ಸಮಗ್ರ ಸುದ್ದಿ

ಕ್ವಾಂಟಮ್‌ ತಂತ್ರಜ್ಞಾನದ ಅಭಿವೃದ್ದಿಗೆ ದ್ವಿಪಕ್ಷೀಯ ಸಹಕಾರ ಅಗತ್ಯ: ಸಚಿವ ಎನ್‌ ಎಸ್‌ ಭೋಸರಾಜು | ವಿಧಾನಸೌಧದಲ್ಲಿ ಬ್ರೆಜಿಲ್ ನಿಯೋಗದೊಂದಿಗೆ ಮಹತ್ವದ ದ್ವಿಪಕ್ಷೀಯ ಸಭೆ

Share

ಬೆಂಗಳೂರು: ಜಾಗತಿಕ ಅಭಿವೃದ್ದಿಯನ್ನು ಮುನ್ನಡೆಸುವ ಪ್ರಮುಖ ಒಕ್ಕೂಟವಾಗಿರುವ ʼಬ್ರಿಕ್ಸ್”‌ ರಾಷ್ಟ್ರಗಳು ಕ್ವಾಂಟಮ್‌ ತಂತ್ರಜ್ಞಾನದ ಅಭಿವೃದ್ದಿಗೆ ಪರಸ್ಪರ ಸಹಕಾರಕ್ಕೆ ಮುಂದಾಗಬೇಕು *ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್.ಎಸ್. ಭೋಸರಾಜು ಕರೆ ನೀಡಿದರು.

ಇಂದು ವಿಧಾನಸೌಧದಲ್ಲಿ ತಮ್ಮ ನ್ನು ಭೇಟಿಯಾದ ಬ್ರೆಜಿಲ್‌ನ ಸಾರ್ವಜನಿಕ ಸೇವೆಗಳ ನಿರ್ವಹಣೆ ಮತ್ತು ನಾವೀನ್ಯತೆ ಸಚಿವೆಯಾದ ಎಸ್ತರ್ ಡ್ವೆಕ್ (Esther Dweck) ಅವರ ನೇತೃತ್ವದ ಬ್ರೆಜಿಲ್ ದೇಶದ ಉನ್ನತ ಮಟ್ಟದ ನಿಯೋಗದೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

“ಆಸಿಯಾನ್ (ASEAN) ನಂತಹ ಇತರ ಅಂತರರಾಷ್ಟ್ರೀಯ ಒಕ್ಕೂಟಗಳು ಈಗಾಗಲೇ ಕ್ವಾಂಟಮ್ ಶೃಂಗಸಭೆಗಳನ್ನು ಆಯೋಜಿಸುತ್ತಿವೆ. ಬ್ರಿಕ್ಸ್ ಸದಸ್ಯರಾಗಿ ನಾವು ಕೃಷಿ, ಔಷಧ ಸಂಶೋಧನೆ ಜಲಸಂಪನ್ಮೂಲ ನಿರ್ವಹಣೆ, ಹವಾಮಾನ ಮುನ್ಸೂಚನೆ ಮತ್ತು ಪ್ರವಾಹ ನಿರ್ವಹಣೆಯನ್ನು ಸುಧಾರಿಸಲು ಕ್ವಾಂಟಮ್ ತಂತ್ರಜ್ಞಾನವನ್ನು ಬಳಸುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕು. ಆ ಮೂಲಕ ನಮ್ಮ ಸಮಸ್ಯೆಗಳನ್ನು ಜಂಟಿಯಾಗಿ ಬಗೆಹರಿಸಿಕೊಂಡು ದೇಶದ ಅಭಿವೃದ್ದಿಗೆ ಮುಂದಾಗಬೇಕಾಗಿದೆ” ಎಂದು ಸಚಿವರು ತಿಳಿಸಿದರು.

ರಾಜ್ಯದ ಪ್ರಮುಖ ಸಾಧನೆಗಳನ್ನು ವಿವರಿಸಿದ ಸಚಿವರು, “ಕರ್ನಾಟಕ ರಾಜ್ಯ ಈಗಾಗಲೇ ದೇಶದ ಮೊಟ್ಟಮೊದಲ, ಸ್ಥಳೀಯವಾಗಿ ನಿರ್ಮಿಸಲಾದ ವಾಣಿಜ್ಯ ಕ್ವಾಂಟಮ್ ಕಂಪ್ಯೂಟರ್ ಹೊಂದಿದ್ದೇವೆ. ರಾಜ್ಯದ ಮಹತ್ವಾಕಾಂಕ್ಷೆಯ ಗುರಿಗಳನ್ನು ವಿವರಿಸಿದ ಅವರು, 100 ಮಿಲಿಯನ್ ಯುಎಸ್ ಡಾಲರ್ ಮೊತ್ತದ ‘ಕ್ವಾಂಟಮ್ ಇನ್ನೋವೇಶನ್ ಫಂಡ್’ ಘೋಷಣೆ ಮತ್ತು ‘ಕ್ವಾಂಟಮ್ ಸಿಟಿ’ ಅಭಿವೃದ್ಧಿಯೊಂದಿಗೆ ಕರ್ನಾಟಕವು ದೇಶಕ್ಕೇ ಮಾದರಿಯಾಗಿದೆ ಎಂದರು.

