ನವದೆಹಲಿ : ಕನ್ನಡ ರಾಜ್ಯೋತ್ಸವದ ನಿಮಿತ್ತ ಕೇಂದ್ರ ಸರಕಾರಿ ಸ್ವಾಮ್ಯದ ಹೆಚ್ಎಂಟಿ ಕಂಪನಿಯು ‘hmt ಕನ್ನಡಿಗ’ ಎನ್ನುವ ನೂತನ ಸರಣಿಯ ವಿಶಿಷ್ಟವಾದ ಕೈ ಗಡಿಯಾರಗಳನ್ನು ತಯಾರು ಮಾಡಿದ್ದು, ಭಾನುವಾರ ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೈಗಡಿಯಾರಗಳನ್ನು ಕನ್ನಡಿಗರಿಗೆ ಸಮರ್ಪಣೆ ಮಾಡಲಿದ್ದಾರೆ.
ಈ ಕಾರ್ಯಕ್ರಮವು ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್ಎಂಟಿ ಆಟದ ಮೈದಾನದಲ್ಲಿ ನಡೆಯಲಿದ್ದು, ಅಪಾರ ಪ್ರಮಾಣದಲ್ಲಿ ಕನ್ನಡಿಗರು, ಕನ್ನಡಪರ ಹೋರಾಟಗಾರರು ಭಾಗಿಯಾಗಲಿದ್ದಾರೆ.
ನವದೆಹಲಿಯಲ್ಲಿ ಶನಿವಾರ ಬೆಳಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು; ಕರ್ನಾಟಕ 71ನೇ ರಾಜ್ಯೋತ್ಸವ ಸಂಭ್ರಮದಲ್ಲಿದೆ. ಕೇಂದ್ರ ಸರ್ಕಾರದ ಕಾರ್ಖಾನೆಯಾದರೂ ಮೊದಲಿನಿಂದಲೂ ಹೆಚ್ಎಂಟಿ ಕನ್ನಡ ನಾಡು ನುಡಿ, ಸಂಸ್ಕೃತಿ, ಪರಂಪರೆಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡುತ್ತಾ ಬಂದಿದೆ. ಅದಕ್ಕೆ ಪೂರಕವಾಗಿ ಈ ರಾಜ್ಯೋತ್ಸವಕ್ಕೆ ನೂತನ ಸರಣಿಯ 5 ಅತ್ಯುತ್ತಮ ಗುಣಮಟ್ಟದ ಕೈಗಡಿಯಾರಗಳನ್ನು ಕರ್ನಾಟಕಕ್ಕೆ ನೀಡುತ್ತಿದೆ ಎಂದು ಹೇಳಿದರು.
ಭಾರತದ ಸಮಯಪಾಲಕ ಹಾಗೂ ಕರ್ನಾಟಕದ ಹೆಮ್ಮೆ ಎಂದೇ ಪ್ರಖ್ಯಾತವಾಗಿರುವ ಹೆಚ್ಎಂಟಿ ತಯಾರಿಸಿರುವ ಅನೇಕ ವಿಶೇಷ ಕೈಗಡಿಯಾರಗಳಲ್ಲಿ ನೂತನ ಸರಣಿ ಗಡಿಯಾರಗಳು ಮತ್ತಷ್ಟು ವಿಶಿಷ್ಟವಾಗಿದೆ ಎಂದ ಸಚಿವರು; ಚೈನು ಮತ್ತು ಬೆಲ್ಟ್ (ಸ್ಟ್ರ್ಯಾಪ್) ನಮೂನೆಗಳಲ್ಲಿ ಇವು ಲಭ್ಯವಾಗಲಿವೆ. ಇವುಗಳ ಬೆಲೆ ₹3,500 ರಿಂದ ₹3,600 ಇರುತ್ತದೆ. ಅತ್ಯಾಧುನಿಕ ತಂತ್ರಜ್ಞಾನ, ರೇಡಿಯಮ್ ಹೊಳಪು ಇರುವಂತಹ ಈ ಕೈಗಡಿಯಾರಗಳು ಕನ್ನಡಿಗರಿಗೆ ಬಹಳ ಇಷ್ಟವಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಬೆಲ್ಟ್ ಗಡಿಯಾರಗಳಿಗೆ ಇಟಲಿಯ ಅಪ್ಪಟ ಚರ್ಮದ ಬೆಲ್ಟ್ಗಳನ್ನು ಅಳವಡಿಸಲಾಗಿದೆ. ಒಂದು ಬೆಲ್ಟಿನ ಬೆಲೆಯೇ ₹450 ಇದೆ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ಈ ಕಾರ್ಯಕ್ರಮದಲ್ಲಿ ಕೈಗಡಿಯಾರಗಳ ಕಲರವ ಒಂದಡೆಯಾದರೆ, ಕನ್ನಡಿಗರ ಮನರಂಜಿಸಲು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಸಂಗೀತ ಸಂಜೆ ಏರ್ಪಾಟು ಮಾಡಲಾಗಿದೆ. ಅಲ್ಲದೆ ಈ ಸುಂದರ ಕಾರ್ಯಕ್ರಮದಲ್ಲಿ ಸುಮಾರು 25ರಿಂದ 30 ಪ್ರಮುಖ ಕನ್ನಡ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಅವರೆಲ್ಲರೊಂದಿಗೆ ಶನಿವಾರ ನವದೆಹಲಿಯಿಂದಲೇ ಸಂವಾದ ನಡೆಸಿದ್ದೇನೆ. ಕನ್ನಡ ನಾಡುನುಡಿ ವಿಷಯದಲ್ಲಿ ಅವಿರತವಾಗಿ ಹೋರಾಟ ನಡೆಸುವ ಹೋರಾಟಗಾರರ ಸಹಕಾರವನ್ನು ಕೋರಿದ್ದೇನೆ ಎಂದು ಸಚಿವರು ಮಾಹಿತಿ ನೀಡಿದರು.
ಬಾಲ್ಯದಿಂದಲೂ ನಾನು ಹೆಚ್ಎಂಟಿ ಗಡಿಯಾರಗಳ ಅಭಿಮಾನಿ. ಈ ಗಡಿಯಾರಗಳ ಬಗ್ಗೆ ಕನ್ನಡಿಗರಿಗೆ ಭಾವನಾತ್ಮಕ ಬಾಂಧವ್ಯ ಇದೆ. ಅಲ್ಲದೆ ಈಗಲೂ ಕೂಡ ಯುವಜನರು ಕಿಲೋಮೀಟರ್ ಗಟ್ಟಲೆ ಸಾಲಾಗಿ ನಿಂತು ಹೆಚ್ಎಂಟಿ ವಾಚುಗಳನ್ನು ಖರೀದಿ ಮಾಡಿ ಸಂಭ್ರಮಿಸುತ್ತಿದ್ದಾರೆ. ಹೀಗಾಗಿ ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಅವಿರತವಾಗಿ ಪ್ರಯತ್ನ ಮಾಡುತ್ತಿದೆ. ಬೃಹತ್ ಕೈಗಾರಿಕೆ ಸಚಿವನಾಗಿ ನನ್ನ ಅಧೀನದಲ್ಲಿಯೇ ಈ ಕಾರ್ಖಾನೆ ಬರಲಿದ್ದು, ಇದನ್ನು ಉಳಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಸಚಿವರು ಹೇಳಿದರು.
