ಬೆಂಗಳೂರು: ರಬ್ಬರ್ ಗೆ ಬೆಂಬಲ ಬೆಲೆ ನಿಗದಿಪಡಿಸುವ ಮತ್ತು ಕೃಷಿ ಹವಾಮಾನ ಆಧಾರಿತ ವಿಮೆ ಸೌಲಭ್ಯ ಒದಗಿಸಲು ಇರುವ ಸಾಧ್ಯತೆ ಬಗ್ಗೆ ರಬ್ಬರ್ ಮಂಡಳಿಯು ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ರಬ್ಬರ್ ಬೋರ್ಡ್ ಗೆ ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಇಂದು ವಿಧಾನ ಸಭೆಯ ಕಲಾಪದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸುಳ್ಯ ವಿಧಾನಸಭಾ ಸದಸ್ಯೆ ಭಾಗೀರಥಿ ಅವರು ರಬ್ಬರ್ ಬೆಳೆಯನ್ನು ತೋಟಗಾರಿಕಾ ಬೆಳೆಗಳ ವ್ಯಾಪ್ತಿಗೆ ಒಳಪಡಿಸಿ ಬೆಳೆ ಸ್ಥಿರೀಕರಣ ನಿಧಿ ಸ್ಥಾಪಿಸಿ ರಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಹಾಗೂ ರಬ್ಬರ್ ಕೃಷಿಗೆ ಹವಾಮಾನ ಆಧಾರಿತ ವಿಮಾ ಸೌಲಭ್ಯ ಒದಗಿಸುವಂತೆ ಕೋರಿದರು.
ಇದಕ್ಕೆ ಉತ್ತರಿಸಿದ ಸಚಿವರು, ವಾಣಿಜ್ಯ ಬೆಳೆಯಾದ ರಬ್ಬರ್ ನ ಬೆಲೆ ವಿಷಯವು ಬಹುಪಾಲು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ರಬ್ಬರ್ ಬೆಳೆಯವ ರೈತರು ತೊಂದರೆಗಳನ್ನು ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ರಬ್ಬರ್ ಬೆಳೆಯು ಬಹುವಾರ್ಷಿಕ ವಾಣಿಜ್ಯ ಬೆಳೆಯಾಗಿದ್ದು, ಪ್ಲಾಂಟೇಷನ್ ಬೆಳೆಯಾಗಿದೆ. ಈ ಬೆಳೆಯು ಕೇಂದ್ರ ಸರ್ಕಾರದ ಸಂಸ್ಥೆಯಾದ ರಬ್ಬರ್ ಮಂಡಳಿ ವ್ಯಾಪ್ತಿಗೆ ಒಳಪಟ್ಟಿದ್ದು, ರಬ್ಬರ್ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ರಬ್ಬರ್ ಮಂಡಳಿ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.
