ಹಾವೇರಿ(ಶಿಗ್ಗಾವಿ): ಸಾಮಾನ್ಯ ಜನರಿಗೆ ಕಾನೂನಿನ ಅರಿವು ಮೂಡಿಸುವಲ್ಲಿ ವಕೀಲರ ಪಾತ್ರ ಬಹಳ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಹಾವೇರಿ ಮತ್ತು ಲೋಕೋಪಯೋಗಿ ಇಲಾಖೆ, ಹಾವೇರಿ. ನ್ಯಾಯವಾದಿಗಳ ಸಂಘ, ಶಿಗ್ಗಾಂವ ಇವರ ಸಹಯೋಗದಲ್ಲಿ ನ್ಯಾಯವಾದಿಗಳ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಜಾಪಭುತ್ವದ ಬಗ್ಗೆ ಬಹಳಷ್ಟು ಮಾತನಾಡಿದ್ದೇವೆ. ಆದರೆ, ನಮ್ಮ ಪ್ರಜಾಪ್ರಭುತ್ವ ಯಾವ ರೀತಿ ಇದೆ. ಬೇರೆ ಪ್ರಜಾಪಭುತ್ವಕ್ಕಿಂತ ಹೇಗೆ ಭಿನ್ನ ಇದೆ. ಅದನ್ನು ಅರಿವು ಮೂಡಿಸುವ ಕೆಲಸ ಎಪ್ಪತ್ತೈದು ವರ್ಷ ಆದರೂ ಆಗಿಲ್ಲ. ಹೊಲದಲ್ಲಿ ಕೆಲಸ ಮಾಡುವ, ದುಡಿಯುವ ವ್ಯಕ್ತಿಗೆ ಸಂವಿಧಾನ ಕಾನೂನು ಗೊತ್ತಿಲ್ಲ. ಶೇ 40 ರಷ್ಟು ಜನರು ಈ ರೀತಿ ಇದ್ದಾರೆ. ನಮಗೆ ಸ್ವಾತಂತ್ರ್ಯ ಬಂದಾಗ ಶೇ 70 ರಷ್ಟು ಜನರಿಗೆ ಓದು ಬರಹ ಗೊತ್ತಿರಲಿಲ್ಲ. ಈಗ 140 ಕೋಟಿ ಜನರಾಗಿದ್ದರೂ ಸಂವಿಧಾನದ ಬಗ್ಗೆ ಸರಿಯಾದ ಜ್ಞಾನ ಮೂಡಿಲ್ಲ. ಅದು ಶಿಕ್ಷಣ ಮುಖಾಂತರ ಅರಿವು ಮೂಡಿಸಬೇಕು. ನಮ್ಮದೇಶದ ಸಂವಿಧಾನ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಸರ್ಕಾರದ ಕೆಲಸ. ವ್ಯವಸ್ಥೆಯ ಹೊರತಾಗಿ ಕಾನೂನಿನ ಪರಿಚಯ ಇದ್ದವರು ಹಾಗೂ ಕಾನೂನು ನಿರಂತರವಾಗಿ ಉಸಿರಾಟ ಮಾಡುವುದು ವಕೀಲಿ ವೃತ್ತಿ. ಇಂತಹ ಮಹತ್ವದ ವೃತ್ತಿಯಲ್ಲಿ ಇದ್ದೀರಿ ಕಾನೂನಿನ ಅರಿವು ಮೂಡಿಸುವಲ್ಲಿ ತಮ್ಮ ಪಾತವೂ ಬಹಳ ಮುಖ್ಯ ಎಂದು ಹೇಳಿದರು.
