ಹಾವೇರಿ: ಎಸ್ಸಿ ಎಸ್ಟಿ ಸಮುದಾಯಕ್ಕೆ ನೀಡಿದ್ದ ಹೆಚ್ಚವರಿ ಮೀಸಲಾತಿಯನ್ನು ಹೈಕೋರ್ಟ್ ರದ್ದು ಪಡಿಸಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್ ಗೆ ಹೋಗುವ ನಿರ್ಧಾರ ಮಾಡಬೇಕು ಮತ್ತು ಯಾವ ಅಂಶಗಳ ಮೇಲೆ ವಾದಿಸಬೇಕು ಎಂಬುದನ್ನು ಹಿರಿಯ ನ್ಯಾಯವಾದಿಗಳು ಹಾಗೂ ಪರಿಣಿತರೊಂದಿಗೆ ಚರ್ಚಿಸಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಅಗತ್ಯ ಸಲಹೆ ಸಹಕಾರ ನೀಡಲು ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಮೀಸಲಾತಿ ಆದೇಶದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಅವರು ಸರಿಯಾದ ರೀತಿಯಲ್ಲಿ ಮೌಖಿಕ ಸಲ್ಲಿಕೆಗಳನ್ನು ಮಾಡಿದ್ದರು. ಆದರೆ, ರಾಜ್ಯ ಸರ್ಕಾರವು 50% ಬದಲಿಗೆ 56% ರಲ್ಲೇ ಮೀಸಲಾತಿ ಮಾಡಬೇಕು ಎಂದು ಸಮರ್ಥಿಸಿಕೊಳ್ಳುವಲ್ಲಿ ವಿಫವಾಯಿತು.
ನಂತರ ಮೂರು-ನಾಲ್ಕು ಬಾರಿ ಅವಕಾಶ ನೀಡಿದರೂ ಪ್ರಯೋಜನವಾಗಲಿಲ್ಲ ಮತ್ತು ಕೊನೆಗೆ ರವಿವರ್ಮ ಕುಮಾರ್ ಅವರು ಹಾಜರಾಗಿ ವಾದ ಮಂಡಿಸಿದರು. ಈ ಎಲ್ಲಾ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಈಗ ಸುಪ್ರೀಂ ಕೋರ್ಟ್ ಮೇಲ್ಮನವಿ ಹೋಗುವುದನ್ನು ಬಿಟ್ಟು ರಾಜ್ಯ ಸರ್ಕಾರಕ್ಕೆ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು ಕೂಡಲೇ ಸುಪ್ರೀಂ ಕೋರ್ಟ್ಗೆ ಹೋಗುವ ನಿರ್ಧಾರವನ್ನು ಮಾಡಬೇಕು ಮತ್ತು ಯಾವ ಅಂಶಗಳ ಮೇಲೆ ವಾದಿಸಬೇಕು ಎಂಬುದನ್ನು ಹಿರಿಯ ನ್ಯಾಯವಾದಿಗಳು ಹಾಗೂ ಪರಿಣಿತರೊಂದಿಗೆ ಚರ್ಚಿಸಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
