ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸಿದ್ದೇವೆಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಶೇ.56 ಮೀಸಲಾತಿ ಹೆಚ್ಚಳ ವಿಚಾರವನ್ನು ಶೆಡ್ಯೂಲ್ 9 ಗೆ ಸೇರಿಸಿ ತಮಿಳುನಾಡು ಮಾದರಿಯಲ್ಲಿ ಆರ್ಟಿಕಲ್ 15, 16 ಕ್ಕೆ ತಿದ್ದುಪಡಿ ತರುವ ಮೂಲಕ ತಳ ಸಮುದಾಯಗಳ ಶೈಕ್ಷಣಿಕ, ಆರ್ಥಿಕ ಹಾಗೂ ಔದ್ಯೋಗಿಕ ಪ್ರಗತಿಗೆ ಪ್ರಧಾನಿ ನರೇಂದ್ರ ಮೋದಿ ನಾಂದಿ ಹಾಡಬೇಕು ಎಂದು ಮಾಜಿ ಸಂಸದರು, ಕರ್ನಾಟಕ ನಾಯಕ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.
ಬೆಂಗಳೂರಿನ ಶಾಸಕರ ಭವನದ ಬಳಿ ಇರುವ ವಾಲ್ಮೀಕಿ ಕುಟೀರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉಗ್ರಪ್ಪನವರು, ಬಿಜೆಪಿ ಸರ್ಕಾರವೇ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳು ಹಾಗೂ ಒಬಿಸಿ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಪತ್ರ ಬರೆದಿದೆ. ಆದರೆ ಅವರದೇ ಸರ್ಕಾರ ಕಳೆದ 4 ವರ್ಷಗಳಿಂದ ಇದಕ್ಕೆ ಬೆಲೆ ನೀಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಇದರ ಬಗ್ಗೆ ಸ್ಪಂದಿಸುವ ಕೆಲಸವನ್ನು ಇದುವರೆಗೂ ಮಾಡಿಲ್ಲ. ಇದರ ನಡುವೆ ಕರ್ನಾಟಕ ಹೈ ಕೋರ್ಟ್ 12/10/2026 ರಂದು ಈ ಕಾಯ್ದೆಗೆ ಮರಣಶಾಸನ ಬರೆದಿದೆ ಎಂದು ಆಕ್ರೋಶ ಹೊರ ಹಾಕಿದರು.
ರಾಜ್ಯ ಸರ್ಕಾರ ಈಗ ಸುಪ್ರೀಂ ಕೋರ್ಟ್ ನಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದೆ. ಹಿರಿಯ ವಕೀಲರಾದ ರವಿವರ್ಮ ಕುಮಾರ್ ಅವರನ್ನು ನೇಮಿಸಿದೆ. ಜೊತೆಗೆ ಶಾಸಕರು, ಸಚಿವರ ಜೊತೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಭೆ ನಡೆಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದಿಸುತ್ತೇನೆ. ಆದರೆ ಇಷ್ಟಕ್ಕೆ ಪ್ರಯತ್ನ ಸಾಲದು, ದಯಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ಯಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ಮೋದಿಗೆ ಪತ್ರ:
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಬಗ್ಗೆ ಪ್ತಧಾನಿ ನರೇಂದ್ರ ಮೋದಿ ಅವರಿಗೆ ಕಾಳಜಿ ಇದ್ದರೆ ಕರ್ನಾಟಕದ 5 ಕೋಟಿ ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸವನ್ನು ಪದತಧಾನಿ ನರೇಂದ್ರ ಮೋದಿ ಮಾಡಬೇಕು. ಕರ್ನಾಟಕಕ್ಕೆ ಗುರುವಾರ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರಿಗೂ ಪತ್ರ ಬರೆದಿದ್ದೇನೆ. ಈ ತ್ರಿಮೂರ್ತಿಗಳು ಜೊತೆಗೂಡಿ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಪರಿಶಿ ಸಮುದಾಯಗಳ ಹಿತ ಕಾಯುವ ಕೆಲಸ ಮಾಡಬೇಕು ಎಂದು ವಿ.ಎಸ್. ಉಗ್ರಪ್ಪ ಒತ್ತಾಯಿಸಿದರು.
