ಬೆಂಗಳೂರು:ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಶಾಶ್ವತ ಯೋಜನೆ ರೂಪಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 43 ವಾರ್ಡ್ಗಳಲ್ಲಿ ಹಮ್ಮಿಕೊಳ್ಳಲಾಗುತ್ತಿರುವ “ವಾರ್ಡ್ ಒನ್” ಅಭಿಯಾನದ ಅಂಗವಾಗಿ, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಇಂದು ಪಿಲ್ಲರ್ಗಳಿಗೆ ಬಣ್ಣ ಬಳಿಯುವ ಮೂಲಕ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಈ ಜಂಕ್ಷನ್ನಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಸಂಚರಿಸುತ್ತಾರೆ. ಇಲ್ಲಿ ಮೇಲ್ಸೇತುವೆ, ಮೆಟ್ರೋ, ಎಲೆಕ್ಟ್ರಾನಿಕ್ ಸಿಟಿ ಮಾರ್ಗ, ಔಟರ್ ರಿಂಗ್ ರೋಡ್ ಹಾಗೂ ಎನ್ಎಚ್ಎಐ ಎಲಿವೇಟೆಡ್ ರಸ್ತೆ ಸೇರಿದಂತೆ ಹಲವು ಪ್ರಮುಖ ಮೂಲಸೌಕರ್ಯ ಯೋಜನೆಗಳಿವೆ. ಇದರೊಂದಿಗೆ ಮೆಟ್ರೋ ಹಾಗೂ ರಾಜಕಾಲುವೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಭಾಗದಲ್ಲಿದ್ದ ಬಹುತೇಕ ಸಮಸ್ಯೆಗಳನ್ನು ಈಗಾಗಲೇ ಬಗೆಹರಿಸಲಾಗಿದೆ ಎಂದು ತಿಳಿಸಿದರು.
ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಈಗಾಗಲೇ ಪಾಲಿಕೆ ಹಾಗೂ ಸ್ವಯಂಸೇವಾ ಸಂಸ್ಥೆಗಳು ಒಟ್ಟಾಗಿ ಹಲವು ಸುಧಾರಣಾ ಕಾರ್ಯಗಳನ್ನು ಕೈಗೊಂಡಿವೆ. ಇದೀಗ ವಾರ್ಡ್ ಒನ್ ಅಭಿಯಾನದಡಿ ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಜಂಕ್ಷನ್ಗಳಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಸೌಂದರ್ಯೀಕರಣಕ್ಕೂ ಕ್ರಮ ಕೈಗೊಳ್ಳಲಾಗುವುದು. ಮೇಲ್ಸೇತುವೆಗಳ ಕೆಳಭಾಗದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು, ಸುಂದರವಾಗಿ ಅಭಿವೃದ್ಧಿಪಡಿಸಿ, ನಾಗರಿಕರು ವಿಶ್ರಾಂತಿ ಪಡೆಯಲು ಆಸನ ಹಾಗೂ ಆಟವಾಡಲು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ರಾಜಕಾಲುವೆಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಐಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಯೋಜನೆ ರೂಪಿಸಿ, ನಾಗರಿಕರು ಕುಳಿತು ವಿಶ್ರಾಂತಿ ಪಡೆಯಲು ಆಸನ ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸುವ ಮೂಲಕ ಜಾಗವನ್ನು ಸುಂದರಗೊಳಿಸಬೇಕು ಎಂದು ಸೂಚಿಸಿದರು. ಅಲ್ಲದೆ, ಮಣ್ಣಿರುವ ಕೆಲವು ಭಾಗಗಳಲ್ಲಿ ಬ್ರಷ್ ಕಾಂಕ್ರೀಟ್ ಅಳವಡಿಸಿ ಸ್ವಚ್ಛತೆ ಕಾಪಾಡುವಂತೆ ನಿರ್ದೇಶನ ನೀಡಿದರು.
ಜಂಕ್ಷನ್ ಭಾಗದಲ್ಲಿ 60 ಮೀಟರ್ ಉದ್ದದ ಬೃಹತ್ ನೀರುಗಾಲುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಪ್ರತಿ 2 ಮೀಟರ್ಗೆ ಒಂದರಂತೆ ಒಟ್ಟು 30 ಗರ್ಡರ್ಗಳನ್ನು ಅಳವಡಿಸಲಾಗುವುದು. ಆರ್ಸಿಸಿ ತಡೆಗೋಡೆ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ, ಗರ್ಡರ್ಗಳನ್ನು ಅಳವಡಿಸುವ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಸೂಚನೆ ನೀಡಿದರು.
