ಬೆಳಗಾವಿ: ರಾಜ್ಯದಲ್ಲಿ ವಿವಿಧ ವಸತಿ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಸಹಾಯಧನ ಹೆಚ್ಚಿಸುವ ಮತ್ತು ಘಟಕ ವೆಚ್ಚ ಹೆಚ್ಚಿಸುವ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದು ವಸತಿ ಸಚಿವರ ಪರವಾಗಿ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಸದಸ್ಯ ಡಿ. ಟಿ. ಶ್ರೀನಿವಾಸ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, 2024-2025 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ್ ಯೋಜನೆ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಗಳಡಿ ಮರು ಹಂಚಿಕೆ ಮಾಡಲಾದ 36,150 ಮನೆಗಳನ್ನು ಒಳಗೊಂಡಂತೆ ಒಟ್ಟಾರೆ 7,38,881 ಮನೆಗಳನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದ್ದು, 3,27,747 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದರು.
ಅಲೆಮಾರಿ ಜನಾಂಗದವರಿಗೆ 2024-25ನೇ ಸಾಲಿನಲ್ಲಿ ಪ್ರತ್ಯೇಕವಾಗಿ ಗುರಿ ಹಂಚಿಕೆಯಾಗಿರುವುದಿಲ್ಲ. ಅಲೆಮಾರಿ ವರ್ಗದ ವಸತಿ ರಹಿತರನ್ನು ಒಳಗೊಂಡಂತೆ ಎಲ್ಲಾ ವಸತಿ ರಹಿತರಿಗೆ ವಸತಿ ಸೌಕರ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
