ಬೆಂಗಳೂರು:ನಮ್ಮ ಭಾಷೆ, ಸಂಸ್ಕೃತಿ, ಹಬ್ಬಗಳು, ಜಾತ್ರೆಯ ಸೊಬಗು ಉಳಿಯಬೇಕೆಂಬ ದೃಷ್ಟಿಯಿಂದ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ಹಬ್ಬ ಆಚರಿಸಲಾಗುತ್ತಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಚೌಡಯ್ಯ ಉತ್ಸವ, ಕೆ.ಕೆ. ಮೂರ್ತಿ ಸ್ಮಾರಕ ಸಂಗೀತೋತ್ಸವ ಹಾಗೂ ಅಕಾಡೆಮಿ ಆಫ್ ಮ್ಯೂಸಿಕ್ ಚೌಡಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
“ಸಂಗೀತ ಲೋಕವೇ ಭೂಮಿಗಿಳಿದು ಬಂದಂತೆ ಕಾಣುತ್ತಿದೆ. ರಾಗವಿಲ್ಲದೆ ಸಂಗೀತವಿಲ್ಲ, ಭಾವವಿಲ್ಲದೆ ಬದುಕಿಲ್ಲ ಎಂಬ ಮಾತಿನಲ್ಲಿ ನನಗೆ ಅಚಲ ನಂಬಿಕೆ ಇದೆ. ಕತ್ತಲಿನಿಂದ ಬೆಳಕಿನೆಡೆಗೆ ಸಂಗೀತ ಲೋಕ ಕರೆದುಕೊಂಡು ಹೋಗುತ್ತದೆ. ಸಂಗೀತ ಸಾಮ್ರಾಜ್ಯದ ಸ್ವರ್ಗವನ್ನು ಇಂದು ಕಾಣುತ್ತಿದ್ದೇನೆ. ನಾನು ಕಳೆದ ಮೂರು ವರ್ಷಗಳಿಂದ ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರಲಿಲ್ಲ” ಎಂದರು.
ರಾಜ್ಯದ ಸಂಗೀತ ಪರಂಪರೆಗೆ ದೊಡ್ಡ ಇತಿಹಾಸವಿದೆ
“ಸಂಗೀತದ ಪರಂಪರೆಗೆ ನಮ್ಮ ರಾಜ್ಯದಲ್ಲಿ ದೊಡ್ಡ ಇತಿಹಾಸವಿದೆ. ಪಿಟೀಲು ಚೌಡಯ್ಯನವರನ್ನು ಸ್ಮರಿಸಿಕೊಳ್ಳುವುದು, ನಮ್ಮನ್ನು ಪೋಷಿಸಿ ಬೆಳೆಸಿದವರನ್ನು ನೆನೆದು ಕಾಪಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ರಾಧಾಕೃಷ್ಣ ಅವರ ಆಹ್ವಾನದ ಮೇರೆಗೆ ಬೇರೆ ಕೆಲಸಗಳು ಇದ್ದರೂ ಇಲ್ಲಿಗೆ ಬಂದಿದ್ದೇನೆ. ‘ನೃಪನಪಹರಿಸದ, ದಾಯಾದಿ ದಕ್ಕಿಸದ, ಅಗ್ನಿಯಲ್ಲಿ ಸುಡದ, ನೀರಿನಲ್ಲಿ ನೆನೆಯದ ಗುಪ್ತನಿಧಿ ಸಂಗೀತ ವಿದ್ಯೆ” ಎಂದರು.
“ಬಿದರಿಗೆ ಕೊಳಲು ಆಗುತ್ತದೆ ಎಂದು ಅದಕ್ಕೇ ಗೊತ್ತಿರುವುದಿಲ್ಲ. ಅದರಿಂದ ನಾದ ಹೊಮ್ಮುವ ಬಗ್ಗೆಯೂ ಮನುಷ್ಯನಿಗೆ ಗೊತ್ತಿರಲಿಲ್ಲ. ಆದರೆ ವಿಕಾಸ ಹೊಂದುತ್ತಾ ಅದ್ಬುತವನ್ನು ಕಂಡು ಹಿಡಿದ. ಅಲೆಕ್ಸಾಂಡರ್ ಭಾರತವನ್ನು ವಶ ಪಡಿಸಿಕೊಳ್ಳಲು ತೆರಳುವುದಾಗಿ ತನ್ನ ಗುರುಗಳ ಬಳಿ ಹೇಳಿದಾಗ, ಆತನ ಗುರುಗಳು ಭಾರತದಿಂದ ವಾಪಸ್ಸು ಬರುವಾಗ ಭಗವದ್ಗೀತೆ, ರಾಮಾಯಣ, ಕೃಷ್ಣನ ಕೊಳಲು, ಗಂಗಾ ಜಲ, ತತ್ವಜ್ಞಾನಿಯನ್ನು ತರುವಂತೆ ಹೇಳಿದ್ದರು. ಏಕೆಂದರೆ ಇವುಗಳನ್ನು ತಂದರೆ ಭಾರತವನ್ನೇ ತಂದಂತೆ ಎಂದಿದ್ದರು. ಸಂಗೀತ ವಿದ್ವಾಂಸರು ಇಂಥ ವಿದ್ಯೆಯನ್ನು ಉಳಿಸಿಕೊಂಡು ಬಂದಿರುವುದು ಕೊಳಲಿನ ಮಹತ್ವಕ್ಕೆ ಸಾಕ್ಷಿ” ಎಂದರು.
