ಬೆಂಗಳೂರು: ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಾರಿಗೆ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಫೆಬ್ರವರಿ 1 ರಂದು ಬೆಂಗಳೂರಿನಲ್ಲಿ ಬೃಹತ್ ‘5K ಸೇಫ್-ಎ-ಥಾನ್’ (Safe-A-Thon) ಆಯೋಜಿಸಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಶಾಂತಿ ನಗರದಲ್ಲಿರುವ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, “ನಮ್ಮ ರಸ್ತೆ – ನಮ್ಮ ಸುರಕ್ಷತೆ” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುವ ಈ ಕಾರ್ಯಕ್ರಮವು ಸಾರ್ವಜನಿಕರ ಜೀವ ರಕ್ಷಣೆಯ ಉದ್ದೇಶ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಕಳವಳಕಾರಿಯಾಗಿದ್ದು, ಅತಿವೇಗ, ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ಅಜಾಗರೂಕತೆಯೇ ಇದಕ್ಕೆ ಮುಖ್ಯ ಕಾರಣಗಳಾಗಿವೆ. ಇವುಗಳನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದರು.
ರಸ್ತೆ ಸುರಕ್ಷತೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬರ ಕರ್ತವ್ಯ. ವಾಕಿಂಗ್, ಸೈಕ್ಲಿಂಗ್ ಅಥವಾ ಓಟದ ಮೂಲಕ ಈ ಅಭಿಯಾನದಲ್ಲಿ ಪಾಲ್ಗೊಂಡು ಸುರಕ್ಷಿತ ಸಂಚಾರದ ಬಗ್ಗೆ ಪ್ರತಿಜ್ಞೆ ಮಾಡೋಣ ಎಂದು ಸಚಿವರು ಕರೆ ನೀಡಿದರು.
ಫೆಬ್ರವರಿ 01, 2026 ರಂದು ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ರಸ್ತೆ ಸುರಕ್ಷತೆಗಾಗಿ ಜನಜಾಗೃತಿ: ‘‘5K ಸೇಫ್-ಎ-ಥಾನ್’ (Safe-A-Thon) ಆಯೋಜನೆಯನ್ನು ಮಾಡಲಾಗಿದೆ.
ಉಚಿತ ನೋಂದಣಿ: ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಸಾರ್ವಜನಿಕರು ಮತ್ತು ಯುವಜನರು ಮುಕ್ತವಾಗಿ ಭಾಗವಹಿಸಬಹುದು.
ಆಸಕ್ತರು ಜಾಲತಾಣ www.saferoadskarnataka.com ಮೂಲಕ ಅಥವಾ ಚಿತ್ರದಲ್ಲಿರುವ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
