ಸಮಗ್ರ ಸುದ್ದಿ

ಬೆಂಗಳೂರಿನಲ್ಲಿ ಏರ್ಬಸ್ ಟೆಕ್ನಾಲಜಿ ಸೆಂಟರ್ ಉದ್ಘಾಟಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ | ಏರೋಸ್ಪೇಸ್ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯಕ್ಕೆ ಮತ್ತೊಂದು ಗರಿ

Share

ಬೆಂಗಳೂರು: ಬೆಂಗಳೂರಿನಲ್ಲಿ ವೈಟ್ ಫೀಲ್ಡ್ ಕಾಡುಗೋಡಿಯಲ್ಲಿ ಏರ್ಬಸ್ ಟೆಕ್ನಾಲಜಿ ಸೆಂಟರ್ ಅನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಉದ್ಘಾಟಿಸಿದರು.

ಈ ಕೇಂದ್ರದ ಉದ್ಘಾಟನೆಯು ಇಂಜಿನಿಯರಿಂಗ್, ಡಿಜಿಟಲ್ ಪರಿವರ್ತನೆ, ಗ್ರಾಹಕ ಸೇವೆ ಹಾಗೂ ಖರೀದಿಗೆ ಉತ್ತೇಜನ ನೀಡುವ ಹಬ್ ಆಗಿದೆ. ಇದರೊಂದಿಗೆ ಏರ್ಬಸ್ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಮತ್ತಷ್ಟು ಗಟ್ಟಿಯಾಗಿ ನೆಲೆಯೂರಿದಂತಾಗಿದೆ.

ಈ ಕೇಂದ್ರದ ಉದ್ಘಾಟನೆ ಬಳಿಕ ಮಾತನಾಡಿದ ಶಿವಕುಮಾರ್ ಅವರು, “ಕಳೆದ ಫೆ. 17ರಂದು ವೇಮಗಲ್ ನಲ್ಲಿ ಏರ್ಬಸ್ ಎಚ್125 ಹೆಲಿಕಾಪ್ಟರ್ ತಯಾರಿಕ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, ಇಂದು ಈ ಕೇಂದ್ರ ಉದ್ಘಾಟನೆ ಮೂಲಕ ಏರೋಸ್ಪೇಸ್ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ” ಎಂದು ಶ್ಲಾಘಿಸಿದರು.

“ಇಂದಿನ ಕಾರ್ಯಕ್ರಮ ಕೇವಲ ಉದ್ಘಾಟನೆ ಮಾತ್ರವಲ್ಲ, ಬೆಂಗಳೂರು ಹಾಗೂ ಏರ್ಬಸ್ ನಡುವಣ 17 ವರ್ಷಗಳ ನಡುವಣ ಸಂಬಂಧದ ಸಂಭ್ರಮವಾಗಿದೆ. ಏರೋಸ್ಪೆಸ್ ಕ್ಷೇತ್ರದಲ್ಲಿ ಪ್ರತಿಭೆಗಳ ಕೇಂದ್ರ ಎಂದರೆ ಅದು ಬೆಂಗಳೂರು. ಹೀಗಾಗಿ ಬೆಂಗಳೂರು ಆಯ್ಕೆ ಮಾಡಿಕೊಂಡಿರುವ ಏರ್ಬಸ್ ನಿರ್ಧಾರ ಸರಿಯಾಗಿದೆ” ಎಂದರು.

ವಿಶ್ವದಲ್ಲೇ ಮಹತ್ವದ ಏರೋಸ್ಪೆಸ್ ಪಾರ್ಕ್ ದೇವನಹಳ್ಳಿಯಲ್ಲಿದೆ

“ದೇಶದಲ್ಲಿ ಏರೋಸ್ಪೆಸ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೊದಲು ನೀತಿ ರೂಪಿಸಿದ್ದು, 2013ರಲ್ಲಿ ಕರ್ನಾಟಕ ರಾಜ್ಯ. 2026-27ನೇ ಸಾಲಿನ ಏರೋಸ್ಪೆಸ್ ಹಾಗೂ ರಕ್ಷಣಾ ನೀತಿ ಇದನ್ನು ಮುಂದಿನ ಹಂತಕ್ಕೆ ಕೊಂಡೋಯ್ಯಲಿದೆ” ಎಂದರು.

“ದೇವನಹಳ್ಳಿಯಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಏರೋಸ್ಪೆಸ್ ಪಾರ್ಕ್ ನಿರ್ಮಿಸಲಾಗಿದ್ದು, ಇದು ವಿಶ್ವದಲ್ಲೇ ಅತಿ ಮಹತ್ವದ ಏರೋಸ್ಪೆಸ್ ಕೈಗಾರಿಕಾ ಪಾರ್ಕ್ ಆಗಿದೆ. ನಮ್ಮ ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು ಹಾಗೂ ಚಾಮರಾಜನಗರದಲ್ಲಿ ಏರೋಸ್ಪೆಸ್ ವಿಶೇಷ ಆರ್ಥಿಕ ವಲಯ ಸ್ಥಾಪಿಸಲಾಗುತ್ತಿದೆ” ಎಂದು ತಿಳಿಸಿದರು.

