ಹಾವೇರಿ:ರಾಜ್ಯದಲ್ಲಿರುವ ಡೀಮ್ಡ್ ಫಾರೆಸ್ಟನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿದರೆ ರಾಜ್ಯದಲ್ಲಿ ಸುಮಾರು 6 ಲಕ್ಷ ರೈತರಿಗೆ ಅನುಕೂಲ ಆಗಲಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರದ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಿ, ಮಾತನಾಡಿದರು.
ಆಯುಷ್ಮಾನ್ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರು 2017 ರಲ್ಲಿ ಪ್ರಾರಂಭ ಮಾಡಿದ್ದರು. ಅದರ ಅನ್ವಯ ತಾವು ಆರೋಗ್ಯ ವಿಮೆಯನ್ನು ಪಡೆಯುತ್ತಿದ್ದೀರಿ. ಇದರಿಂದ ಆರೋಗ್ಯ ಸೇವೆ ದೊರೆಯುವಂತಾಗಿದೆ. ನಮ್ಮ ಗ್ರಾಮೀಣ ಜನರಿಗೆ ಹೆಚ್ಚಿನ ಅನುಕೂಲ ನೀಡಲು ಪ್ರತಿ ಕ್ಷೇತ್ರದಲ್ಲಿ ಎಂಟರಿಂದ ಹತ್ತು ಆಯುಷ್ಮಾನ್ ಕೇಂದ್ರಗಳು ಆರಂಭವಾಗಲಿವೆ. ಇದರ ಉಪಯೋಗ ಎಲ್ಲರಿಗೂ ತಲುಪಲಿ ಎಂದರು.
ಈ ಭಾಗದಲ್ಲಿ ರಸ್ತೆಗಳ ಸಮಸ್ಯೆ ಇದೆ. ನಾನು ಸಿಎಂ ಇದ್ದಾಗ ಪ್ರತಿ ಹೋಬಳಿ ಮತ್ತು ಹಳ್ಳಿಗಳಿಗೆ ದುಡ್ಡು ಕೊಟ್ಟಿದ್ದೆ. ಆದರೂ ರಸ್ತೆ ಹೀಗೆ ಇರುವುದು ಬೇಸರ ತರಿಸಿದೆ. ನನಗೆ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಕೇಂದ್ರ ಸರ್ಕಾರದ ಸಿಆರ್.ಎಫ್ ಫಂಡ್ ನಲ್ಲಿ ಸವಣೂರು ಹಾಗೂ ಶಿರಹಟ್ಟಿ ತಾಲೂಕಿನ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡುತ್ತೇನೆ ಎಂದರು.
ಇನ್ನು ದೇಶದಲ್ಲಿ ಅರಣ್ಯ ಕಾಯ್ದೆ 1980 ರಿಂದಲೇ ಜಾರಿಯಲ್ಲಿದೆ. ಹೀಗಾಗಿ ಅರಣ್ಯ ಪ್ರದೇಶದ ಹತ್ತಿರದಲ್ಲಿರುವ ಹಳ್ಳಿಗಳ ಅಭಿವೃದ್ಧಿಗೆ ಸಮಸ್ಯೆಯಾಗಿದೆ. ಅರಣ್ಯ ಇಲಾಖೆಯಲ್ಲಿ ಬಹಳ ಕಠಿಣ ನಿಯಮ ಇದೆ. ನಾನು ಸಿಎಂ ಆಗಿದ್ದಾಗ ಫಾರಸ್ಟ್ ಸೆಟಲ್‌ಮೆಂಟ್ ಆಕ್ಟನ್ನು ಸರಳಿಕರಣ ಮಾಡಲು ನಾವು ಪಯತ್ನ ಮಾಡಿದ್ದೇವು. ಸುಮಾರು 6 ಲಕ್ಷ ಡೀಮ್ಸ್ ಫಾರೆಸ್ಟ್ ಅನ್ನು ಕಂದಾಯ ಇಲಾಖೆಗೆ ವರ್ಗಾಯಿಸಿದ್ದೇವು. ಅದನ್ನು ಮುಂದೆ ಬಂದ ಸರ್ಕಾರಗಳು ಪಾಲನೆ ಮಾಡಲಿಲ್ಲ. ಡೀಮ್ ಫಾರೆಸ್‌ನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿದರೆ ರಾಜ್ಯದಲ್ಲಿ ಸುಮಾರು 6 ಲಕ್ಷ ರೈತರಿಗೆ ಅನುಕೂಲ ಆಗಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡುತ್ತೇನೆ ಎಂದರು.
ಸವಣೂರಿನಲ್ಲಿ ಹಾದು ಹೋಗುವ ಲಕ್ಷ್ಮೀಶರ ರಸೆಯನ್ನು ಪಧಾನ ಮಂತ್ರಿ ಗತಿ ಶಕ್ತಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸಲು ಪಯತ್ನ ಮಾಡುತ್ತೇವೆ. ನಾವೆಲ್ಲರೂ ಸೇರಿ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ. ನಾವು ಮುಕ್ತ ಮನಸಿನಿಂದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
