ಸಮಗ್ರ ಸುದ್ದಿ

ಜನಸ್ನೇಹಿ ಜಂಕ್ಷನ್ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ: ಸಚಿವ ಕೃಷ್ಣ ಬೈರೇಗೌಡ

Share

ಬೆಂಗಳೂರು:ಕೆ.ಆರ್. ಪುರಂ ಟಿನ್ ಫ್ಯಾಕ್ಟರಿ ಜಂಕ್ಷನ್ ಅನ್ನು ಜನಸ್ನೇಹಿ ಹಾಗೂ ಪಾದಚಾರಿ ಸ್ನೇಹಿ ಜಂಕ್ಷನ್ ಆಗಿ ಅಭಿವೃದ್ಧಿಪಡಿಸಲು ಸಮಗ್ರ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಕೆ.ಆರ್. ಪುರಂ ಟಿನ್ ಫ್ಯಾಕ್ಟರಿ ಬಳಿ ಎರಡನೇ ಹಂತದ ವಾರ್ಡ್ ಒನ್ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಗರದ ಪ್ರಮುಖ ಸಂಚಾರ ಕೇಂದ್ರವಾಗಿರುವ ಟಿನ್ ಫ್ಯಾಕ್ಟರಿ ಜಂಕ್ಷನ್‌ನಲ್ಲಿನ ರಸ್ತೆ, ಪಾದಚಾರಿ ಮಾರ್ಗ, ಸಾರ್ವಜನಿಕ ಸಾರಿಗೆ ಹಾಗೂ ಇತರ ಮೂಲಸೌಕರ್ಯ ಸಮಸ್ಯೆಗಳನ್ನು ಸಮಗ್ರವಾಗಿ ಪರಿಹರಿಸಲು ಮಾಸ್ಟರ್ ಪ್ಲಾನ್ ರೂಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಂಕ್ಷನ್‌ನಲ್ಲಿ ಮೆಟ್ರೋ ಮಾರ್ಗಗಳು, ಬ್ಲೂ ಲೈನ್ ಕಾಮಗಾರಿ, ಕೆ.ಆರ್. ಪುರಂನಿಂದ ಐಟಿಪಿಎಲ್, ವೈಟ್‌ಫೀಲ್ಡ್ ಹಾಗೂ ಮಾರತಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ಮತ್ತು ಹೊರವಲಯದಿಂದ ನಗರಕ್ಕೆ ಬರುವ ವಾಹನಗಳ ಸಂಚಾರ ಒಂದೆಡೆ ಸೇರುವುದರಿಂದ ಸಂಕೀರ್ಣ ಸಂಚಾರ ಸಮಸ್ಯೆ ಎದುರಾಗಿದೆ. ಪ್ರತಿದಿನ ಲಕ್ಷಾಂತರ ಜನರು ಈ ಜಂಕ್ಷನ್ ಮೂಲಕ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ, ವಾಹನಗಳ ಸುಗಮ ಸಂಚಾರದ ಜೊತೆಗೆ ಪಾದಚಾರಿಗಳು ಹಾಗೂ ಸಾರ್ವಜನಿಕ ಸಾರಿಗೆ ಬಳಕೆದಾರರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಕಂಡುಬರುವ ಸಣ್ಣಪುಟ್ಟ ಮೂಲಸೌಕರ್ಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ನವೆಂಬರ್ 1ರಿಂದ ವಾರ್ಡ್ ಒನ್ ಅಭಿಯಾನ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ 43 ವಾರ್ಡ್‌ಗಳಲ್ಲಿ ಕೈಗೊಂಡಿರುವ ಕಾರ್ಯಗಳು ಸುಮಾರು ಶೇ. 90ರಷ್ಟು ಪೂರ್ಣಗೊಂಡಿವೆ. ಎರಡನೇ ಹಂತದಲ್ಲಿ ಬೆಂಗಳೂರಿನಾದ್ಯಂತ ಸುಮಾರು 40 ವಾರ್ಡ್‌ಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ತಾತ್ಕಾಲಿಕ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸುವುದರ ಜೊತೆಗೆ, ಮೂಲಭೂತ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ವಾರ್ಡ್ ಒನ್ ಅಭಿಯಾನ: ಎಲ್ಲಾ ಇಲಾಖೆಗಳು ಒಗ್ಗೂಡಿ ಕಾರ್ಯನಿರ್ವಹಿಸಿ