ಜಂಕ್ಷನ್ ಅಭಿವೃದ್ಧಿಗೆ ಅನುದಾನ:
ಪಾಲಿಕೆ ಹಾಗೂ ಸ್ವಯಂಸೇವಾ ಸಂಸ್ಥೆಗಳು ಜಂಟಿಯಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ನ ಮೇಲ್ಸೇತುವೆ ಕೆಳಭಾಗದಲ್ಲಿದ್ದ ತ್ಯಾಜ್ಯ ಹಾಗೂ ಭಗ್ನಾವಶೇಷಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಂಡಿವೆ. ಪಿಲ್ಲರ್ಗಳಿಗೆ ಬಣ್ಣ ಬಳಿಯುವ ಕಾರ್ಯವನ್ನೂ ಮಾಡಲಾಗಿದೆ. ಪಾಲಿಕೆಯಿಂದ ರಸ್ತೆ ಮೇಲ್ಮೈ ದುರಸ್ತಿ, ರಸ್ತೆ ಗುಂಡಿಗಳ ಮುಚ್ಚುವಿಕೆ ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ ಡಿವೈಡರ್/ಬ್ಯಾರಿಕೇಡ್ ಗಳ ಅಳವಡಿಕೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದರ ಜೊತೆಗೆ ಜಂಕ್ಷನ್ನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ, ಅದಕ್ಕೆ ಅಗತ್ಯವಿರುವ ಅನುದಾನವನ್ನು ಒದಗಿಸುವಂತೆ ಆಯುಕ್ತರಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.
ಜಂಕ್ಷನ್ನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ:
ಜಂಕ್ಷನ್ನಲ್ಲಿ ಪ್ರತಿನಿತ್ಯ ಸಹಸ್ರಾರು ನಾಗರಿಕರು ಸಂಚರಿಸುವುದರಿಂದ ಅವರ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಪಾದಚಾರಿ ಮಾರ್ಗಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಾಹನಗಳ ಸಂಚಾರಕ್ಕೆ ಫ್ರೀ ಲೆಫ್ಟ್ ವ್ಯವಸ್ಥೆ ಕಲ್ಪಿಸಿ:
ಎಲೆಕ್ಟ್ರಾನಿಕ್ ಸಿಟಿಯಿಂದ ಬಿಟಿಎಂ ಲೇಔಟ್ ಕಡೆಗೆ ಸಂಚರಿಸುವ ಮಾರ್ಗದಲ್ಲಿ ರಾಜಕಾಲುವೆಯ ಮೇಲ್ಭಾಗಕ್ಕೆ ಸ್ಟೀಲ್ ಗ್ರಿಡ್ ಅಳವಡಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಹಾಗೂ ಫ್ರೀ ಲೆಫ್ಟ್ ತಿರುವಿಗೆ ಅನುಕೂಲ ಕಲ್ಪಿಸಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಇದರ ಜೊತೆಗೆ ರಾಜಕಾಲುವೆಯ ಪಕ್ಕದಲ್ಲಿ ಪಾದಚಾರಿ ಮಾರ್ಗ ನಿರ್ಮಿಸುವಂತೆಯೂ ನಿರ್ದೇಶನ ನೀಡಿದರು.
ನಾಗರಿಕರ ವಿಶ್ರಾಂತಿಗೆ ಅಗತ್ಯ ಸೌಲಭ್ಯ:
ಜಂಕ್ಷನ್ನ ಮೇಲ್ಸೇತುವೆ ಕೆಳಭಾಗದ ಪಿಲ್ಲರ್ಗಳಿಗೆ ಬಣ್ಣ ಬಳಿಯುವುದರ ಜೊತೆಗೆ, ನೆಲಕ್ಕೆ ಕರ್ಬ್ ಸ್ಟೋನ್ಗಳನ್ನು ಅಳವಡಿಸಿ ನಾಗರಿಕರು ವಿಶ್ರಾಂತಿ ಪಡೆಯಲು ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ, ನಾಗರಿಕರು ಆಟವಾಡಲು ಅನುಕೂಲವಾಗುವಂತೆ ಥ್ರೋಬಾಲ್ ಕೋರ್ಟ್ ನಿರ್ಮಿಸಲಾಗುತ್ತಿದ್ದು, ಅದರ ಜೊತೆವೆ ಟೇಬಲ್ ಟೆನಿಸ್ ಸೇರಿದಂಗೆ ಇತರೆ ಚಟುವಟಿಕೆಗಳಿಗಳ ವ್ಯವಸ್ಥೆ ಮಾಡಲು ಸೂಚಿಸಿದರು.