ಸಂವಿಧಾನ ರಚನಾ ಸಮಿತಿಯಲ್ಲಿ ಮೂರ್ನಾಲ್ಕು ಜನರನ್ನು ಬಿಟ್ಟರೇ ಅಂಬೇಡ್ಕರ್ ಸೇರಿದಂತೆ ಎಲ್ಲರೂ ವಕೀಲರೆ ಇದ್ದರು. ಬೇರೆ ಬೇರೆ ದೇಶಗಳ ಸಂವಿಧಾನ ಅಧ್ಯಯನ ಮಾಡಿ ಜೀವಂತ ಸಂವಿಧಾನ ಕೊಟ್ಟಿದ್ದಾರೆ. ಜಗತ್ತಿನ ಸಂವಿಧಾನಗಳನ್ನು ನೋಡಿದಾಗ ಬಹಳ ವ್ಯತ್ಯಾಸ ಇದೆ. ನಮ್ಮ ಸಾಮಾಜಿಕ, ಆರ್ಥಿಕ ಬದಲಾವಣೆಗಳನ್ನು ವಿಶ್ವದ ಬೇರೆ ಬೇರೆ ಪ್ರಭಾವಗಳ ಅನುಗಣವಾಗಿ ಕಾಲಕಾಲಕ್ಕೆ ತಿದ್ದುಪಡಿ ಮಾಡಲು ಅವಕಾಶ ಇಟ್ಟು ಸದಾಕಾಲ ಜೀವಂತ ಇರುವ ಸಂವಿಧಾನವನ್ನು ಬಾಬಾ ಅಸಾಹೇಬ್ ಅಂಬೇಡ್ಕರ್ ಮಾಡಿಕೊಟ್ಟಿದ್ದಾರೆ. ಇದು ಬಹಳ ಮುಖ್ಯ ನಮ್ಮ ಸಂವಿಧಾನಕ್ಕೆ ಅತಿ ಹೆಚ್ಚು ತಿದ್ದುಪಡಿ ಆಗಿವೆ. ಬೇರೆ ರಾಷ್ಟ್ರಗಳಲ್ಲಿ ಇಷ್ಟೊಂದು ತಿದ್ದುಪಡಿ ಆಗಿಲ್ಲ. ಸಾಮಾಜಿಕ ಬದಲಾವಣೆಯ ಜೊತೆಗೆ ಹಲವಾರು ಸವಾಲುಗಳು ಬರುತ್ತವೆ. ಬದಲಾವಣೆಗೆ ತಕ್ಕಂತೆ ರಕ್ಷಣೆ ಕೊಡುವ ಕೆಲಸವನ್ನು ಸಂವಿಧಾನ ಮಾಡಿದೆ ಎಂದು ಹೇಳಿದರು.
ಸ್ಪಷ್ಟತೆ ಇರಲಿ
ನಾಲ್ಕು ಬಾರಿ ಸಂಸತ್ತಿನಲ್ಲಿ ಶೇ 45 ರಿಂದ ಐವತ್ತರಷ್ಟು ವಕೀಲರಿದ್ದರು. ಈಗ ಅದು ಶೇ 5 ಕ್ಕೆ ಇಳಿದಿದೆ. ಹೀಗಾಗಿ ಕಾನೂನು ಮಾಡುವುದು ಕಾನೂನು ಇಲಾಖೆ ಕಾನೂನಿನಲ್ಲಿ ಗೊಂದಲ ಇರಬಾರದು. ಅದರಿಂದ ಬಹಳಷ್ಟು ಸಮಸ್ಯೆ, ಜಿಜ್ಞಾಸೆ ಉಂಟಾಗುತ್ತದೆ. ನಾನು ಕಾನೂನು ಸಚಿವನಾಗಿ ಕೆಲಸ ಮಾಡಿದ್ದೇನೆ. ಯಾವುದೇ ಕಾನೂನಿದ್ದರೆ, ವಿಥ್ ಸ್ಟ್ಯಾಂಡಿಂಗ್, ಇಪ್, ಸೋ, ಪದಗಳನ್ನು ಕಡಿಮೆ ಮಾಡಿದಷ್ಟು ಸ್ಪಷ್ಟತೆ ಇರುತ್ತದೆ. ವಕೀಲರು ವಾದ ಮಾಡುವಾಗ ಈ ಗೊಂದಲವನ್ನು ತೆಗೆದು ಹಾಕಿ ಸ್ಪಷ್ಟವಾದ ಕಾನೂನಿನ ಉದ್ದೇಶ ಏನಿದೆ ಎನ್ನುವ ನೈಪುಣ್ಯತೆ ನಿಮಗೆ ಇರಬೇಕು. ಅಂದಾಗ ಪರಿಪೂರ್ಣ ಫಲಿತಾಂಶ ಬರುತ್ತದೆ ಎಂದು ಹೇಳಿದರು.