ನಗರದ ಒಂದು ವಾರ್ಡ್‌ನಲ್ಲಿರುವ ರಸ್ತೆ, ಪಾದಚಾರಿ ಮಾರ್ಗ, ಬೀದಿ ದೀಪ, ಒಳಚರಂಡಿ, ಬೆಸ್ಕಾಂ, ಅರಣ್ಯ ಹಾಗೂ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಪರಿಹರಿಸುವ ಬದಲು, ಎಲ್ಲಾ ಇಲಾಖೆಗಳು ಒಂದೇ ತಂಡವಾಗಿ ಕಾರ್ಯನಿರ್ವಹಿಸಿ ಸಮಗ್ರವಾಗಿ ಪರಿಹರಿಸುವುದು ವಾರ್ಡ್ ಒನ್ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ವಾರ್ಡ್‌ನಲ್ಲಿರುವ ಸಣ್ಣಪುಟ್ಟ ಹಾಗೂ ತಾತ್ಕಾಲಿಕ ಸಮಸ್ಯೆಗಳನ್ನು ಒಂದೇ ದಿನದಲ್ಲಿ ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಾಗದಿದ್ದರೂ, ಪ್ರತಿ ವಾರ್ಡ್‌ನಲ್ಲಿ ಮೂರು ಅಥವಾ ನಾಲ್ಕು ದಿನಗಳ ಕಾಲ ತೀವ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಅಭಿಯಾನ ಆರಂಭಿಸಲಾಗಿದೆ. ಮೊದಲ ಹಂತದ ಅನುಭವದ ಆಧಾರದಲ್ಲಿ ಪ್ರತಿ ವಾರ್ಡ್‌ನಲ್ಲಿ ಕನಿಷ್ಠ ಒಂದು ವಾರದ ಕಾಲಾವಕಾಶ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ ತಿಂಗಳಲ್ಲಿಯೇ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವ ಉದ್ದೇಶವಿದ್ದರೂ, ಅವಸರದಲ್ಲಿ ಅರ್ಧಂಬರ್ಧ ಕೆಲಸ ಮಾಡುವುದಕ್ಕಿಂತ ಸಮರ್ಪಕವಾಗಿ ಪೂರ್ಣಗೊಳಿಸುವುದು ಮುಖ್ಯ. ಅಗತ್ಯವಿದ್ದಲ್ಲಿ ಡಿಸೆಂಬರ್ ತಿಂಗಳಲ್ಲೂ ಅಭಿಯಾನವನ್ನು ಮುಂದುವರಿಸಲಾಗುವುದು. ಕಾಮಗಾರಿಗಳ ಗುಣಮಟ್ಟ ಹಾಗೂ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಸಚಿವರು ತಿಳಿಸಿದರು.

ಮೊದಲ ಹಂತದಲ್ಲಿ ಶೇ. 90ರಷ್ಟು ಕಾಮಗಾರಿಗಳು ಪೂರ್ಣ:

