ಸಮಗ್ರ ಸುದ್ದಿ

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ತೆರವು – ದಲ್ಜಿತ್ ಕುಮಾರ್

Share

ಬೆಂಗಳೂರು : ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರ ನಿರ್ದೇಶನದಂತೆ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳ ವಿವಿಧ ಸ್ಥಳಗಳಲ್ಲಿ ಸಮಗ್ರ ಸ್ವಚ್ಛತಾ ಅಭಿಯಾನ ಮತ್ತು ಪಾದಚಾರಿ ಮಾರ್ಗ ಅತಿಕ್ರಮಣ ತೆರವು ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ ಎಂದು ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ತಿಳಿಸಿದ್ದಾರೆ.

ನಗರವನ್ನು ಸ್ವಚ್ಛ, ಸುಸಜ್ಜಿತ ಮತ್ತು ಸಾರ್ವಜನಿಕರಿಗೆ ಅನುಕೂಲಕರವಾಗಿರಿಸುವ ಉದ್ದೇಶದಿಂದ, ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಮಿತ ಸ್ವಚ್ಛತಾ ಕಾರ್ಯಗಳು ಮುಂದುವರೆದಿವೆ. ಇದರ ಭಾಗವಾಗಿ, ಇಂದು ಸಹ ಸ್ವಚ್ಛತೆ ಕಾರ್ಯ ಹಾಗೂ ಪಾದಚಾರಿ ಹಾಗೂ ರಸ್ತೆ ಒತ್ತುವರಿ ತೆರವು ಕಾರ್ಯ ನಡೆಸುವ ಮೂಲಕ ನಗರವನ್ನು ಸ್ವಚ್ಛ ಹಾಗೂ ಆರೋಗ್ಯಕರವಾಗಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಇಂದು ಸಾಮೂಹಿಕ ಸ್ವಚ್ಛತಾ ಕಾರ್ಯ ಹಾಗೂ ಪಾದಚಾರಿ ಒತ್ತುವರಿ ತೆರವುಗೊಳಿಸಿದ ಸ್ಥಳಗಳ ವಿವರ:

ಚಾಮರಾಜಪೇಟೆ ಕ್ಷೇತ್ರ: ಚಾಮರಾಜಪೇಟೆ ವಿಭಾಗದ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿಗಳ ಸಹಕಾರದೊಂದಿಗೆ ಪಾದರಾಯನಪುರದಲ್ಲಿ, ಜೆ.ಜೆ.ಆರ್ ನಗರ ಹೊಸಹಳ್ಳಿ ಮುಖ್ಯ ರಸ್ತೆ, ರೈಲ್ವೆ ಬ್ರಿಡ್ಜ್ ಹತ್ತಿರ ಸಾಮೂಹಿಕ ಸ್ವಚ್ಛತಾ ಕಾರ್ಯ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಚಿಕ್ಕಪೇಟೆ ಕ್ಷೇತ್ರ: ಚಿಕ್ಕಪೇಟೆ ವಿಭಾಗದ ಜಯನಗರ ವಾರ್ಡ್ ಮಾಧವನ್ ಪಾರ್ಕ್ ವೃತ್ತ, ಟಿ. ಮರಿಯಪ್ಪ, ಬಿ.ಪಿ ವಾಡಿಯ ರಸ್ತೆಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.

ಗಾಂಧಿನಗರ ಕ್ಷೇತ್ರ: ಗಾಂಧಿನಗರ ವಿಭಾಗದ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಶಾಂತಿನಗರ ಕ್ಷೇತ್ರ:ಶಾಂತಿನಗರ ವಿಭಾಗದ ಎಂ.ಜಿ ರೋಡ್, ಕಬ್ಬನ್ ರಸ್ತೆ ಹಾಗೂ ವಾರ್ಡ್-111 ಶಾಂತಲಾ ನಗರದ ಸುತ್ತಲಿನ ಪ್ರದೇಶದಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.

ಶಿವಾಜಿನಗರ ಕ್ಷೇತ್ರ: ಶಿವಾಜಿನಗರ ವಿಭಾಗದಿಂದ ವಸಂತನಗರ ವ್ಯಾಪ್ತಿಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.

