ಸಮಗ್ರ ಸುದ್ದಿ

ಅತ್ಯುತ್ತಮ ಬಜೆಟ್ : ಬೈರತಿ ಸುರೇಶ್ ಬಣ್ಣನೆ

Share

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ದಾಖಲೆಯ 17 ನೇ ಬಜೆಟ್ ಅತ್ಯುತ್ತಮವಾಗಿದ್ದು, ಇದು ಸಮತೋಲಿತ, ಸಮಪಾಲು-ಸಮಬಾಳ್ವೆಯ ಆಯವ್ಯಯವಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಬಣ್ಣಿಸಿದ್ದಾರೆ.

ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಹಿಂದುಳಿದವರು, ದೀನದಲಿತರು, ಅಲ್ಪಸಂಖ್ಯಾತರು, ಮಧ್ಯಮವರ್ಗದವರ ಶ್ರೇಯೋಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದ್ದು, ನಮ್ಮ ಪಕ್ಷದ ಬಡವರ ಪರವಾದ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದ್ದಾರೆ.

ನಗರಾಭಿವೃದ್ಧಿ ಇಲಾಖೆಗೆ ಈ ಬಾರಿಯೂ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಸಿದ್ದರಾಮಯ್ಯನವರು ಗ್ರಾಮಾಂತರ ಪ್ರದೇಶಗಳ ಜೊತೆಗೆ ನಗರ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಿದ್ದಾರೆ. ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆ ಹಂತ-4 ರ ಅಡಿಯಲ್ಲಿ ನಗರ ಪ್ರದೇಶಗಳ ಅಭಿವೃದ್ಧಿಗೆ 500 ಕೋಟಿ ರೂಪಾಯಿ ಒದಗಿಸುವ ಪ್ರಸ್ತಾಪ ಮಾಡಲಾಗಿದ್ದು, ನಗರ ಪ್ರದೇಶಗಳ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಣ್ಣಿಗೇರಿ, ಗುಂಡ್ಲುಪೇಟೆ, ನೆಲಮಂಗಲ, ದೊಡ್ಡಬಳ್ಳಾಪುರ, ಭದ್ರಾವತಿ, ದೇವನಹಳ್ಳಿ ಮತ್ತು ಮೈಸೂರಿನ ಕೆಲವು ಭಾಗಗಳಲ್ಲಿ ರಾಜ್ಯದ ನಗರಗಳ ಸ್ವಚ್ಛತೆಯನ್ನು ಕಾಪಾಡುವ ದೃಷ್ಟಿಯಿಂದ ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೈಕ್ರೋ ಅನುದಾನದ ನೆರವಿನಿಂದ ಆಳಂದ, ಅಫ್ಜಲ್ ಪುರ, ಚಿತ್ತಾಪುರ, ಯಾದಗಿರಿ, ಹರಪ್ಪನಹಳ್ಳಿ, ಜೇವರ್ಗಿ ಮತ್ತು ಸುರಪುರ ಪಟ್ಟಣಗಳಲ್ಲಿ ಒಳಚರಂಡಿ ಕಲ್ಪಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿರುವ ನಗರಸಭೆಗಳನ್ನು ಮಹಾನಗರಪಾಲಿಕೆಗೆ ಮೇಲ್ದರ್ಜೆಗೇರಿಸುವುದಾಗಿದೆ. ಅದರಂತೆ ಮೇಲ್ದರ್ಜೆಗೇರಿಸಲಾಗಿರುವ ರಾಯಚೂರು, ಬೀದರ್ ಮತ್ತು ಹಾಸನ ಮಹಾನಗರಪಾಲಿಕೆಗಳಿಗೆ ಆರ್ಥಿಕ ಶಕ್ತಿ ತುಂಬುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿಯ ಬಜೆಟ್ ನಲ್ಲಿ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಡಿ ತಲಾ 200 ಕೋಟಿ ರೂಪಾಯಿ ಮೀಸಲಿಟ್ಟಿರುವುದು ಸಂತಸ ತಂದಿದೆ ಎಂದು ಬೈರತಿ ಸುರೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಕೀಕೃತ ಆಸ್ತಿ ತೆರಿಗೆ ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಸಂಯೋಜನೆಗೊಳಿಸಲಾಗುತ್ತಿದೆ. ಈ ಮೂಲಕ ತೆರಿಗೆ ಬೇಡಿಕೆ ಮತ್ತು ಬಾಕಿ ವಿವರಗಳನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳುವ ಯೂನಿಫೈಡ್ ಪ್ರಾಪರ್ಟಿ ಟ್ಯಾಕ್ಸ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಇದರಿಂದ ತೆರಿಗೆ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ತರಲಾಗುತ್ತಿದೆ.