ಶಿಗ್ಗಾವಿ ಸವಣೂರಿನಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಆ ಪರಂಪರೆ ಮುಂದುವರೆಸಿಕೊಂಡು ಹೋಗಬೇಕು. ಶಿಗ್ಗಾವಿ ಸವಣೂರು ಬಹಳ ಕೆಲಸ ಇದೆ. ಒಂದು ಕೆಲಸ ಮುಗಿಯುವುದರೊಳಗೆ ಮತ್ತೊಂದು ಕೆಲಸ
ಶುರುವಾಗುತ್ತದೆ. ಶಂಕರಗೌಡರ ಪುಣ್ಯದಿಂದ ಇಲ್ಲಿ ಜಾಗ ಸಿಕ್ಕಿದೆ. ಒಳ್ಳೆಯ ಕಟ್ಟಡ ಆಗಿದೆ. ಶಂಕರ ಗೌಡರಿಗೆ ವಕೀಲರ ಬಗ್ಗೆ ಅಪಾರ ಅಭಿಮಾನ ಗೌರವ ಇತ್ತು. ನಿಮಗೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ, ಇನ್ನೊಂದು ಜೂನಿಯರ್ ಜೆಎಂಎಫ್‌ಸಿ ಆಗುತ್ತದೆ. ಆದು ಆದ ತಕ್ಷಣ ಕೇಸ್‌ಗಳ ವಿಲೇವಾರಿ ಬೇಗ ಆಗುತ್ತದೆ. ನಾಲ್ಕು ಸಾವಿರ ಪ್ರಕರಣಗಳಿವೆ. ವಕೀಲರು ಹೆಚ್ಚಾಗಿದ್ದಾರೆ. ಆ ಸಂಖ್ಯೆಗೆ ಅನುಗುಣವಾಗಿ ವಕೀಲರು ಹಾಗೂ ಜಡ್ಜ್ ಗಳ ಸಂಖ್ಯೆ ಬಹಳ ಕಡಿಮೆ ಇದೆ ಎಂದರು.
ಈ ಕಟ್ಟಡಕ್ಕೆ ಅನುಮತಿ ನೀಡುವ ಸೌಭಾಗ್ಯ ನನ್ನದಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ವಕೀಲರ ಸಂಘದವರು ಬಹಳ ಒತ್ತಡ ಮಾಡಿದ್ದರು. ನಿಮ್ಮ ಪ್ರೀತಿ ವಿಶ್ವಾಸ ನನ್ನನ್ನು ಇಲ್ಲಿಗೆ ಕರೆ ತಂದಿದೆ. ನಾನು ಶಿಷ್ಟಾಚಾರ ಉಲ್ಲಂಘನೆ ಮಾಡಿ ಎಲ್ಲಿಯೂ ಹೋಗುವುದಿಲ್ಲ. ಯಾರೂ ಶಾಸ್ವತ ಅಲ್ಲ. ಈ ದೇಶ ನಾಡು ಸಮಾಜ ಶಾಸ್ವತ. ಪ್ರಜಾರ್ಪಭುತ್ವಕ್ಕೆ ಶಕ್ತಿ ತುಂಬುವ ಕೆಲಸ ಮಾಡಿ, ಸಂವಿಧಾನ ಎತ್ತಿ ಹಿಡಿಯುವ ಕೆಲಸ ಮಾಡಿ, ಶಿಗ್ಗಾವಿ ಸವಣೂರು ಬಾರ್ ಇಡೀ ದೇಶದಲ್ಲಿಯೇ ಪ್ರಖ್ಯಾತಿಯಾಗುವ ಕೆಲಸ ಮಾಡುವ ವಿಶ್ವಾಸ ಇದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪ್ರಧಾನ ಹಾವೇರಿ ಜಿಲ್ಲಾ ವ ಸತ್ರ ನ್ಯಾಯಾಧೀಶರಾದ ಗೌರವಾನ್ವಿತ ದೇವೆಂದ್ರಪ್ಪ ಎನ್. ಬಿರಾದಾರ, ಶಿಗ್ಗಾವಿಯ ಹಿರಿಯ ದಿವಾಣಿ ವ, ಜೆ.ಎಮ್.ಎಫ್.ಸಿ. ನ್ಯಾಯಾಧೀಶರಾದ ಸನ್ಮಾನ್ಯ ಸುನೀಲ ಎಸ್. ತಳವಾರ, ಶಾಸಕರಾದ ಯಾಸೀರ ಅಹ್ಮದಖಾನ ಪಠಾಣ, ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ, ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಎಸ್.ಬಿ ಲಕ್ಕಣ್ಣವರ, ಕಾರ್ಯದರ್ಶಿಗಳಾದ ವಿವೇಕ ಎಂ ರಾಮಗೇರಿ, ಉಪಾಧ್ಯಕ್ಷರಾದ ಎಸ್.ಜಿ ಟೋಪಣ್ಣನವರ, ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯರಾದ ಬಿ.ವಿ ಕೋರಿಮಠ, ಭೂದಾನಿಗಳಾದ ಶ್ರೀಮತಿ ಸುಶೀಲಾಬಾಯಿ ಶಂಕರಗೌಡ ಪಾಟೀಲ್ ಹಾಗೂ ಸಿದ್ದಾರ್ಥಗೌಡ ಪಾಟೀಲ್ ಸೇರಿದಂತೆ ವಕೀಲರ ಸಂಘದ ಸರ್ವ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