ಸಿ.ವಿ. ರಾಮನ್ ನಗರ ಕ್ಷೇತ್ರ: ಸಿ.ವಿ.ರಾಮನ್ ನಗರ ಕ್ಷೇತ್ರದ ವಾರ್ಡ್-114 ರ ವ್ಯಾಪ್ತಿಯ ಜೀವನ್ ಭೀಮಾನಗರ, ಇಂದಿರಾನಗರದ 15ನೇ ಮುಖ್ಯ ರಸ್ತೆಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ಹಾಗೂ ಪಾದಚಾರಿ ಒತ್ತುವರಿ ತೆರವು ಕೈಗೊಳ್ಳಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ನಗರದ ಸ್ವಚ್ಛತೆ, ಸಂಚಾರ ಸುಗಮತೆ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ರೀತಿಯ ಕಾರ್ಯಾಚರಣೆಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ.

ಕಾರ್ಯಾಚರಣೆ ವೇಳೆ ಜೆ.ಸಿ.ಬಿ.ಗಳು, ಲಾರಿಗಳು, ಟ್ರಾಕ್ಟರ್ ಗಳು, ಆಟೋ ಟಿಪ್ಪರ್ ಗಳನ್ನು ಉಪಯೋಗಿಸಿಕೊಂಡು ರಸ್ತೆ ಪಕ್ಕದ ಹಾಗೂ ಪಾದಚಾರಿ ಮಾರ್ಗದ ತ್ಯಾಜ್ಯ, ಚರಂಡಿಗಳಲ್ಲಿನ ಹೂಳು, ಉಪಯೋಗಿಸದ ತಳ್ಳುವ ಗಾಡಿಗಳು, ಪಾದಚಾರಿ ಒತ್ತುವರಿ ತೆರವು, ಪ್ಲಾಸ್ಟಿಕ್ ತ್ಯಾಜ್ಯ, ಅನುಪಯುಕ್ತ ವಸ್ತುಗಳು, ಅನುಪಯುಕ್ತ ಪೀಠೋಪಕರಣಗಳನ್ನು ತೆರವುಗೊಳಿಸಲಾಗಿದೆ.

ಅನಧಿಕೃತ ಫ್ಲೆಕ್ಸ್ /ಬ್ಯಾನರ್ ತೆರವು:
ಬೆಂಗಳೂರು ಕೇಂದ್ರ ನಗರ ಪಾಲಿಕೆಯ 6 ವಿಭಾಗಗಳ ವ್ಯಾಪ್ತಿ ಅನಧಿಕೃತವಾಗಿ ಅಳವಡಿಸಿದ ಫ್ಲೆಕ್ಸ್, ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದೆ.

ಒಣಗಿದ ರೆಂಬೆ-ಕೊಂಬೆಗಳ ತೆರವು:

ಅರಣ್ಯ ವಿಭಾಗದಿಂದ ಕ್ರೇನ್ ಗಳು ಹಾಗೂ ಯಂತ್ರೋಪಕರಣಗಳ ಸಹಾಯದಿಂದ ಇಂದು ಮೆಜೆಸ್ಟಿಕ್ ಹತ್ತಿರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ ವೃತ್ತದ ಹತ್ತಿರ, ಜಯನಗರದ ಟಿ. ಮರಿಯಪ್ಪ ರಸ್ತೆ, ಲಾಲ್ ಬಾಗ್ ರಸ್ತೆಯಲ್ಲಿ ಮರಗಳ ಒಣಗಿದ ರೆಂಬೆ-ಕೊಂಬೆಗಳನ್ನು ಗುರುತಿಸಿ ತೆರವುಗೊಳಿಸಲಾಗಿದೆ.

ತೋಟಗಾರಿಕೆ ವಿಭಾಗದಿಂದ ರಾಜಭವನ ರಸ್ತೆಯಲ್ಲಿ ರಸ್ತೆ ವಿಭಜಕಗಳ ಸ್ವಚ್ಛತೆ ಹಾಗೂ ಸಸಿಗಳ ಟ್ರಿಮ್ಮಿಂಗ್ ಕಾರ್ಯ ನಡೆಸಲಾಗಿದೆ.

ಸಾಮೂಹಿಕ ಸ್ವಚ್ಛತಾ ಪಾದಚಾರಿ ಒತ್ತುವರಿ ಕಾರ್ಯದಲ್ಲಿ ಆಯಾ ವಿಭಾಗಗಳ ಕಾರ್ಯಪಾಲಕ ಅಭಿಯಂತರರು, ಡಿಜಿಎಂ ಗಳು, ಎ.ಜಿ.ಎಂ.ಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಅರಣ್ಯ, ತೋಟಗಾರಿಕೆ, ಪೌರಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿಗಳು ಸೇರಿದಂತೆ ಇತರೆ ಸಂಬಂಧಪಟ್ಟ ಅಧಿಕಾರಿಗಳು ಪಾಲ್ಗೊಂಡಿದ್ದರು.


Share

You cannot copy content of this page