ಬೆಂಗಳೂರು:ಸಮ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ಮಾಧ್ಯಮಗಳು ಸಮಾಜದಲ್ಲಿ ಅವಕಾಶ ವಂಚಿತ ಸಮುದಾಯಗಳ ಪರವಾಗಿ ಧ್ವನಿ ಎತ್ತಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ (ಕೋಲಾರ) ಕುಲಪತಿಗಳಾದ ಪ್ರೊ. ಬಿ.ಕೆ.ರವಿ ಕರೆ ಕೊಟ್ಟರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಡಾಕ್ಟರ್ ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯ, ಜ್ಞಾನಭಾರತಿ, ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ‘ಮಾಧ್ಯಮ ಹಬ್ಬ 2026’ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜನರನ್ನು ದಿಕ್ಕುತಪ್ಪಿಸುವಂತಹ, ಅವರಿಗೆ ಸುಳ್ಳು ಸಂದೇಶವನ್ನು ಕೊಟ್ಟು ಅವರಲ್ಲಿ ಮಾನಸಿಕ ಗೊಂದಲವನ್ನು ಉಂಟು ಮಾಡುವುದು ಪತ್ರಕರ್ತರ ಕೆಲಸವಲ್ಲ. ಸತ್ಯ ಅಸತ್ಯತೆಯನ್ನು ತಿಳಿದುಕೊಂಡು ಸುದ್ದಿ, ಲೇಖನಗಳನ್ನು ಬರೆಯಬೇಕು. ಸಾಮಾಜಿಕ ಹೊಣೆಗಾರಿಕೆ ಮರೆತ ಮಾಧ್ಯಮ ಬಹಳ ಕಾಲ ಜನಸಾಮಾನ್ಯರ ವಿಶ್ವಾಸಾರ್ಹತೆ ಪಡೆಯಲಾರದು ಎಂದು ಭಾವಿ ಪತ್ರಕರ್ತರಾಗುವ ವಿದ್ಯಾರ್ಥಿಗಳನ್ನು ಅವರು ಎಚ್ಚರಿಸಿದರು.
ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಅದು ಎಂದಿಗೂ ಮನುಷ್ಯನ ಆಲೋಚನೆ, ಅಭಿಪ್ರಾಯ ಮತ್ತು ವಿವೇಚನೆಯನ್ನು ಪ್ರದರ್ಶಿಸಲು ಸಾಧ್ಯವಿಲ್ಲ ಎಂದ ಅವರು ಪತ್ರಕರ್ತನಿಗೆ ಈ ಗುಣಗಳನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟರು. ಹಾಗಾಗಿ ಒಬ್ಬ ಪತ್ರಕರ್ತನಿಗೆ ಏಐ ಮೇಲೆ ಅತಿಯಾದ ಅವಲಂಬನೆ ಅಪಾಯಕಾರಿ ಎಂದು ಅವರು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ರಮೇಶ್ ಬಿ ಅವರು ಮಾತನಾಡುತ್ತಾ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾಧ್ಯಮದ ವಿವಿಧ ಆಯಾಮಗಳ ಬಗ್ಗೆ ಪರಿಚಯಿಸಿ, ಸ್ಪರ್ಧೆಗಳ ಮೂಲಕ ಅವರಲ್ಲಿ ಕ್ಷೇತ್ರದ ಪ್ರಾಯೋಗಿಕ ಅನುಭವ ನೀಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅರ್ಥಪೂರ್ಣ ಕಾರ್ಯಕ್ರಮವನ್ನು ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವರ್ಷಗಳ ಹಿಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೂ ಹಾಗೂ ಇಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೂ ತುಂಬಾ ವ್ಯತ್ಯಾಸವಿದೆ. ತಂತ್ರಜ್ಞಾನವು ಇಂದು ಎಲ್ಲ ಮಾಹಿತಿಗಳನ್ನು ಬೆರಳ ತುದಿಗಳಲ್ಲಿ, ಮೊಬೈಲ್ ನಂತಹ ಸಣ್ಣ ಉಪಕರಣದಲ್ಲಿ ತಂದಿರಿಸಿದೆಯಾದರೂ, ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಹೆಸರು ಮಾಡಿರುವ ನುರಿತರ ಅನುಭವ ಅಭಿಪ್ರಾಯ ಸಲಹೆಗಳನ್ನು ಮುಖಾಮುಖಿ ಪಡೆಯುವುದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಬಹಳ ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟರು.
