ಸಮಗ್ರ ಸುದ್ದಿ

ನವೆಂಬರ್‌ 14 ರಿಂದ 21ವರೆಗೆ 5ನೇ ಮಿನಿ ಕರ್ನಾಟಕ ಕ್ರೀಡಾಕೂಟ: ಡಾ.ಕೆ. ಗೋವಿಂದರಾಜ್‌

Share

ಬೆಂಗಳೂರು:ಮುಂಬರುವ ದಿನಗಳಲ್ಲಿ ಕರ್ನಾಟಕದಿಂದ ಹೆಚ್ಚು ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಬೇಕು ಎಂಬುದೇ ನನ್ನ ಕನಸು. ಇದಕ್ಕೆ ಮಿನಿ ಕರ್ನಾಟಕ ಕ್ರೀಡಾಕೂಟ ಯುವ ಕ್ರೀಡಾಪಟುಗಳ ಪಾಲಿಗೆ ಉತ್ತಮ ವೇದಿಕೆಯಾಗಿದೆ ಎಂದು ಫಿಬಾ ಏಷ್ಯಾ ಅಧ್ಯಕ್ಷರು, ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷರು ಹಾಗೂ ವಿಧಾನ ಪರಿಷತ್‌ ಸದಸ್ಯರಾದ ಡಾ.ಕೆ.ಗೋವಿಂದರಾಜ್‌ ಹೇಳಿದರು.

ಕರ್ನಾಟಕ ಒಲಿಂಪಿಕ್‌ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ, ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 5ನೇ ಮಿನಿ ಕರ್ನಾಟಕ ಕ್ರೀಡಾಕೂಟ-2026 ನವೆಂಬರ್‌ 14 ರಿಂದ 21 ರವರೆಗೆ ಕಂಠೀರವ ಸ್ಟೇಡಿಯಂ ಸೇರಿದಂತೆ ಬೆಂಗಳೂರಿನ ವಿವಿಧ ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗುತ್ತಿದೆ ಎಂದರು.

27 ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. 2020ರಲ್ಲಿ ಮೊದಲ ಬಾರಿಗೆ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. 14 ವಯೋಮಿತಿಯ ಸುಮಾರು 5 ಸಾವಿರ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಡಾ.ಕೆ.ಗೋವಿಂದರಾಜ್‌ ತಿಳಿಸಿದರು.

ಕ್ರೀಡಾಪಟುಗಳಿಗೆ ಊಟ, ವಸತಿ ಹಾಗೂ ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ವಯೋಮಿತಿ ಮಕ್ಕಳಿಗೆ ಇಂತಹ ಕ್ರೀಡಾಕೂಟ ಆಯೋಜಿಸುವ ಮೂಲಕ ತಯಾರು ಮಾಡಿದಾಗ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕ್ರೀಡಾಪಟುಗಳನ್ನು ಬೆಳೆಸುವುದಕ್ಕೆ ಮುಖ್ಯವಾಗಿ ನಾಂದಿಯಾಗಲಿದೆ ಎಂದು ಹೇಳಿದರು.

ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಈ ಮಿನಿ ಕರ್ನಾಟಕ ಕ್ರೀಡಾಕೂಟವನ್ನು ಆರಂಭಿಸಲಾಯಿತು. ಚಿಕ್ಕ ವಯಸ್ಸಿನಲ್ಲೇ ಪ್ರೋತ್ಸಾಹ ನೀಡುವುದು, ಸ್ಪರ್ಧಾತ್ಮಕತೆಗೆ ಒಗ್ಗಿಕೊಳ್ಳಲು ಈ ಕ್ರೀಡಾಕೂಟ ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂಬುದೇ ನನ್ನ ಅಭಿಲಾಷೆ. ಭವಿಷ್ಯದ ತಾರೆಯರ ಅನಾವರಣಕ್ಕೆ ಈ ಕೂಡ ಉತ್ತಮ ವೇದಿಕೆಯಾಗಲಿದೆ ಎಂದು ಡಾ.ಗೋವಿಂದರಾಜ್‌ ಹೇಳಿದರು.

ರಾಜ್ಯ ಸರ್ಕಾರದಿಂದ ಪ್ರೋತ್ಸಾಹ

ಒಲಿಂಪಿಕ್ಸ್‌ ಗುರಿ ಯೋಜನೆ ಆರಂಭಿಸುವ ಕರ್ನಾಟಕ ಸರ್ಕಾರ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಒಲಿಂಪಿಕ್ಸ್‌ಗೆ ತಯಾರಾಗುವ ಕ್ರೀಡಾಪಟುಗಳಿಗೆ 10 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಮೊತ್ತವನ್ನು ಏರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಎಂ.ಎನ್.ಅನುಚೇತ್‌, ಕರ್ನಾಟಕ ರಾಜ್ಯದ ವಿವಿಧ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

27 ಕ್ರೀಡೆಗಳು: ಮಿನಿ ಕರ್ನಾಟಕ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಆರ್ಚರಿ, ಬಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಕಯಾಕಿಂಗ್ ಮತ್ತು ಕೆನೋಯಿಂಗ್, ಗಾಲ್ಫ್, ಫುಟ್ಬಾಲ್, ಜಿಮ್ನಾಸ್ಟಿಕ್ಸ್, ಹ್ಯಾಂಡ್‌ಬಾಲ್, ಹಾಕಿ, ಜೂಡೋ, ಖೋ-ಖೋ, ಕಬಡ್ಡಿ, ಲಾನ್ ಟೆನ್ನಿಸ್, ವಾಲಿಬಾಲ್, ನೆಟ್‌ಬಾಲ್, ಈಜು, ಟೇಬಲ್ ಟೆನ್ನಿಸ್, ಟೇಕ್ವಾಂಡೋ, ರೈಡಿಂಗ್, ರೈಫಲ್ ಶೂಟಿಂಗ್, ರೆಸ್ಲಿಂಗ್, ವುಶು ಮತ್ತು ವೆಯ್ಟ್ ಲಿಫ್ಟಿಂಗ್ ಕ್ರೀಡೆಗಳನ್ನೊಳಗೊಂಡಿರುತ್ತವೆ.

ಕ್ರೀಡಾಕೂಟದ ವೆಬ್‌ಸೈಟ್‌ ಬಿಡುಗಡೆ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 5ನೇ ಮಿನಿ ಕರ್ನಾಟಕ ಕ್ರೀಡಾಕೂಟದ ಅಧಿಕೃತ ವೆಬ್‌ಸೈಟ್‌
https://5thministategames.com ಅನ್ನು ಬಿಡುಗಡೆ ಮಾಡಲಾಯಿತು.


Share

You cannot copy content of this page