ಜಲಮಂಡಳಿ ಅಧಿಕಾರಿಗಳಿಗೆ ತರಾಟೆ:
ಬೃಹತ್ ನೀರುಗಾಲುವೆಯಲ್ಲಿ ಕೊಳಚೆ ನೀರು ಹರಿದುಬರುತ್ತಿರುವುದನ್ನು ಗಮನಿಸಿದ ಸಚಿವರು, ಈ ಕುರಿತು ಜಲಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೊಳಚೆ ನೀರು ರಾಜಕಾಲುವೆಗೆ ಹರಿದುಬರುವುದನ್ನು ತಡೆಯಲು ಸಾಕಷ್ಟು ಹಣ ವ್ಯಯ ಮಾಡಿದ್ದರೂ, ಕೊಳಚೆ ನೀರು ಹರಿದುಬರುವುದರಲ್ಲಿ ಯಾವುದೇ ಗಮನಾರ್ಹ ಇಳಿಕೆಯಾಗಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹೊಸ ಕಾಲುವೆ ನಿರ್ಮಾಣಕ್ಕೆ ಸೂಚನೆ:
ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಎಚ್ಎಸ್ಆರ್ ಲೇಔಟ್ ಕಡೆಗೆ ಮಳೆಯಾದ ಸಂದರ್ಭದಲ್ಲಿ ಉಂಟಾಗುವ ಜಲಾವೃತ ಸಮಸ್ಯೆಯನ್ನು ತಡೆಗಟ್ಟಲು ಹೊಸದಾಗಿ ಕಾಲುವೆ ನಿರ್ಮಿಸುವ ಅಗತ್ಯವಿದೆ. ಈ ಸಂಬಂಧ ಬಿ-ಸ್ಮೈಲ್ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಅದರ ಜೊತೆಯಲ್ಲಿಯೇ ಹೊಸ ಕಾಲುವೆ ನಿರ್ಮಾಣಕ್ಕೂ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರು ಸಿಲ್ಕ್ ಪರಿಕಲ್ಪನೆಯಲ್ಲಿ ವಿನ್ಯಾಸ
ಮೇಲ್ಸೇತುವೆ ಕೆಳಭಾಗದ ಪ್ರದೇಶದ ಅಭಿವೃದ್ಧಿಗೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಸಹಭಾಗಿತ್ವದಲ್ಲಿ ಸಿಜಿಐ ಸಂಸ್ಥೆಯು ತನ್ನ ಸಿಎಸ್ಆರ್(ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಉಪಕ್ರಮದಡಿ ಸಹಕಾರ ನೀಡುತ್ತಿದೆ. ಮೈಸೂರು ರೇಷ್ಮೆ (Mysuru Silk) ಪರಿಕಲ್ಪನೆಯ ವಿನ್ಯಾಸ ಮತ್ತು ಅನುಷ್ಠಾನದ ಕಾರ್ಯವನ್ನು ಇಂಡಿಯಾ ರೈಸಿಂಗ್ ಟ್ರಸ್ಟ್ ಎಂಬ ಎನ್ಜಿಒ ನಿರ್ವಹಿಸಿದೆ. ಈ ಸಂಸ್ಥೆಯು ಈಗಾಗಲೇ 5ಕ್ಕೂ ಹೆಚ್ಚು ಫ್ಲೈಓವರ್ ಕೆಳಭಾಗದ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದೆ.
ಈ ಸಂದರ್ಭದಲ್ಲಿ ಶಾಸಕರಾದ ಸತೀಶ್ ರೆಡ್ಡಿ, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ರಮೇಶ್ ಕೆ.ಎನ್., ಅಪರ ಆಯುಕ್ತರಾದ ನವೀನ್ ಕುಮಾರ್ ರಾಜು, ಜಂಟಿ ಆಯುಕ್ತರಾದ ಸತೀಶ್ ಬಾಬು, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಮಾಲತಿ, ರಾಜೇಶ್ ಸೇರಿದಂತೆ ಮೆಟ್ರೋ, ಜಲಮಂಡಳಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