ವಾರ್ಡ್ ಒನ್ ಅಭಿಯಾನದ ಮೊದಲ ಹಂತದಲ್ಲಿ 43 ವಾರ್ಡ್‌ಗಳನ್ನು ಆಯ್ಕೆ ಮಾಡಿಕೊಂಡು ರಸ್ತೆ ಗುಂಡಿಗಳ ಮುಚ್ಚುವಿಕೆ, ಬ್ಲಾಕ್ ಸ್ಪಾಟ್‌ಗಳ ತೆರವು, ಕಸ ಹಾಗೂ ನಿರ್ಮಾಣ ತ್ಯಾಜ್ಯಗಳ ವಿಲೇವಾರಿ, ಪಾದಚಾರಿ ಮಾರ್ಗಗಳ ದುರಸ್ತಿ, ಜಂಕ್ಷನ್‌ಗಳ ಸುಧಾರಣೆ ಹಾಗೂ ಚರಂಡಿಗಳ ಹೂಳೆತ್ತುವ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಈಗಾಗಲೇ ಮೊದಲ ಹಂತದ 43 ವಾರ್ಡ್‌ಗಳಲ್ಲಿ ಸುಮಾರು ಶೇ. 90ರಷ್ಟು ಕಾರ್ಯಗಳು ಪೂರ್ಣಗೊಂಡಿವೆ. ಎರಡನೇ ಹಂತದಲ್ಲಿ ಬೆಂಗಳೂರಿನಾದ್ಯಂತ ಸುಮಾರು 40 ವಾರ್ಡ್‌ಗಳಲ್ಲಿ ಅಭಿಯಾನ ಆರಂಭಿಸಲಾಗಿದೆ. ವಿವಿಧ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಮಸ್ಯೆಗಳ ಸ್ವರೂಪ ಹಾಗೂ ಅವುಗಳ ಪರಿಹಾರದ ಪ್ರಗತಿಯನ್ನು ಆಧರಿಸಿ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ಹೇಳಿದರು.

ಟಿನ್ ಫ್ಯಾಕ್ಟರಿ ಜಂಕ್ಷನ್ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿ:

ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸ್ಥಳೀಯ ಸಾರ್ವಜನಿಕರು ಟಿನ್ ಫ್ಯಾಕ್ಟರಿ ಜಂಕ್ಷನ್ ಅಭಿವೃದ್ಧಿಗೆ ಹಲವು ಬಾರಿ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಂಕ್ಷನ್‌ನಲ್ಲಿನ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ, ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಭಿವೃದ್ಧಿ ಯೋಜನೆ ರೂಪಿಸುವ ಉದ್ದೇಶದಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ.

ಈ ಪ್ರದೇಶದಲ್ಲಿ ಈಗಾಗಲೇ ಎರಡು ಮೆಟ್ರೋ ಮಾರ್ಗಗಳು ಕಾರ್ಯನಿರ್ವಹಿಸುತ್ತಿದ್ದು, ಬ್ಲೂ ಲೈನ್ ಕಾಮಗಾರಿಯೂ ನಡೆಯುತ್ತಿದೆ. ಐಟಿಪಿಎಲ್, ವೈಟ್‌ಫೀಲ್ಡ್ ಹಾಗೂ ಮಾರತಹಳ್ಳಿ ಕಡೆಗೆ ತೆರಳುವ ವಾಹನಗಳು, ಹೊರವಲಯದಿಂದ ನಗರಕ್ಕೆ ಬರುವ ವಾಹನಗಳು ಮತ್ತು ರಿಂಗ್ ರಸ್ತೆಯ ಸಂಚಾರ ಇಲ್ಲಿ ಒಂದೆಡೆ ಸೇರುತ್ತವೆ. ಹೀಗಾಗಿ ಜಂಕ್ಷನ್‌ನಲ್ಲಿ ವಾಹನಗಳ ಸಂಚಾರದ ಜೊತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೂ ಸಮರ್ಪಕವಾಗಿ ನಿರ್ವಹಿಸುವ ಅಗತ್ಯವಿದೆ.

