ಬೆಳಗಾವಿ : ವಿಧಾನಪರಿಷತ್ತಿನಲ್ಲಿಂದು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ್ ಅವರು
6 ನಿರ್ಣಯಗಳನ್ನು ಮಂಡಿಸಿದರು.
ಈ ನಿರ್ಣಯಗಳಿಗೆ ಸಮ್ಮತಿ ಇದೆ ಎಂದು ಭಾವಿಸಿ ಈ ನಿರ್ಣಯಗಳಿಗೆ ಸದನದಿಂದ ಅನುಮೋದನೆ ಸಿಕ್ಕಿದೆ ಎಂದು ಇದೆ ವೇಳೆ, ಸಭಾಪತಿ ಬಸವರಾಜ ಹೊರಟ್ಟಿ ಅವರು ಘೋಷಿಸಿದರು.
ಈ ನಿರ್ಣಯಗಳು ಸರ್ಕಾರಕ್ಕೆ ಬಲ ತಂದುಕೊಟ್ಟಿವೆ. ಈ ಆರು ನಿರ್ಣಯಗಳನ್ನು ಮೂಲವಾಗಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರವು
ಕೇಂದ್ರಕ್ಕೆ ಮನವಿ ಮಾಡಿ ಉತ್ತರ ಕರ್ನಾಟಕ ಭಾಗದ ಜನತೆಗೆ ನ್ಯಾಯ ಒದಗಿಸುವುದಾಗಿ ಸಚಿವರಾದ ಹೆಚ್ ಕೆ ಪಾಟೀಲ ಅವರು ಸದನಕ್ಕೆ ತಿಳಿಸಿದರು.
ನಿರ್ಣಯಗಳ ವಿವರ:
1) ಕಲ್ಯಾಣ ಕರ್ನಾಟಕ ಪ್ರದೇಶದ ಬಹು ದಿನಗಳ ಬೇಡಿಕೆಯಾದ ರಾಯಚೂರು ಜಿಲ್ಲೆಯಲ್ಲಿ ತಕ್ಷಣವೇ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಅನ್ನು ಸ್ಥಾಪಿಸಲು ಭಾರತ ಸರ್ಕಾರಕ್ಕೆ ಆಗ್ರಹಿಸಲು ಮತ್ತು ಈ ಸಂಬಂಧದಲ್ಲಿ ಮುಖ್ಯಮಂತ್ರಿಯವರ ಪತ್ರಗಳು ಹಾಗೂ ನಿರಂತರ ಪ್ರಯತ್ನಗಳ ಪೂರಕವಾಗಿರುವ ನಿರ್ಣಯವನ್ನು ಈ ಸದನವು ಸರ್ವಾನುಮತದಿಂದ ನಿರ್ಣಯಿಸುತ್ತದೆ.
2) ಕರ್ನಾಟಕದಲ್ಲಿ ಬೆಂಗಳೂರು-ಮೈಸೂರು ಪ್ರದೇಶದಲ್ಲಿ ಮಾತ್ರ ಕೇಂದ್ರಿಕೃತವಾಗಿರುವ 73 ರಾಷ್ಟ್ರೀಯ ಪ್ರಾಮುಖ್ಯತೆಯ ಕೇಂದ್ರ ಸರ್ಕಾರದ ಸಂಸ್ಥೆಗಳನ್ನು ಗುರುತಿಸಿ, ಅವುಗಳಲ್ಲಿ ಕನಿಷ್ಟ 25 ಪ್ರಮುಖ ಸಂಶೋಧನಾ ಸಂಸ್ಥೆಗಳು ಸೇರಿದಂತೆ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವರ್ಗಾಯಿಸಲು ಭಾರತ ಸರ್ಕಾರವನ್ನು ಆಗ್ರಹಿಸಲು ಈ ಸದನವು ಸರ್ವಾನುಮತದಿಂದ ನಿರ್ಣಯಿಸುತ್ತದೆ.
3) ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 (UKP-III)ನ್ನು ತಕ್ಷಣವೇ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು, ಕೇಂದ್ರ ಅನುದಾನ ಬಿಡುಗಡೆ ಮಾಡಲು ಮತ್ತು ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2 (KWDT-II)ರ ಅಂತಿಮ ತೀರ್ಪಿನ ಗೆಜೆಟ್ ಅಧಿಸೂಚನೆಗೆ ಒತ್ತಾಯಿಸಲು ಈ ಸದನವು ಸರ್ವಾನುಮತದಿಂದ ನಿರ್ಣಯಿಸುತ್ತದೆ.
4) ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ರೂ.5000 ಕೋಟಿ ಹೊಂದಾಣಿಕೆ ಅನುದಾನವನ್ನು ವಿದರ್ಭ ಅಭಿವೃದ್ಧಿ ಮಾದರಿಯಲ್ಲಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಲು ಈ ಸದನವು ಸರ್ವಾನುಮತದಿಂದ ನಿರ್ಣಯಿಸುತ್ತದೆ.
5) ಕರ್ನಾಟಕದಲ್ಲಿ ಕಬ್ಬು ಮತ್ತು ಇತರೆ ಕಚ್ಚಾ ವಸ್ತುಗಳನ್ನು ಆಧರಿಸಿ ಉತ್ಪಾದಿಸುವ ಎಥೆನಾಲ್ ಸಾಮರ್ಥ್ಯಕ್ಕೆ ಅನುಗುಣವಾಗಿ ತಾರತಮ್ಯ ಮಾಡದೇ ಸಮಾನವಾದ ಎಥೆನಾಲ್ ಸಂಗ್ರಹಣೆ ಪ್ರಮಾಣವನ್ನು ನಿಗದಿಪಡಿಸಿ ರೈತರ ರಕ್ಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ಈ ಸದನವು ಸರ್ವಾನುಮತದಿಂದ ನಿರ್ಣಯಿಸುತ್ತದೆ.
6) ಮಹದಾಯಿ ನ್ಯಾಯಾಧಿಕರಣದ ತೀರ್ಪಿನನ್ವಯ ಕುಡಿಯುವ ನೀರು ಪೂರೈಕೆಯ ಮಹತ್ವಾಕಾಂಕ್ಷೆಯ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗೆ ಅಗತ್ಯವಿರುವ ಅರಣ್ಯ ಮತ್ತು ವನ್ಯಜೀವಿ ಮಂಡಳಿಗಳ ಅನುಮೋದನೆಗಳನ್ನು ತ್ವರಿತವಾಗಿ ಒದಗಿಸಲು ಭಾರತ ಸರ್ಕಾರದ ತುರ್ತು ಕ್ರಮಕ್ಕಾಗಿ ಒತ್ತಾಯಿಸಲು ಈ ಸದನವು ಸರ್ವಾನುಮತದಿಂದ ನಿರ್ಣಯಿಸುತ್ತದೆ.
