ಬೆಂಗಳೂರು: ವಿದ್ಯುಚ್ಛಕ್ತಿ ಬಿಲ್ಲುಗಳ ಪಾವತಿಯಲ್ಲಿ ಗ್ರಾಮ ಪಂಚಾಯಿತಿಗಳನ್ನು ಸ್ವಯಂ ಸುಸ್ಥಿರಗೊಳಿಸಲು ಹಾಗೂ ಅವಶ್ಯವಿರುವ ವಾರ್ಷಿಕ ಅಂದಾಜು 4,000 MW ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸೋಲಾರ್ ಮೈಕ್ರೊ ಗ್ರಿಡ್‌ಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವ ʻಅನಂತʼ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಈ ಬಾರಿಯ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಒಟ್ಟಾರೆ
69,488 ಕೋಟಿ ರೂ. ಮೊತ್ತದ ಕಾಮಗಾರಿಗಳು ಅನುಮೋದನೆಯಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಪಾಲು 30,888 ಕೋಟಿ ರೂ.ಗಳಾಗಿದ್ದು, ರಾಜ್ಯ ಸರ್ಕಾರದ ಪಾಲು 38,600 ಕೋಟಿ ರೂ.ಗಳಾಗಿರುತ್ತದೆ. ಕೇಂದ್ರ ಸರ್ಕಾರದಿಂದ ಇದುವರೆಗೆ ಕೇವಲ 11,786 ಕೋಟಿ ರೂ.ಗಳನ್ನು ಮಾತ್ರ
ಬಿಡುಗಡೆ ಮಾಡಿದ್ದು, ಇನ್ನೂ 19,102 ಕೋಟಿ ರೂ.ಗಳನ್ನು
ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕಾಗಿರುತ್ತದೆ.
ರಾಜ್ಯ ಸರ್ಕಾರದಿಂದ ಒದಗಿಸಬೇಕಾದ ಅನುದಾನದಲ್ಲಿ ಈಗಾಗಲೇ 27,098 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, 11,502 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಬೇಕಾಗಿರುತ್ತದೆ. ಕೇಂದ್ರ ಸರ್ಕಾರ 2025-26ನೇ ಸಾಲಿನಲ್ಲಿ ಯಾವುದೇ ಅನುದಾನ ಬಿಡುಗಡೆ ಮಾಡದಿದ್ದರೂ ಸಹ ಈ ಯೋಜನೆಯ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದಿಂದ ಒಟ್ಟಾರೆ 15,500 ಕೋಟಿ ರೂ.ಗಳಷ್ಟು ಅನುದಾನವನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ. 2026-27ನೇ ಸಾಲಿನಲ್ಲಿ ಈ ಯೋಜನೆಗಾಗಿ 10,433 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಗ್ರಾಮ ಪಂಚಾಯಿತಿಗಳನ್ನು ಸಬಲಗೊಳಿಸಿ ಗ್ರಾಮೀಣ ಜೀವನೋಪಾಯವನ್ನು ಬಲಪಡಿಸಿದ್ದ ಹಿಂದಿನ ವ್ಯವಸ್ಥೆಯನ್ನು ಪುನಃಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ನಮ್ಮ ಸರ್ಕಾರವು ತೀವ್ರವಾಗಿ ಆಗ್ರಹಿಸುತ್ತದೆ. ಗ್ರಾಮೀಣ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಹಾಗೂ ವಿಕೇಂದ್ರೀಕೃತ ಆಡಳಿತದ ತತ್ವಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು, ಅಗತ್ಯವಿದ್ದಲ್ಲಿ ಕಾನೂನು ಹೋರಾಟವನ್ನೂ ಸಹ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದೂ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಕುಡಿಯುವ ನೀರಿನ ಮೇಲ್ಮಟ್ಟ ಜಲಾಗಾರಗಳ (OHT) ದೀರ್ಘಕಾಲಿಕ ಕಾರ್ಯಕ್ಷಮತೆಯನ್ನು ಖಚಿತಪಡಿಸುವ ಉದ್ದೇಶದಿಂದ 1,000 ಮೇಲ್ಮಟ್ಟ ಜಲಾಗಾರಗಳ ಸ್ವಚ್ಛತೆ, ಸುರಕ್ಷತೆ, ದುರಸ್ಥಿ ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಗಳ ಸುಧಾರಣೆ ಮತ್ತು ಪುನಃಶ್ಚೇತನ ಕಾರ್ಯವನ್ನು ಒಟ್ಟಾರೆ 30 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು ಹಾಗೂ ಗ್ರಾಮ ಪಂಚಾಯಿತಿಗಳ ಆಸ್ತಿಗಳ ನಗದೀಕರಣ ಮತ್ತು ಮೌಲ್ಯವರ್ಧನೆಗೆ ಸ್ಥಳೀಯ ಆರ್ಥಿಕ ಬಲವರ್ಧನೆ ಕಾರ್ಯಕ್ರಮವನ್ನು (Local Economy Accelerator Program) ಆರಂಭಿಸಲಾಗುವುದು.
ಈ ಯೋಜನೆಯಡಿ ಪ್ರಾಯೋಗಿಕವಾಗಿ ಪ್ರತಿ ವಿಭಾಗದ ಐದು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದಲ್ಲಿ ಅವಶ್ಯವಿರುವ ಸೌಲಭ್ಯಗಳನ್ನು ಒಳಗೊಂಡ ಆದಾಯೋತ್ಪನ್ನ ಘಟಕಗಳನ್ನು ಪ್ರಸಕ್ತ ವರ್ಷ 25 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಿ ನಿರ್ವಹಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