ಜಂಕ್ಷನ್‌ನ ಸಮಗ್ರ ಅಭಿವೃದ್ಧಿಗೆ ಬಸ್ ಬೇಗಳು, ಬಸ್ ನಿಲ್ದಾಣಗಳು ಹಾಗೂ ದೂರ ಪ್ರಯಾಣದ ಬಸ್‌ಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಮೆಟ್ರೋದಿಂದ ಬಸ್‌ಗೆ, ಬಸ್‌ನಿಂದ ಮೆಟ್ರೋಗೆ ಹಾಗೂ ಇತರ ಸಾರಿಗೆ ವ್ಯವಸ್ಥೆಗಳಿಗೆ ಬದಲಾಯಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕು. ಆಟೋ, ಟ್ಯಾಕ್ಸಿ ಹಾಗೂ ಇತರ ವಾಹನಗಳಲ್ಲಿ ಬರುವವರು ಸಾರ್ವಜನಿಕ ಸಾರಿಗೆಯನ್ನು ಸುಲಭವಾಗಿ ಬಳಸಲು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿದರು.

ಪಾದಚಾರಿ ಮಾರ್ಗಗಳ ಅಭಿವೃದ್ಧಿ ಹಾಗೂ ರಸ್ತೆ ವಿನ್ಯಾಸ ಸುಧಾರಿಸಿ:

ಟಿನ್ ಫ್ಯಾಕ್ಟರಿ ಜಂಕ್ಷನ್‌ನಲ್ಲಿ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಆದ್ಯತೆ ನೀಡಬೇಕು. ಮೆಟ್ರೋದಿಂದ ಬಸ್‌ಗೆ ಅಥವಾ ಇತರ ಸಾರಿಗೆ ವ್ಯವಸ್ಥೆಗಳಿಗೆ ತೆರಳುವ ಪ್ರಯಾಣಿಕರು ಯಾವುದೇ ಅಡಚಣೆಯಿಲ್ಲದೆ ಸಂಚರಿಸಲು ಅನುಕೂಲವಾಗುವಂತೆ ಪರಿಣಾಮಕಾರಿ ಪಾದಚಾರಿ ಮಾರ್ಗಗಳನ್ನು ರೂಪಿಸಬೇಕು.

ಜಂಕ್ಷನ್‌ನಲ್ಲಿರುವ ರಸ್ತೆ ತಿರುವುಗಳನ್ನು ಸುಧಾರಿಸಿ, ಅಗತ್ಯವಿರುವ ಕಡೆಗಳಲ್ಲಿ ರಸ್ತೆ ಅಗಲೀಕರಣ ಕೈಗೊಳ್ಳಬೇಕು. ಜಂಕ್ಷನ್‌ನ ವಿನ್ಯಾಸವನ್ನು ವೈಜ್ಞಾನಿಕವಾಗಿ ರೂಪಿಸಿ, ವಾಹನಗಳ ಸಂಚಾರ ಸುಗಮವಾಗುವಂತೆ ಕ್ರಮ ವಹಿಸಬೇಕು. ಫ್ರೀ ಲೆಫ್ಟ್ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಅಗತ್ಯ ರಸ್ತೆ ಸುಧಾರಣಾ ಕಾಮಗಾರಿಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಜಂಕ್ಷನ್‌ನ ಪ್ರತಿಯೊಂದು ಭಾಗವನ್ನೂ ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ನಿರ್ದೇಶನ ನೀಡಿದರು.

ಮೆಟ್ರೋ ಹಾಗೂ ಕೆ-ರೈಡ್ ಕಾಮಗಾರಿಗಳಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಿ:

ಜಂಕ್ಷನ್‌ನ ಸುತ್ತಮುತ್ತ ಮೆಟ್ರೋ ಹಾಗೂ ಕೆ-ರೈಡ್ ಕಾಮಗಾರಿಗಳು ನಡೆಯುತ್ತಿರುವುದರಿಂದ ಸಂಪರ್ಕ ರಸ್ತೆಗಳು ಹಾನಿಗೊಳಗಾಗಿವೆ. ಕೆಲವು ರಸ್ತೆಗಳು ತಗ್ಗು ಪ್ರದೇಶದಲ್ಲಿದ್ದು, ಭಾರಿ ಮಳೆಯ ಸಂದರ್ಭದಲ್ಲಿ ನೀರು ನಿಲ್ಲುವ ಸಮಸ್ಯೆಯೂ ಎದುರಾಗುತ್ತಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.

