ಬೆಂಗಳೂರು: ದೇಶದ ಭದ್ರತೆ ಮತ್ತು ಸುರಕ್ಷತೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದ್ದು, ಪೊಲೀಸರು ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರಾದ ಡಾ.ಎಂ.ಎ. ಸಲೀಂ ಅವರು ತಿಳಿಸಿದರು.
ಇಂದು ಥಣಿಸಂದ್ರದ ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ 8ನೇ ತಂಡದ 416 ನಾಗರಿಕ ಪೊಲೀಸ್ ಕಾನ್ಸ್‍ಟೇಬಲ್‍ಗಳ ನಿರ್ಗಮನ ಪಥ ಸಂಚಲನ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬದಲಾಗುತ್ತಿದ್ದು, ಮೌಲ್ಯಗಳು, ಆದರ್ಶಗಳು ಸದಾ ಮಾರ್ಗದರ್ಶನವಾಗಬೇಕು. ಉತ್ತಮ ಮೌಲ್ಯಗಳನ್ನು ಆದರ್ಶವಾಗಿ ತೆಗೆದುಕೊಂಡಾಗ ಮಾತ್ರ ಪೊಲೀಸ್ ಇಲಾಖೆ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ ಎಂದರು.
10 ತಿಂಗಳಿಂದ ತರಬೇತಿ ಪಡೆದಿರುವ ಪ್ರಶಿಕ್ಷಣಾರ್ಥಿಗಳಿಗೆ ಅಭಿನಂದಿಸುತ್ತೇನೆ. ಪ್ರತಿಯೊಂದು ತಂಡವು ಆಕರ್ಷಕ ಪಥಸಂಚಲನ ನಡೆಸಿದ್ದಾರೆ. ಯಾವುದೇ ಒಂದು ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಸುರಕ್ಷತೆಯ ವಾತಾವರಣ ಬಹಳ ಮುಖ್ಯವಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಸುರಕ್ಷತೆ ಇರುವುದರಿಂದ ಹೆಚ್ಚು ಬೆಳವಣಿಗೆ ಹೊಂದಲು ಸಾಧ್ಯವಾಗಿದೆ. ಭದ್ರತೆ, ಸುರಕ್ಷತೆ ಇಲ್ಲದ ದೇಶಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಹಾಗಾಗಿ ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ ಎಂದರು.
ಸಾರ್ವಜನಿಕರ ಆಸ್ತಿ, ಪಾಸ್ತಿ ರಕ್ಷಣೆ, ಸುರಕ್ಷತೆ ಮಾಡುವುದು ಪೊಲೀಸರ ಕರ್ತವ್ಯ. ಸಾರ್ವಜನಿಕರ ಸಮಸ್ಯೆಗಳನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಬೇಕು. ಜನರು ಸಂಕಷ್ಟದಲ್ಲಿರುವಾಗ ಮೊದಲಿಗೆ ನೆನಪಿಗೆ ಬರುವುದು ಪೊಲೀಸ್ ಇಲಾಖೆ. ಇಲಾಖೆಯ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡಿರುತ್ತಾರೆ ಹಾಗಾಗಿ ಜನರ ಸಂಕಷ್ಟಗಳಿಗೆ ಪರಿಹಾರ ನೀಡುವುದು ತುಂಬಾ ಮುಖ್ಯವಾಗಿದೆ. ಪೊಲೀಸರನ್ನು ಮೊದಲ ಸ್ನೇಹಿತ ಎಂದು ಕರೆಯುತ್ತಾರೆ. ಸಾರ್ವಜನಿಕರ ನಡುವೆ ಜನಸ್ನೇಹಿಯಾಗಿ, ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಲು ತರಬೇತಿ ಅಗತ್ಯವಾಗಿದೆ.
ಪೊಲೀಸ್ ಇಲಾಖೆಗೆ ಗುಣಮಟ್ಟ ಶಿಕ್ಷಣ ಹಾಗೂ ಉತ್ತಮ ಚಾರಿತ್ರ್ಯ ಹೊಂದಿರುವವರು ಆಯ್ಕೆಯಾಗುತ್ತಾರೆ. ಪೊಲೀಸ್ ತರಬೇತಿ ಶಾಲೆಗಳು ಅವರಿಗೆ ಉತ್ತಮ ರೀತಿಯಲ್ಲಿ ಒಳಾಂಗಣ ಮತ್ತು ಹೊರಾಂಗಣ ಕಠಿಣ ತರಬೇತಿ ನೀಡಿ ನಾಗರಿಕ ಸೇವೆಗೆ ಸಜ್ಜುಗೊಳಿಸಿ ಪೊಲೀಸ್ ಅಧಿಕಾರಿಗಳನ್ನಾಗಿ ರೂಪಿಸುತ್ತಾರೆ ಎಂದರು.