2022 ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೀಸಲಾತಿ ಪ್ತಮಾಣವನ್ನು ಹೆಚ್ಚಿಸಿ ಕಾನೂನು ಮಾಡಿದ್ದು ಬಿಜೆಪಿ ಸರ್ಕಾರ, ಬಸವರಾಜ್ ಬೊಮ್ಮಾಯಿ ಸರ್ಕಾರ. ಆದರೆ ತಮಿಳುನಾಡಿನಲ್ಲಿ ಶೇ.69 ರಷ್ಟು ಮೀಸಲಾತಿ ಹೆಚ್ಚಿಸಿ ಕಾನೂನು ಮಾಡಿ ಸುಭದ್ರತೆ ಕಾಯ್ದುಕೊಂಡರು. ಆ ರೀತಿ ಕರ್ನಾಟಕದಲ್ಲಿ ಮಾಡಲಿಲ್ಲ. ಅದಾದ ನಂತರ ಸರ್ಕಾರದ ಮುಖ್ಯಕಾರ್ಯದರ್ಶಿ ವಂದನ ಶರ್ಮಾ 23/03/2023 ರಲ್ಲಿ, ಬಳಿಕ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ 16/04/2026 ರಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರು. ಆದರೂ ಮೋದಿ ಸರ್ಕಾರ ಈ ವಿಚಾರದಲ್ಲಿ ಸ್ಪಂದಿಸುವ ಕೆಲಸ ಮಾಡಲಿಲ್ಲ. ಸಂವಿಧಾನದಲ್ಲಿ ಎಲ್ಲೂ ಕೂಡ ಮೀಸಲಾತಿ ಪ್ರಮಾಣ ಶೇ.50 ಮೀರಬಾರದು ಎಂದಿಲ್ಲ. ಆದರೆ ನ್ಯಾಯಾಲಯಗಳು ಯಾಕೆ ಈ ರೀತಿ ವರ್ತಿಸುತ್ತಿವೆ ಅರ್ಥವಾಗುತ್ತಿಲ್ಲ ಎಂದರು.
ಈ ದೇಶದ ಮೂಲ ನಿವಾಸಿಗಳೇ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳು. ಇದನ್ನು ಅರಿತು ಪ್ರಧಾನಿ ನರೇಂದ್ರ ಮೋದಿ ಅವರು ಈ ಅರ್ಟಿಕಲ್ 15, 16 ಕ್ಕೆ ತಿದ್ದುಪಡಿ ತಂದು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಭದ್ರ ಬುನಾದಿ ಹಾಕಬೇಕು. ಇದಕ್ಕೆ ಬಿಜೆಪಿಯ ರಾಜ್ಯ ನಾಯಕರು ಒತ್ತಾಯ ಮಾಡಬೇಕು. ಹಾಗಾಗಿ ಸರ್ವ ಪಕ್ಷ ನಿಯೋಗ ತಡಗೆದುಕೊಂಡು ಹೋಗಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಅವರಿಗೆ ಮನವರಿಕೆ ಮಾಡಿಕೊಡಬೇಕು. ಆ ಮೂಲಕ ತಳ ಸಮುದಾಯಗಳ ಮಕ್ಕಳ ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಪ್ರಗತಿಗೆ ಮುನುಡಿ ಬರೆಯಬೇಕು ಎಂದು ಒತ್ತಾಯಿಸಿದರು.
ಸುದ್ದಿ ಗೋಷ್ಠಿಯಲ್ಲಿ ರಾಯಚೂರು ಗೋಲಪಲ್ಲಿ ಸ್ವಾಮೀಜಿ, ಚಿತ್ರದುರ್ಗದ ಬಂಜಾರ ಸಮುದಾಯದ ಸೇವಾಲಾಲ್ ಸ್ವಾಮೀಜಿ, ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಕಾರ್ಯಾಧ್ಯಕ್ಷರಾದ ಎಂ. ನರಸಿಂಹಯ್ಯ, ಖಜಾಂಚಿ ಈ. ರಾಜಪ್ಪ, ಉಪಾಧ್ಯಕ್ಷ ತಾಯೂರ್ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ತುಳಸೀರಾಂ, ಕಾರ್ಯದರ್ಶಿ ರಮೇಶ್ ಹಿರೇಜಂಬೂರು, ನಿವೃತ್ತ ಕುಲಪತಿ ಶ್ರೀರಾಮುಲು, ಅಲ್ಪ ಸಂಖ್ಯಾತರ ಮುಖಂಡರಾದ ಸೈಯದ್ ಮೂಸಾ, ಗೊಪಾಲ ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