ಬೆಂಗಳೂರು ಉತ್ತಮ ಪ್ರತಿಭೆ, ಸಂಸ್ಕೃತಿ, ಹವಾಮಾನವಿರುವ ನಗರ

“ಬೆಂಗಳೂರು ಪ್ರತಿಭಾವಂತ ಮಾನವ ಸಂಪನ್ಮೂಲ ಮಾತ್ರವಲ್ಲ, ಉತ್ತಮ ಸಂಸ್ಕೃತಿ, ಹವಾಮಾನ ಇರುವ ನಗರ. ಇದು ಅನ್ವೇಷಣೆ, ತಂತ್ರಜ್ಞಾನ, ಸಂಶೋಧನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ಈ ಭೂಮಿಯ ಶಕ್ತಿ” ಎಂದು ತಿಳಿಸಿದರು.

“17 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಏರ್ ಬಸ್ ಸಂಸ್ಥೆ ಕೇಂದ್ರ ಆರಂಭವಾಗಿತ್ತು. ಇಂದು ಏರ್ ಬಸ್ ಟೆಕ್ನಾಲಜಿ ಸೆಂಟರ್ ಅನ್ನು ಉದ್ಘಾಟನೆ ಮಾಡಲಾಗಿದ್ದು, ಇಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಕಲ್ಪಿಸಿರುವುದಕ್ಕೆ ಧನ್ಯವಾದಗಳು. ಈ ಕೇಂದ್ರ ಹೆಚ್ಚು ಅವಕಾಶಗಳನ್ನು ಸೆಳೆಯುವ ವಿಶ್ವಾಸವಿದೆ” ಎಂದರು.

“ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರ. ವೈಮಾನಿಕ ಕ್ಷೇತ್ರದಲ್ಲಿ ಏರ್ ಬಸ್ ಮುಂಚೂಣಿಯಲ್ಲಿದೆ. ಭಾರತವನ್ನು ಬೆಂಗಳೂರು ಮೂಲಕ ನೋಡಲಾಗುತ್ತಿದೆ. ಎಂಬ ಮಾಜಿ ಪ್ರಧಾನಿ ವಾಜಪೇಯಿ ಅವರ ಮಾತನ್ನು ಕೇಂದ್ರ ಸಚಿವರು ತಿಳಿಸಿದರು. ಬೆಂಗಳೂರು ಹೂಡಿಕೇದಾರ ನೆಚ್ಚಿನ ತಾಣವಾಗಿದೆ. ಇಲ್ಲಿ ನಾವು ಮಾತ್ರ ಪ್ರಗತಿ ಸಾಧಿಸುವುದಲ್ಲ, ಬಂಡವಾಳ ಹೂಡಿಕೆದಾರರು ಬೆಳೆಯಬೇಕು” ಎಂದು ಹೇಳಿದರು.

“ಕ್ಯಾಲಿಫೋರ್ನಿಯದಲ್ಲಿ 13 ಲಕ್ಷ ಇಂಜಿನಿಯರ್ ವೃತ್ತಿಪರರು ಇದ್ದು, ಬೆಂಗಳೂರಿನಲ್ಲಿ 25 ಲಕ್ಷ ಇಂಜಿನಿಯರ್ ವೃತ್ತಿಪರರು ಇದ್ದಾರೆ. ಸಿಲಿಕಾನ್ ವ್ಯಾಲಿಯಲ್ಲಿ ಕೆಲಸ ಮಾಡುತ್ತಿರುವ ಮೂರನೇ ಒಂದು ಭಾಗ ಭಾರತದವರು, ಅದರಲ್ಲೂ ಹೆಚ್ಚಿನವರು ದಕ್ಷಿಣ ಭಾರತದವರು” ಎಂದರು.

” ನೀವು ಬೆಂಗಳೂರಿನಲ್ಲಿ ನಿಮ್ಮ ಕೇಂದ್ರ ವಿಸ್ತರಣೆ ಮಾಡುತ್ತಿರುವುದು ಬಹಳ ಸಂತೋಷದ ವಿಚಾರ. ನಮ್ಮ ಸರ್ಕಾರ ನಿಮಗೆ ಅಗತ್ಯ ಸಹಕಾರ ನೀಡಲಿದೆ. ನೀವು ಹೊರಗಿನವರು ಎಂಬ ಭಾವನೆ ಬರಲು ಬಿಡುವುದಿಲ್ಲ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ನೀವು ನಾವು ಜತೆಯಾಗಿ ಕೆಲಸ ಮಾಡೋಣ. ಈ ದೇಶ ಹೆಮ್ಮೆಪಡುವಂತೆ ಮಾಡೋಣ” ಎಂದು ಹೇಳಿದರು.

ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಕೇಳಿದಾಗ, “ನಮ್ಮ ಸಚಿವರಾದ ಎಂ.ಬಿ. ಪಾಟೀಲ್ ಅವರು ಇದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳು ಇಂದು ಬಜೆಟ್ ನಲ್ಲೂ ಈ ವಿಚಾರ ಪ್ರಸ್ತಾಪಿಸಿದ್ದಾರೆ” ಎಂದು ತಿಳಿಸಿದರು.


Share

You cannot copy content of this page