ನಮ್ಮ ಸಂಸ್ಕೃತಿ ದೇಶದ ಆಸ್ತಿ
“ತಬಲ, ತಮಟೆಗಳನ್ನು ಕುರಿ, ಮೇಕೆ ಚರ್ಮಗಳಿಂದ ಮಾಡಲಾಗುತ್ತದೆ ಎಂದು ಕುರಿಗೆ ತಿಳಿದಿರೋದಿಲ್ಲ. ಹೀಗೆ ಯಾವುದನ್ನು ನಾವು ಅಲ್ಲಗಳೆಯಲು ಸಾಧ್ಯವಿಲ್ಲ. ಜಗತ್ತಿನ ಗುಡಿಯಲ್ಲಿ ಎಲ್ಲರಿಗೂ ಒಂದು ಸ್ಥಾನವಿದೆ. ಮಕ್ಕಳು, ವಿದ್ಯಾರ್ಥಿಗಳು ಅವರಲ್ಲಿರುವ ಪ್ರತಿಭೆ ಶಕ್ತಿ ಎಲ್ಲವನ್ನು ಉಳಿಸಿ ಕಾಪಾಡಬೇಕು. ನಮ್ಮ ಸಂಸ್ಕೃತಿ ದೇಶದ ಆಸ್ತಿ ಇದನ್ನು ಕಾಪಾಡಿಕೊಳ್ಳಬೇಕು” ಎಂದು ಹೇಳಿದರು.
ಸಂಗೀತಕ್ಕೆ ಜಾತಿ, ಧರ್ಮದ ಗಡಿಗಳಿಲ್ಲ
“ಸಂಗೀತಕ್ಕೆ ಜಾತಿ, ಧರ್ಮವಿಲ್ಲ, ದೇಶದ ಗಡಿಗಳು ಇಲ್ಲ. ಸಮುದ್ರವನ್ನು ಹೇಗೆ ಅಳೆಯಲು ಸಾಧ್ಯವಿಲ್ಲವೋ ಹಾಗೆ ಸಂಗೀತಕ್ಕೂ ಯಾವುದೇ ಗಡಿಯಿಲ್ಲ” ಎಂದರು.
ಹಳ್ಳಿ ಮಕ್ಕಳಲ್ಲಿ ಪ್ರತಿಭೆಗೆ ಯಾವುದೇ ಕೊರತೆ ಇಲ್ಲ
“ಗ್ರಾಮೀಣ ಭಾಗದ ಪ್ರತಿಭೆಗಳನ್ನು ಹೊರ ತರಬೇಕೆಂಬ ದೃಷ್ಟಿಯಿಂದ ಪ್ರತಿ ಪಂಚಾಯತಿಯಲ್ಲಿ ಭಾರತ್ ಜೋಡೋ ಯುವಕ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಹಳ್ಳಿಯ ಮಕ್ಕಳಲ್ಲಿ ಪ್ರತಿಭೆಗೆ ಯಾವುದೇ ಕೊರತೆ ಇಲ್ಲ. ‘ಕಲ್ಲು ಪ್ರಕೃತಿ, ಕಡೆದರೆ ಆಕೃತಿ ಪೂಜಿಸಿದರೆ ಸಂಸ್ಕೃತಿ.’ ಅವರನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಬೇಕಿರುವುದು ನಮ್ಮ ಕರ್ತವ್ಯ. ಅದಕ್ಕಾಗಿಯೇ ದೊಡ್ಡ ಪ್ರಯತ್ನಕ್ಕೆ ಹೆಜ್ಜೆ ಇಟ್ಟಿದ್ದೇನೆ” ಎಂದರು.
ನಮ್ಮ ಸಂಸ್ಕೃತಿ ಉಳಿಸಲು ಎಲ್ಲರೂ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ದಸರಾ ಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಈ ವರ್ಷ ಒತ್ತು ನೀಡಲಾಗಿತ್ತು. ಪುರಂದರದಾಸರ ಮಾತಿನಂತೆ “ಇದು ಭಾಗ್ಯ, ಇದು ಭಾಗ್ಯವಯ್ಯ” ಏಕೆಂದರೆ ಇಂಥ ಕಾರ್ಯಕ್ರಮದಲ್ಲಿ ರಾಜಕೀಯ ಜಂಜಾಟದ ನಡುವೆ ಕುಳಿತು ನಿಮ್ಮೊಂದಿಗೆ ಕಾಲ ಕಳೆಯುತ್ತಿರುವುದೇ ನನ್ನ ಭಾಗ್ಯ ಎಂದರು.