”ತಮಿಳುನಾಡು ವಿಶೇಷವಾಗಿ ತಮಿಳುನಾಡುದು ಶೆಡ್ಯೂಲ್ ನೈನ್ ಅಲ್ಲೇ ಇದೆ. ಆದರೂ ಕೂಡ ಈಗ ಅದನ್ನ ಕೋರ್ಟ್ ನಲ್ಲಿ ತಗೊಂಡಿದ್ದಾರೆ. ಅದು ಜುಡಿಷಿಯಲ್ ರಿವ್ಯೂ ಇರುತ್ತದೆ. ಮತ್ತೆ ಶೆಡ್ಯೂಲ್ 9 ಯಾಕೆ ಹಾಕಬೇಕು? ಜುಡಿಷಿಯಲ್ ರಿವ್ಯೂ ಇತ್ತು ಅಂದ್ರೆ ಮುಗಿದು ಹೋಯ್ತು. ಆದ್ದರಿಂದ ಶೆಡ್ಯೂಲ್ ನೈನ್ ಗೆ ಮೊದಲೇ ಇದು ಇತ್ತು. ಯಾಕಂದ್ರೆ ಸುಪ್ರೀಂಕೋರ್ಟ್ ನಲ್ಲಿದೆ, ಶೆಡ್ಯೂಲ್ ನೈನ್ ನಲ್ಲಿ ಇದ್ದರೂ ಕೂಡ ನಾವು ಅದನ್ನು ತೆಗೆದುಕೊಳ್ಳಬಹುದು ಅಂತ ಈಗಾಗ್ಲೇ ತಮಿಳುನಾಡು ಗವರ್ನಮೆಂಟ್ ಗೆ ಎಲ್ಲ ಆಗಿದೆ. ಹೀಗಾಗಿ ಶೆಡ್ಯೂಲ್ ನೈನ್ ದ ಅರ್ಥ ಉಳಿದಿಲ್ಲ. ಈಗ ಅಂತಿಮವಾಗಿ ಸುಪ್ರೀಂಕೋರ್ಟ್ ಆದೇಶ ಮಾಡಬೇಕು. ಇಲ್ಲಿ ಬಂದಿರುವ ಪ್ರಶ್ನೆ ಏನು? ಮೀಸಲಾತಿ ಪ್ರಮಾಣ 50% ಮೀರಬಾರದು ಅಂತ ಇಂದ್ರಾ ಸಹಾನಿ ಕೇಸಲ್ಲಿ ಒಂದು ಮಿತಿ ಹಾಕಿದ್ರು, ಅದು ಒಬಿಸಿ ವಿಚಾರದಲ್ಲಿ. ರಿಸರ್ವೇಷನ್ ನಲ್ಲಿ ಎರಡು ಪ್ರಮುಖವಾಗಿರುವಂತಹ ಮೂಲಭೂತ ವ್ಯತ್ಯಾಸಗಳು ಏನು ಅಂದ್ರೆ, ಎಸ್.ಸಿ. ಎಸ್.ಟಿ. ಮೀಸಲಾತಿಯೂ ಸಂವಿಧಾನದ ಅಡಿಯಲ್ಲಿಯೇ ಕೊಟ್ಟಿರುವುದು. ಒಬಿಸಿ ಮೀಸಲಾತಿಯನ್ನೂ ಸಂವಿಧಾನದ ಅಡಿಯಲ್ಲಿಯೇ ಕೊಟ್ಟಿರುವುದು.
ಆದರೆ, ಎಸ್.ಸಿ. ಎಸ್.ಟಿ. ಮೀಸಲಾತಿ ಮೂಲ ಸಂವಿಧಾನದ ಪ್ರಾವಿಷನ್ ಮೇಲೆ ಆಗಿದೆ. ಅಲ್ಲಿ ಕಾಲಕಾಲಕ್ಕೆ ಜನಸಂಖ್ಯೆ ಆಧಾರದ ಮೇಲೆ ಇದನ್ನ ಹೆಚ್ಚಿಗೆ ಮಾಡಿಕೊಂಡು ಹೋಗಬೇಕು ಅನ್ನುವಂತದ್ದು. ಅದು ಬೇರೆ ಬೇರೆ ಕೆಟಗರಿಗೆ ಇಲ್ಲ, ಇದು ಒಂದೇ ಕೆಟಗರಿ ಎಸ್.ಸಿ. ಎಸ್.ಟಿ.ಗೆ ಮಾತ್ರ ಜನಸಂಖ್ಯೆ ಆಧಾರದ ಮೇಲೆ ಹೆಚ್ಚು ಮಾಡುವಂತಹ ಅವಕಾಶ ಸಂವಿಧಾನ ನಮಗೆ ಮಾಡಿಕೊಟ್ಟಿದೆ. ಆರ್ಟಿಕಲ್ 14 ಅಲ್ಲ, ಆರ್ಟಿಕಲ್ 14 ಎಲ್ಲರಿಗೂ ಸಮಾನ ನ್ಯಾಯ ಕೊಡಬೇಕು ಅನ್ನುವುದು. ಇದು ಅದ್ರದಲ್ಲ. ಹೀಗಾಗಿ ಇದರಲ್ಲಿ ಒಂದು ಸಂವಿಧಾನಿಕ ಸೂಕ್ಷ್ಮತೆ ಇದೆ ಎಸ್.ಸಿ. ಎಸ್.ಟಿ.ಗೂ ಮತ್ತು ಇತರ ರಿಸರ್ವೇಷನ್ ಗೂ ವ್ಯತ್ಯಾಸ ಇದೆ. ಈ ಎಲ್ಲ ವಿಚಾರಗಳನ್ನು ಇಟ್ಟುಕೊಂಡೆ ನಾವು ಆವತ್ತು ಮೀಸಲಾತಿ ಹೆಚ್ಚಳ ಮಾಡಿರುವುದು ಎಂದು ತಿಳಿಸಿದ್ದಾರೆ.