ಮೆಟ್ರೋ ಕಾಮಗಾರಿಗಳಿಂದ ಹಾನಿಗೊಳಗಾದ ರಸ್ತೆಗಳನ್ನು ಸಮರ್ಪಕವಾಗಿ ಪುನಃಸ್ಥಾಪಿಸಬೇಕು. ಸಿವಿಲ್ ಕಾಮಗಾರಿಗಳು ಪೂರ್ಣಗೊಂಡ ತಕ್ಷಣವೇ ರಸ್ತೆಗಳನ್ನು ದುರಸ್ತಿಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕು. ರಸ್ತೆ ಅಗಲೀಕರಣ, ರಸ್ತೆ ಮಟ್ಟವನ್ನು ಸಮತಟ್ಟುಗೊಳಿಸುವುದು, ಫೆನ್ಸಿಂಗ್ ಹಾಗೂ ಜಂಕ್ಷನ್ ವಿನ್ಯಾಸ ಸುಧಾರಣೆಯಂತಹ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು.

ಮೆಟ್ರೋ ಅಧಿಕಾರಿಗಳು ಗುತ್ತಿಗೆದಾರರ ಹಿತಾಸಕ್ತಿಗಿಂತ ಸಾರ್ವಜನಿಕರ ಅನುಕೂಲಕ್ಕೆ ಆದ್ಯತೆ ನೀಡಬೇಕು. ಕಾಮಗಾರಿಗಳ ಕುರಿತು ವಾಸ್ತವಿಕ ಮಾಹಿತಿ ನೀಡುವುದರ ಜೊತೆಗೆ, ಬಾಕಿ ಇರುವ ಕೆಲಸಗಳನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಂಕ್ಷನ್ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ:

ಟಿನ್ ಫ್ಯಾಕ್ಟರಿ ಜಂಕ್ಷನ್‌ನ ಸಮಗ್ರ ಪುನರ್‌ಅಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಮೆಟ್ರೋ, ಜನಾಗ್ರಹ ಸಂಸ್ಥೆ ಹಾಗೂ ಅಗರಿ ಇಂಡಿಯನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಮಾಸ್ಟರ್ ಪ್ಲಾನ್ ರೂಪಿಸಲು ಸೂಚಿಸಲಾಗಿದೆ. ಜಂಕ್ಷನ್‌ನಲ್ಲಿರುವ ಸಮಸ್ಯೆಗಳನ್ನು ಸಮಗ್ರವಾಗಿ ಪರಿಗಣಿಸಿ, ಜನಸ್ನೇಹಿ ಹಾಗೂ ಪಾದಚಾರಿ ಸ್ನೇಹಿ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಬೇಕು.

ಜಂಕ್ಷನ್‌ನ ಸುತ್ತಮುತ್ತಲಿನ ರಸ್ತೆ, ಪಾದಚಾರಿ ಮಾರ್ಗ, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಸಂಚಾರ ನಿರ್ವಹಣೆ ಹಾಗೂ ಸೌಂದರ್ಯೀಕರಣವನ್ನು ಯೋಜನೆಯ ಭಾಗವಾಗಿ ಕೈಗೊಳ್ಳಬೇಕು. ಅಗತ್ಯ ಅನುದಾನವನ್ನು ನಗರ ಪಾಲಿಕೆಯಿಂದ ಒದಗಿಸುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುವುದು.

ಲಕ್ಷಾಂತರ ಜನರು ಪ್ರತಿದಿನ ಸಂಚರಿಸುವ ಈ ಜಂಕ್ಷನ್‌ನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಮೂಲಸೌಕರ್ಯಗಳನ್ನು ಒದಗಿಸುವುದರ ಜೊತೆಗೆ, ಸುಗಮ ವಾಹನ ಸಂಚಾರ, ಪಾದಚಾರಿಗಳ ಸುರಕ್ಷತೆ ಹಾಗೂ ಜಂಕ್ಷನ್‌ನ ಸೌಂದರ್ಯೀಕರಣಕ್ಕೂ ಆದ್ಯತೆ ನೀಡಬೇಕು ಎಂದು ಸಚಿವರು ತಿಳಿಸಿದರು.