ತಂತ್ರಜ್ಞಾನ ಬೆಳವಣಿಗೆಯಾದಂತೆ ಅಪರಾಧಗಳ ಸ್ವರೂಪವೂ ಸಹ ಬದಲಾಗಿದೆ, ಸೈಬರ್ ಅಪರಾಧಗಳು, ದರೋಡೆ, ಸುಲಿಗೆ, ಕೊಲೆ ಇಂತಹ ಗಂಭೀರ ಪ್ರಕರಣಗಳನ್ನು ಪತ್ತೆ ಹಚ್ಚಲು ಸನ್ನದ್ದರಾಗಿರಬೇಕು. ಬೆಂಗಳೂರು ನಗರದಲ್ಲೇ ಶೇ. 28 ರಷ್ಟು ಸೈಬರ್ ಅಪರಾಧಗಳು ಆಗುತ್ತಿವೆ. ಇವುಗಳನ್ನು ನಿಯಂತ್ರಿಸಲು ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಪ್ರಶಿಕ್ಷಣಾರ್ಥಿಗಳು ಸಜ್ಜಾಗಬೇಕು ಎಂದರು.
ಸಮಾಜದಲ್ಲಿ ಕಿಡಿಗೇಡಿಗಳನ್ನು ಗುರ್ತಿಸಿ ಶಿಕ್ಷೆಗೆ ಒಳಪಡಿಸುವ ಮೂಲಕ ಉತ್ತಮ ಸಾರ್ವಜನಿಕರಿಗೆ ನ್ಯಾಯ ದೊರಕಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಥಣಿಸಂದ್ರ ಪೊಲೀಸ್ ತರಬೇತಿ ಶಾಲೆಯ ಎಸ್‍ಪಿ ಹಾಗೂ ಪ್ರಾಂಶುಪಾಲರಾದ ಎಂ ಬಾಬು ಅವರು, ಥಣಿಸಂದ್ರ ಪೊಲೀಸ್ ತರಬೇತಿ ಶಾಲೆಯಲ್ಲಿ 2016 ರಿಂದ ತರಬೇತಿ ಪ್ರಾರಂಭಗೊಂಡು ಇಲ್ಲಿಯವರೆಗೆ 7 ತಂಡಗಳಲ್ಲಿ ಒಟ್ಟು 2744 ಪ್ರಶಿಕ್ಷಣಾರ್ಥಿಗಳಿಗೆ ಬುನಾದಿ ತರಬೇತಿಯನ್ನು ಹಾಗೂ ವಿವಿಧ ಶ್ರೇಣಿಯ ಅಧಿಕಾರಿಗಳಿಗೆ 47 ತಂಡಗಳಲ್ಲಿ 6000 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಬುನಾದಿಯೇತರ ತರಬೇತಿ ನೀಡಲಾಗಿದೆ ಎಂದರು.
ಪ್ರಸ್ತುತ 8 ನೇ ತಂಡದಲ್ಲಿ 23 ಜಿಲ್ಲೆಗಳಿಂದ ಒಟ್ಟು 416 ಪ್ರಶಿಕ್ಷಣಾರ್ಥಿಗಳಿದ್ದು, ಬುನಾದಿ ತರಬೇತಿಯು 2025 ನೇ ಫೆಬ್ರವರಿ 1 ರಂದು ಪ್ರಾರಂಭಗೊಂಡು ಇಂದಿಗೆ 10 ತಿಂಗಳ ತರಬೇತಿಯನ್ನು ಪೂರ್ಣಗೊಳಿಸಿ ಸುಶಿಕ್ಷಿತ ಆರಕ್ಷಕರಾಗಿ ತಮ್ಮ ಮಾತೃ ಘಟಕಕ್ಕೆ ಹಿಂದಿರುಗುತ್ತಿದ್ದಾರೆ. ತರಬೇತಿಯ ಗುಣಮಟ್ಟವನ್ನು ಹೆಚ್ಚಿಸಲು ಐದು ಮಾಸಿಕ ಪರೀಕ್ಷೆ, ಮಧ್ಯಂತರ ಪರೀಕ್ಷೆ ಮತ್ತು ಅಂತಿಮ ಪರೀಕ್ಷೆಗಳ ನಿರಂತರ ಮೌಲ್ಯಮಾಪನ ಮಾಡಲಾಗಿದೆ ಎಂದರು.