ಮೀಸಲಾತಿ ಶೇ 50% ದಾಟಿದೆ
ಈ ವಿಷಯದ ಬಗ್ಗೆ ನಮಗೊಂದು ಅಂದಾಜು ಇತ್ತು ಇದು ಖಂಡಿತವಾಗಿಯೂ ಚಾಲೆಂಜ್ ಆಗೇ ಆಗುತ್ತೆ ಅಂತ. ಅಂತಿಮವಾಗಿ ಸುಪ್ರೀಂಕೋರ್ಟ್ ನಿರ್ಧಾರ ಮಾಡಬೇಕು. ಮತ್ತು ಎರಡನೆಯದಾಗಿ, ಕೇಂದ್ರ ಸರ್ಕಾರ ಎಕನಾಮಿಕ್ ವೀಕರ್ ಸೆಕ್ಷನ್ ಗೆ ಶೇ 10% ರಿಸರ್ವೇಷನ್ ಮಾಡಿದರು, ಅದಕ್ಕೆ ಸಂವಿಧಾನ ತಿದ್ದುಪಡಿ ಮಾಡಿದ್ದಾರೆ. ಅದು ಸುಪ್ರೀಂಕೋರ್ಟ್ ನಲ್ಲಿ ಸ್ಟ್ಯಾಂಡ್ ಆಗಿದೆ. ಅಂದರೆ ಶೇ 50% ಮಿತಿ ದಾಟಿ 60% ಬಂದು ಬಿಟ್ಟಿದೆ. ಆ ಹಿನ್ನೆಲೆಯಲ್ಲಿ ಇದನ್ನು ಕೂಡ ಪರಿಗಣಿಸಬೇಕು ಅನ್ನುವಂತದ್ದು ಪ್ರಬಲವಾದ ಒಂದು ವಾದ ಇದೆ.
ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ನಾವು ಸಂಪೂರ್ಣ ಅದಕ್ಕೆ ಏನು ಸಲಹೆ ಕೊಡಬೇಕು ಅದೆಲ್ಲ ಕೊಡಲಿಕ್ಕೆ ನಾವು ತಯಾರಿದ್ದೀವಿ. ಯಾವ ಹಿನ್ನೆಲೆಯಲ್ಲಿ ಮಾಡಿದ್ದೀವಿ, ಯಾವ ಆಧಾರದಲ್ಲಿ ಮಾಡಿದ್ದೀವಿ, ಯಾವ ಕಾನೂನು ಅಡಿಯಲ್ಲಿ ಮಾಡಿದ್ದೀವಿ ಅದೆಲ್ಲವನ್ನು ಕೂಡ ಮನವರಿಕೆ ಮಾಡಿಕೊಡೋಕೆ ತಯಾರಿದ್ದೇವೆ ಮತ್ತು ಈ ರಾಜ್ಯದಲ್ಲಿ ಹಲವಾರು ಕಾನೂನು ತಜ್ಞರಿದ್ದಾರೆ, ಅವರ ಅಭಿಪ್ರಾಯವನ್ನು ಪಡೆದಿದ್ದೇವೆ. ಅವರೆಲ್ಲರ ಸಲಹೆ ಪಡೆದು ಸುಪ್ರೀಂಕೋರ್ಟ್ ಗೆ ಹೋದರೆ ಎಸ್.ಸಿ. ಎಸ್.ಟಿ. ಜನಾಂಗಕ್ಕೆ ನ್ಯಾಯ ಸಿಗುತ್ತದೆ ಅಂತ ವಿಶ್ವಾಸ ನನಗಿದೆ ಎಂದು ಹೇಳಿದರು.