ಕಸ, ನಿರ್ಮಾಣ ತ್ಯಾಜ್ಯ ತೆರವು ಹಾಗೂ ರಸ್ತೆ ಗುಂಡಿಗಳ ದುರಸ್ತಿಗೆ ತಕ್ಷಣ ಕ್ರಮ:

ಟಿನ್ ಫ್ಯಾಕ್ಟರಿ ಜಂಕ್ಷನ್‌ನ ಸುತ್ತಮುತ್ತ ಸಂಗ್ರಹವಾಗಿರುವ ಕಸ, ಕಡ್ಡಿಗಳು ಹಾಗೂ ನಿರ್ಮಾಣ ತ್ಯಾಜ್ಯಗಳನ್ನು ತಕ್ಷಣ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಂಕ್ಷನ್‌ನ ಸಂಪರ್ಕ ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಗುರುತಿಸಿ, ಒಂದು ವಾರದೊಳಗೆ ದುರಸ್ತಿಪಡಿಸಬೇಕು.

ಸ್ಥಳೀಯ ಶಾಸಕರು ಹಾಗೂ ಸಾರ್ವಜನಿಕರು ಗಮನಕ್ಕೆ ತಂದಿರುವ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಬೇಕು. ಕೈಗೊಂಡ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲು ಅಗತ್ಯವಿದ್ದಲ್ಲಿ ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಲಾಗುವುದು. ಜಂಕ್ಷನ್‌ನ ಅಭಿವೃದ್ಧಿಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಈ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಅಭಿಯಾನದ ಉದ್ದೇಶ ಕೇವಲ ಅಂಕಿ-ಅಂಶಗಳನ್ನು ಪ್ರಕಟಿಸುವುದಲ್ಲ:

ವಾರ್ಡ್ ಒನ್ ಅಭಿಯಾನದಡಿ ಕೈಗೊಂಡಿರುವ ಕಾಮಗಾರಿಗಳ ಕುರಿತು ಪ್ರತಿಯೊಂದು ನಗರ ಪಾಲಿಕೆಯಿಂದ ಪ್ರತ್ಯೇಕ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗಿದೆ. ಬ್ಲಾಕ್ ಸ್ಪಾಟ್‌ಗಳ ತೆರವು, ರಸ್ತೆ ಗುಂಡಿಗಳ ಮುಚ್ಚುವಿಕೆ ಹಾಗೂ ನಿರ್ಮಾಣ ತ್ಯಾಜ್ಯಗಳ ತೆರವು ಸೇರಿದಂತೆ ಕೈಗೊಂಡಿರುವ ಎಲ್ಲಾ ಕಾರ್ಯಗಳ ಸಂಪೂರ್ಣ ಮಾಹಿತಿ ಲಭ್ಯವಿದೆ.

ಅಭಿಯಾನದ ಉದ್ದೇಶ ಕೇವಲ ಅಂಕಿ-ಅಂಶಗಳನ್ನು ಪ್ರಕಟಿಸುವುದಲ್ಲ. ನಗರದಲ್ಲಿರುವ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಕಲ್ಪಿಸುವ ಸಮಗ್ರ ಪ್ರಯತ್ನ ಇದಾಗಿದೆ. ಕೆಲವು ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ಸಮಯ ಬೇಕಾಗಬಹುದು. ಆದರೆ ತಾತ್ಕಾಲಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಸಾಧ್ಯವಿರುವುದರಿಂದ, ಅಂತಹ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೈರತಿ ಬಸವರಾಜ್, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್, ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಅಭಿಯಂತರರಾದ ಲೋಕೇಶ್, ವಿಶ್ವನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page