ನಗರ ಸ್ಥಳೀಯ ಸಂಸ್ಥೆಗಳ ಸ್ಥಿರಾಸ್ತಿ ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ವಹಣಾ ಪ್ರಕ್ರಿಯೆಯನ್ನು ಸರಳಗೊಳಿಸಲು ಹಾಗೂ ಏಕರೂಪದ ನೀತಿಯನ್ನು ಪಾಲಿಸಲು ದಿ ಎಸ್ಟೇಟ್ ಮ್ಯಾನೇಜ್ ಮೆಂಟ್ ರೂಲ್ಸ್ 2026 ಅನ್ನು ಜಾರಿಗೆ ತರುತ್ತಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ನಗರ ಪ್ರದೇಶಗಳಲ್ಲಿ ಹಸಿರು ಪ್ರದೇಶಗಳ ಪ್ರಮಾಣ ಕಡಿಮೆ ಆಗುತ್ತಿರುವುದನ್ನು ಮನಗಂಡ ನಮ್ಮ ಸರ್ಕಾರ ಆಯ್ದ ಪ್ರದೇಶಗಳಲ್ಲಿ ಸ್ಥಳೀಯ ಸಸ್ಯಗಳನ್ನು ದಟ್ಟವಾಗಿ ಬೆಳೆಸಿ ನೈಸರ್ಗಿಕ ಹಸಿರು ಪ್ರದೇಶಗಳನ್ನಾಗಿಸುವ ನಿಟ್ಟಿನಲ್ಲಿ 100 ಸ್ಥಳಗಳಲ್ಲಿ ಮಿಯಾವಾಕಿ ಪಾರ್ಕ್’ಗಳನ್ನು ನಿರ್ಮಿಸಲು ತೀರ್ಮಾನಿಸಿದೆ. ಉನ್ನತ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಬರುವ ವಿದ್ಯಾರ್ಥಿಗಳಿಗಾಗಿ ಧಾರವಾಡದಲ್ಲಿ ನಾಲ್ಕು ಮತ್ತು ಬೆಂಗಳೂರಿನಲ್ಲಿ ಎರಡುವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ಗಳನ್ನು ಆರಂಭಿಸುತ್ತಿರುವುದು ನಮ್ಮ ಸರ್ಕಾರದ ವಿದ್ಯಾರ್ಥಿ ಪರವಾದ ನಿಲುವನ್ನು ಪ್ರಕಟಿಸಿದೆ ಎಂದು ಅವರು ತಿಳಿಸಿದ್ದಾರೆ.

ಕಲಬುರಗಿ ನಗರಕ್ಕೆ ದಿನದ 24 ಗಂಟೆಯೂ ಶಾಶ್ವತ ಗುಣಮಟ್ಟದ ನೀರನ್ನು ಒದಗಿಸಲು 1863 ಕೋಟಿ ರೂಪಾಯಿ ವೆಚ್ಚದ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಿದ್ದು, ಈ ನಗರದ ಬಹುವರ್ಷಗಳ ಕುಡಿಯುವ ನೀರಿನ ದಾಹವನ್ನು ನೀಗಿಸಲಾಗುತ್ತದೆ. ಒಟ್ಟಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆಯ ಬಜೆಟ್ ಮೂಲಕ ತಮ್ಮ ಜನಪರ ಕಾಳಜಿಯನ್ನು ಪ್ರದರ್ಶಿಸಿದ್ದಾರೆ ಎಂದು ಬೈರತಿ ಸುರೇಶ್ ಬಣ್ಣಿಸಿದ್ದಾರೆ.


Share

You cannot copy content of this page