇವರು ಕೃಷಿ ಅಭಿವೃದ್ಧಿ, ರೈತರ ಸಮಸ್ಯೆಗಳು, ಆಹಾರ ಭದ್ರತೆ, ಕೃಷಿ ಮಾರುಕಟ್ಟೆಗಳು ಮತ್ತು ಬೆಲೆ ನೀತಿಯ ವಿಷಯಗಳಲ್ಲಿ ಅಪಾರ ಪರಿಣತಿ ಹೊಂದಿದವರಾಗಿದ್ದಾರೆ.


Share

You cannot copy content of this page