ಎರಡು ದಿನಗಳ ಕಾಲ ನಡೆದ ಮಾಧ್ಯಮ ಹಬ್ಬ-2026ರ ವಿದ್ಯಾರ್ಥಿಗಳಿಗೆ ಕಾರ್ಯಗಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಪ್ರಶಂಸನಾ ಪತ್ರ ಹಾಗೂ ಟ್ರೋಫಿಗಳನ್ನು ನೀಡಲಾಯಿತು.
ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು ವಿವರ
ವರದಿಗಾರಿಕೆ ಬರವಣೆಗೆ ಸ್ಪರ್ಧೆಯಲ್ಲಿ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮೂಹ ಮತ್ತು ಸಂವಹನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಯಾದ ಎಸ್. ವರುಣ್ ಪ್ರಥಮ ಬಹುಮಾನ, ಬೆಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದ ವಿದ್ಯಾರ್ಥಿಯಾದ ಮೌನಿಕ ಆರ್, ದ್ವಿತೀಯ ಬಹುಮಾನ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದ ವಿದ್ಯಾರ್ಥಿಯಾದ ಸೌಂದರ್ಯ ರವರು ತೃತೀಯ ಬಹುಮಾನ ಪಡೆದರು.
ಮೋಜೋ ಸ್ಪರ್ಧೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದ ವಿದ್ಯಾರ್ಥಿಯಾದ ನಿಶಾಂತ್ ಸೋಮಶೇಖರ್ ಪ್ರಥಮ ಬಹುಮಾನ, ಬೆಂಗಳೂರು ವಿಶ್ವವಿದ್ಯಾಲಯದ ಸಮೂಹ ಮತ್ತು ಸಂವಹನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಯಾದ ಭರತ್ ಆರ್, ರಾಹುಲ್ ರವರು ದ್ವಿತೀಯ ಬಹುಮಾನ ಮತ್ತು ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮೂಹ ಮತ್ತು ಸಂವಹನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಯಾದ ಮೋಹನ್ ವಿ, ಬಾವನ ಎಂ.ವಿ ತೃತೀಯ ಬಹುಮಾನ ಪಡೆದರು.
ಸಂಪಾದಕೀಯ ಬರವಣೆಗೆ ಸ್ಪರ್ಧೆಯಲ್ಲಿ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮೂಹ ಮತ್ತು ಸಂವಹನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಯಾದ ಎಸ್. ವರುಣ್ ಪ್ರಥಮ ಬಹುಮಾನ, ಬೆಂಗಳೂರು ವಿಶ್ವವಿದ್ಯಾಲಯದ ಸಮೂಹ ಮತ್ತು ಸಂವಹನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಯಾದ ಭರತ್ ಆರ್ ದ್ವಿತೀಯ ಬಹುಮಾನ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದ ವಿದ್ಯಾರ್ಥಿಯಾದ ಸುಚಿತ್ರಾ ಕೆ.ಆರ್ ತೃತೀಯ ಬಹುಮಾನ ಪಡೆದರು.
ರೇಡಿಯೋ ಮತ್ತು ಪಾಡ್ ಕ್ಯಾಸ್ಟ್ ಸಂದರ್ಶನ ಸ್ಪರ್ಧೆಯಲ್ಲಿ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮೂಹ ಮತ್ತು ಸಂವಹನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಯಾದ ಮೋಹನ್ ಬಿ, ಲಿಖಿತ ಪ್ರಥಮ ಬಹುಮಾನ, ಬೆಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದ ವಿದ್ಯಾರ್ಥಿಯಾದ ಲುಂಬಿನಿ, ಸಿಂಧು ಕೃಪ ದ್ವಿತೀಯ ಬಹುಮಾನ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದ ವಿದ್ಯಾರ್ಥಿಯಾದ ಪುಷ್ಪ ಮತ್ತು ಕಾವ್ಯ ರವರು ತೃತೀಯ ಬಹುಮಾನವನ್ನು ಪಡೆದರು.
ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದ ಸಂಯೋಜಕರಾದ ಪ್ರೊ. ವಾಹಿನಿ ಅರವಿಂದ್, ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮೂಹ ಮತ್ತು ಸಂವಹನ ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷರಾದ ಡಾ. ತಾಂಡವ ಗೌಡ ಟಿ.ಎನ್. ಕನ್ನಡ ಚಲನಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರಾದ ಬಿ.ಸುರೇಶ, ಬೆಂಗಳೂರು ನಗರ ಜಿಲ್ಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಸೇರಿದಂತೆ ಪತ್ರಿಕೋದ್ಯಮದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
