ಸಮಗ್ರ ಸುದ್ದಿ

ಏರ್ ಬಸ್ ಇಂಡಿಯಾ ಟೆಕ್ನಾಲಜಿ ಸೆಂಟರ್‌ ಉದ್ಘಾಟನೆ | ರಾಜ್ಯದಲ್ಲಿ ವೈಮಾಂತರಿಕ್ಷ ಮತ್ತು ರಕ್ಷಣೆ ಹಾಗೂ ಮಾಹಿತಿ ತಂತ್ರಜ್ಞಾನ ವಲಯಗಳ ಬೆಳವಣಿಗೆಗೆ ಪೂರಕ – ಸಚಿವ ಎಂ.ಬಿ.ಪಾಟೀಲ

Share

ಬೆಂಗಳೂರು: ಬೆಂಗಳೂರು ನಗರದ ಕಾಡುಗೋಡಿ ಸಮೀಪದ ಟೈಟಾನಿಯಂ ಟೆಕ್ ಪಾರ್ಕ್ ಪ್ರದೇಶದಲ್ಲಿ ಏರ್ ಬಸ್ ಕಂಪನಿ ನಿರ್ಮಿಸಿರುವ ಅತ್ಯಾಧುನಿಕ `ಏರ್ ಬಸ್ ಇಂಡಿಯಾ ಟೆಕ್ನಾಲಜಿ ಸೆಂಟರ್’ ಅನ್ನು ಉಪ ಮುಖ್ಯಮಂತ್ರಿ ಡಿ‌ ಕೆ ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ವರ್ಚುವಲ್ ಮೂಲಕ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ ಅವರು, ಏರ್-ಬಸ್ ಅಭಿವೃದ್ಧಿಪಡಿಸಿರುವ ಈ ಕೇಂದ್ರದಲ್ಲಿ 5 ಸಾವಿರಕ್ಕಿಂತಲೂ ಹೆಚ್ಚು ಜನರು ಕೆಲಸ ಮಾಡಲು ಅವಕಾಶವಿದೆ. ಇದು ಕಂಪನಿಯ ಎರಡನೇ ಅತಿದೊಡ್ಡ ಡಿಜಿಟಲ್ ಕೇಂದ್ರವಾಗಿದ್ದು, ಜಾಗತಿಕ ಮಟ್ಟದಲ್ಲಿ ಅದರ ಮೂರನೆಯ ನಾವೀನ್ಯತಾ ಕೇಂದ್ರವಾಗಿದೆ. ಇದು ರಾಜ್ಯದಲ್ಲಿ ವೈಮಾಂತರಿಕ್ಷ ಮತ್ತು ರಕ್ಷಣೆ ಹಾಗೂ ಮಾಹಿತಿ ತಂತ್ರಜ್ಞಾನ ವಲಯಗಳ ಬೆಳವಣಿಗೆಗೆ ಮೌಲಿಕ ಕೊಡುಗೆ ನೀಡಲಿದೆ’ ಎಂದಿದ್ದಾರೆ.

ರಾಜ್ಯವು ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯಗಳಿಗೆ ಶೇಕಡ 60ರಷ್ಟು ಕೊಡುಗೆ ನೀಡುತ್ತಿದ್ದು, ಅಗ್ರಸ್ಥಾನದಲ್ಲಿದೆ. ನಮ್ಮಲ್ಲಿ 400ಕ್ಕೂ ಹೆಚ್ಚು ವೈಮಾಂತರಿಕ್ಷ ಮತ್ತು ರಕ್ಷಣಾ ಕಂಪನಿಗಳಿವೆ. ಏರ್ ಬಸ್ ಕಂಪನಿಯು ಭಾರತದ ಜೊತೆ ವರ್ಷಕ್ಕೆ 1.5 ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತಿದೆ. ಹಾಗೆಯೇ, ಜಾಗತಿಕ ವಲಯದಲ್ಲಿ ಭಾರತದ 100 ಕಂಪನಿಗಳು ಮುಂಚೂಣಿಯಲ್ಲಿವೆ. ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ಆರಂಭವಾಗಿರುವ ಹೆಲಿಕಾಪ್ಟರ್ ಜೋಡಣೆ ಘಟಕವು 2027ರ ಮಧ್ಯಭಾಗದ ಹೊತ್ತಿಗೆ ತನ್ನ ಪ್ರಪ್ರಥಮ ಹೆಲಿಕಾಪ್ಟರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ನಗರಕ್ಕೆ 2033ರ ಹೊತ್ತಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬರಲಿದೆ. ಇದು ಈಗಿರುವ ಕೆಂಪೇಗೌಡ ವಿಮಾನ ನಿಲ್ದಾಣದಷ್ಟೇ ದೊಡ್ಡದಾಗಿರಲಿದೆ. ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಕೂಡ ಭರವಸೆ ನೀಡಿದ್ದಾರೆ. ಬೆಂಗಳೂರು, ಕರ್ನಾಟಕದ ಬೆಳವಣಿಗೆಯಲ್ಲಿ ಭಾರತದ ಪ್ರಗತಿ ಅಡಗಿದೆ ಎಂದು ಅವರು ಹೇಳಿರುವುದು ಸ್ವಾಗತಾರ್ಹವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ಬಜೆಟ್ಟಿನಲ್ಲಿ ನೂತನ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವುದಾಗಿ ಹೇಳಿದ್ದಾರೆ ಎಂದು ಅವರು ನುಡಿದಿದ್ದಾರೆ.

ಕಾರ್ಯಕ್ರಮದಲ್ಲಿ ಏರ್ ಬಸ್ ಇಂಡಿಯಾದ ಮುಖ್ಯಸ್ಥ ಜರ್ಗನ್ ವೆಸ್ಟರ್ಮೀಯರ್ ಉಪಸ್ಥಿತರಿದ್ದರು.


Share

You cannot copy content of this page