10 ತಿಂಗಳ ಬುನಾದಿ ತರಬೇತಿಯನ್ನು ಪೂರೈಸಿ ಈ ದಿನ ತಾಯಿನಾಡಿನ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುತ್ತಿರುವ ತಮ್ಮೆಲ್ಲರ ಮುಂದಿನ ವೃತ್ತಿ ಬದುಕು ಶುಭವಾಗಿರಲಿ ಎಂದು ಹಾರೈಸಿದರು.
ಇದೇ ವೇಳೆ ಥಣಿಸಂದ್ರ ಪೊಲೀಸ್ ತರಬೇತಿ ಶಾಲೆಯ ಎಸ್‍ಪಿ ಹಾಗೂ ಪ್ರಾಂಶುಪಾಲರಾದ ಎಂ ಬಾಬು ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ನಂತರ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿಗಳಿಗೆ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರಾದ ಡಾ.ಎಂ.ಎ. ಸಲೀಂ ಅವರು ಬಹುಮಾನ ವಿತರಿಸಿದರು. ನಂತರ “ಹೆಜ್ಜೆ ಗುರುತು” ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಫೈರಿಂಗ್ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಗೆ ನೇಮಕಗೊಂಡಿರುವ ಸಿಪಿಸಿ ಕಾರ್ತಿಕ್ ಪ್ರಥಮ ಸ್ಥಾನ, ಕಲಬುರಗಿ ಜಿಲ್ಲೆಗೆ ನೇಮಕಗೊಂಡಿರುವ ಸಿಪಿಸಿ ಸತೀಶ್ ಜಮಾದರ್ ದ್ವಿತೀಯ ಸ್ಥಾನ, ಹೊರಾಂಗಣ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಗೆ ನೇಮಕಗೊಂಡಿರುವ ಪ್ರಶಿಕ್ಷಣಾರ್ಥಿ ಕಿಶೋರ ನಾಯ್ಕ ಪ್ರಥಮ ಸ್ಥಾನ, ಬೆಂಗಳೂರು ನಗರಕ್ಕೆ ನೇಮಕಗೊಂಡಿರುವ ಅಕ್ಷಯ್ ನಾಯ್ಕ್ ದ್ವಿತೀಯ ಸ್ಥಾನ, ಒಳಾಂಗಣ ವಿಭಾಗದಲ್ಲಿ ಬೆಂಗಳೂರು ನಗರಕ್ಕೆ ನೇಮಕಗೊಂಡಿರುವ ಸಿಪಿಸಿ ಮಲ್ಲಿಕಾರ್ಜುನ ಪಡಶೆಟ್ಟಿ ಪ್ರಥಮ ಸ್ಥಾನ ಮತ್ತು ಸಿಪಿಸಿ ಮಹಾಂತೇಶ್ ನಾಯಿಕ ದ್ವಿತೀಯ ಸ್ಥಾನ ಹಾಗೂ ಬೆಂಗಳೂರು ನಗರಕ್ಕೆ ನೇಮಕಗೊಂಡಿರುವ ಯಲ್ಲಾಲಿಂಗ ಪಡದಲ್ಲಿ ಅವರಿಗೆ ಸರ್ವೋತ್ತಮ ಪ್ರಶಸ್ತಿ ಬಹುಮಾನ ವಿತರಿಸಲಾಯಿತು.
ಥಣಿಸಂದ್ರ ಪೊಲೀಸ್ ತರಬೇತಿ ಶಾಲೆಯ ಡಿವೈಎಸ್‍ಪಿ ಹಾಗೂ ಉಪ ಪ್ರಾಂಶುಪಾಲರಾದ ಕೇದಾರನಾಥ ಜಿ.ಹೆಚ್ ಅವರು ಸ್ವಾಗತಿಸಿದರು. ಥಣಿಸಂದ್ರ ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಇನ್ಸಪೆಕ್ಟರ್ ಅಲ್ಲಮಪ್ರಭು ಬ. ಹಿರೇಗೌಡರ್ ಅವರು ವಂದಿಸಿದರು.
