ಬೆಂಗಳೂರು:ಕರ್ನಾಟಕದಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 2027ರಲ್ಲಿ ಪಾಲುದಾರ ದೇಶವಾಗಿ ಭಾಗವಹಿಸಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಸ್ವಿಟ್ಜರ್ಲ್ಯಾಂಡ್ ಗೆ ಆಹ್ವಾನ ನೀಡಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶಿವಕುಮಾರ್ ಅವರು ಭಾರತದ ಸ್ವಿಟ್ಜರ್ಲ್ಯಾಂಡ್ ರಾಯಭಾರಿ ಶ್ರೀಮತಿ ಮಾಯಾ ಟಿಫಾಸಿ ಜತೆ ಬುಧವಾರ ಚರ್ಚೆ ನಡೆಸಿದರು.
ಕರ್ನಾಟಕದಲ್ಲಿ ಬಲವಾದ ಕೈಗಾರಿಕಾ ತಳಹದಿ, ಕೌಶಲ್ಯಯುತ ಮಾನವಶಕ್ತಿ ಮತ್ತು ಕ್ರಿಯಾಶೀಲ ಆವಿಷ್ಕಾರ ಪರಿಸರ ವ್ಯವಸ್ಥೆ ಇದೆ. ಅಲ್ಲದೆ, ಟನಲ್ (ಸುರಂಗ) ಮೂಲಸೌಕರ್ಯ ಕ್ಷೇತ್ರದಲ್ಲಿ ಸ್ವಿಟ್ಜರ್ಲ್ಯಾಂಡ್ ಕಂಪನಿಗಳು ಮತ್ತು ಕರ್ನಾಟಕದ ನಡುವಿನ ಸಹಕಾರಕ್ಕೆ ಹೆಚ್ಚಿನ ಅವಕಾಶಗಳಿವೆ. ಸ್ವಿಸ್ ಕಂಪನಿಗಳು ರಾಜ್ಯದಲ್ಲಿ ಹೊಸ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಬೇಕು. ಸುಸ್ಥಿರ ಹೂಡಿಕೆಗಳನ್ನು ಬೆಂಬಲಿಸಲು, ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ರಾಜ್ಯಕ್ಕಿರುವ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ‘ಸ್ವಿಸ್ ಇನ್ವೆಸ್ಟ್ಮೆಂಟ್ ಫಂಡ್ ಫಾರ್ ಎಮರ್ಜಿಂಗ್ ಮಾರ್ಕೆಟ್ಸ್’ (SIFEM) ಕರ್ನಾಟಕದಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ” ಎಂದು ವಿವರಿಸಿದರು.
“ಕರ್ನಾಟಕದಲ್ಲಿ ಸುಮಾರು 40 ಸ್ವಿಸ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, 20,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ. ಸುಧಾರಿತ ಉತ್ಪಾದನೆ, ಎಂಜಿನಿಯರಿಂಗ್, ಫಾರ್ಮಾಸ್ಯುಟಿಕಲ್ಸ್, ಫುಡ್ ಪ್ರೊಸೆಸಿಂಗ್ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರವನ್ನು ಸ್ವಾಗತಿಸುತ್ತೇನೆ. ಮುಂದಿನ ದಿನಗಳಲ್ಲಿ ಆರಂಭಗೊಳ್ಳಲಿರುವ ಬೆಂಗಳೂರು-ಜ್ಯೂರಿಚ್ ನಡುವಿನ ನೇರ ವಿಮಾನ ಸಂಪರ್ಕವು ವ್ಯಾಪಾರ ಮತ್ತು ಸಾರ್ವಜನಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ” ಎಂದು ಅಭಿಪ್ರಾಯಪಟ್ಟರು.
ದಾವೋಸ್ ಎಐ ಶೃಂಗಸಭೆಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಆಹ್ವಾನ
ಮಾಯಾ ಟಿಫಾಸಿ ಅವರು ಮಾತನಾಡಿ, “ತಮ್ಮ ದೇಶದ ವಿಶ್ವ ಪ್ರಸಿದ್ಧ ಆತಿಥ್ಯ (ಹಾಸ್ಪಿಟಾಲಿಟಿ) ಶಿಕ್ಷಣ ಸಂಸ್ಥೆಗಳ ಅನುಭವವನ್ನು ಬಳಸಿಕೊಂಡು ಕರ್ನಾಟಕದಲ್ಲಿ ಉನ್ನತ ಮಟ್ಟದ ಆತಿಥ್ಯ ತರಬೇತಿ ಸಂಸ್ಥೆಯನ್ನು ಸ್ಥಾಪಿಸುವ ಅವಕಾಶವಿದೆ. ಸಾಂಸ್ಕೃತಿಕ ಪರಂಪರೆಯ ವಿನಿಮಯವನ್ನು ಸುಗಮಗೊಳಿಸಲು ಸ್ವಿಟ್ಜರ್ಲ್ಯಾಂಡ್ಗೆ ಅಧ್ಯಯನ ಪ್ರವಾಸಗಳನ್ನು ಆಯೋಜಿಸುವ ಅಗತ್ಯವಿದೆ. ಇದು ಸ್ವಿಟ್ಜರ್ಲ್ಯಾಂಡಿನ ಉತ್ತಮ ಅಭ್ಯಾಸಗಳಿಂದ (Best Practices) ಕರ್ನಾಟಕಕ್ಕೆ ಪ್ರಯೋಜನವಾಗುವಂತೆ ಮಾಡಲು ಮತ್ತು ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ನೆರವಾಗಲಿದೆ. 2027ರಲ್ಲಿ ಸ್ವಿಟ್ಜರ್ಲ್ಯಾಂಡಿನ ದಾವೋಸ್ ನಲ್ಲಿ ನಡೆಯಲಿರುವ ಎಐ ಶೃಂಗಸಭೆಯಲ್ಲಿ ಭಾಗವಹಿಸಿ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಿದರು.