“2035ರ ವೇಳೆಗೆ 20 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಕ್ವಾಂಟಮ್ ಆರ್ಥಿಕತೆಯನ್ನು ಸೃಷ್ಟಿಸುವುದು ಮತ್ತು ಎರಡು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ,” ಕೃಷಿ, ಪ್ರವಾಹ ನಿರ್ವಹಣೆ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಕ್ವಾಂಟಮ್ ತಂತ್ರಜ್ಞಾನವನ್ನು ಬಳಸುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕ್ವಾಂಟಮ್ ಕಂಪ್ಯೂಟಿಂಗ್ ಹೊರತಾಗಿ, ಸಭೆಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (Digital Public Infrastructure), ಕೃತಕ ಬುದ್ಧಿಮತ್ತೆ (AI) ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಕುರಿತೂ ವ್ಯಾಪಕ ಚರ್ಚೆ ನಡೆಯಿತು.

“ಸಣ್ಣ ನೀರಾವರಿ ಇಲಾಖೆಯಲ್ಲಿ, ನಾವು ‘ಡಿಜಿಟಲ್ ವಾಟರ್ ಸ್ಟ್ಯಾಕ್’ (Digital Water Stack) ಅನುಷ್ಠಾನಗೊಳಿಸುತ್ತಿದ್ದು, ಇದು ಉಪಗ್ರಹ ಆಧಾರಿತ ಸರ್ವೇಲೆನ್ಸ್‌ ಹಾಗೂ ಆರ್ಟಿಫೀಶಿಯಲ್‌ ತಂತ್ರಜ್ಞಾನ ಹೊಂದಿರುವ ವ್ಯವಸ್ಥೇಯಾಗಿದ್ದು, ಇದರಿಂದ ಜಲಮೂಲಗಳ ಗಡಿಗಳನ್ನು ಒತ್ತುವರಿಯಿಂದ ರಕ್ಷಿಸಲು, ಕೆರೆಗಳ ನೀರಿನ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಂತರ್ಜಲ ಮಟ್ಟದ ಬಗ್ಗೆ ನಿಗಾವಹಿಸಲು ಉಪಯೋಗಿಸಲಾಗುತ್ತದೆ ಎಂದರು.

ಬ್ರೆಜಿಲ್‌ನ ಉನ್ನತ ಮಟ್ಟದ ನಿಯೋಗದಲ್ಲಿ ಡೇಟಾಪ್ರೆವ್ (Dataprev) ಅಧ್ಯಕ್ಷರಾದ ರೊಡ್ರಿಗೊ ಅಸುಂಪಾವೊ ಮತ್ತು ಬ್ರೆಜಿಲಿಯನ್ ಎಐ ಅಬ್ಸರ್ವೇಟರಿ (Brazilian AI Observatory) ನಾಯಕರಂತಹ ಹಿರಿಯ ತಂತ್ರಜ್ಞಾನ ಅಧಿಕಾರಿಗಳು ಮತ್ತು ತಜ್ಞರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ನಿನ್ನೆ, ಬೊಲಿವಿಯಾದ ವಿಜ್ಞಾನ ಮತ್ತು ತಂತ್ರಜ್ಞಾನ ಉಪಸಚಿವ ಶ್ರೀ ಒಮರ್ ಅಲ್ಫ್ರೆಡೊ ಪೆನಲೋಜಾ ಎಸ್ಕಲೇರಾ ಅವರ ನೇತೃತ್ವದ ನಿಯೋಗವು, ಕಾರ್ಯತಂತ್ರದ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಾನ್ಯ ಸಚಿವ ಶ್ರೀ ಎನ್.ಎಸ್. ಭೋಸರಾಜು ಅವರೊಂದಿಗೆ ಫಲಪ್ರದ ದ್ವಿಪಕ್ಷೀಯ ಸಭೆ ನಡೆಸಿತು. ಐಟಿ/ಬಿಟಿ ಇಲಾಖೆ ಕಾರ್ಯದರ್ಶಿ ಶ್ರೀಮತಿ ಎನ್. ಮಂಜುಳಾ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ, ಶಿಕ್ಷಣ, ಆರೋಗ್ಯ ಮತ್ತು ಒಟ್ಟಾರೆ ಜೀವನಮಟ್ಟವನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆ (AI) ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು.


Share

You cannot copy content of this page