ಹಾವೇರಿ: ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಸಂಸದರ ಕ್ರೀಡಾ ಮಹೋತ್ಸವ ಏರ್ಪಡಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರನ್ನು ರಾಷ್ಟ್ರೀಯ ಮಟ್ಟಕ್ಕೆ ಹೋಗಲು ಅವಕಾಶ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ರಟ್ಟಿಹಳ್ಳಿಯಲ್ಲಿ ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿರವರು ಪ್ರಸ್ತುತ ಪಡಿಸುವ ಹಿರೇಕೆರೂರ ವಿಧಾನ ಸಭಾ ಮತಕ್ಷೇತ್ರದ ಸಂಸದ ಕ್ರೀಡಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಪ್ರಧಾನಿಯವರ ಕರೆ ಮೇರೆಗೆ ಪ್ರತಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಂಸದರ ಕೀಡೆ ನಡೆಯುತ್ತದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರನ್ನು ದೆಹಲಿಯಲ್ಲಿ ಆಡಿಸಲು ಅವಕಾಶ ಕಲ್ಪಿಸಲಾಗುವುದು. ಪ್ರಧಾನಿ ಮೋದಿಯವರು ಮೊದಲು ಫಿಟ್ ಇಂಡಿಯಾ ಅಂದರು, ನಂತರ ಖೇಲೋ ಇಂಡಿಯಾ ಅಂದರು, ನಂತರ ಟೊಕಿಯೋ ಒಲಿಂಪಿಕ್ ಬಂದಾಗ ಜೀತೋ ಇಂಡಿಯಾ ಅಂದರು ಅದರ ಪರಿಣಾಮ ಭಾರತಕ್ಕೆ 34 ಮೆಡೆಲ್‌ಗಳು ಬಂದವು. ಅಷ್ಟೆ ಅಲ್ಲ ದಿವ್ಯಾಂಗರ ಒಲಿಂಪಿಕ್ಸ್‌ನಲ್ಲಿ ಭಾರತ ಅತಿ ಹೆಚ್ಚು ಪದಕಗಳನ್ನು ಪಡೆಯಿತು ಎಂದು ಹೇಳಿದರು.
ನಾವು ಕ್ರಿಕೆಟ್ ಆಟಗಾರರನ್ನು ಹೆಚ್ಚು ಬೆಂಬಲಿಸುತ್ತೇವೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಸಂಸದರ ಕ್ರೀಡಾ ಮಹೋತ್ಸವ ಏರ್ಪಡಿಸಲಾಗಿದ್ದು, ಇಲ್ಲಿ ಆಡಿದವರು ರಾಷ್ಟ್ರೀಯ ಮಟ್ಟಕ್ಕೆ ಹೋಗಲು ಅವಕಾಶ ಇದೆ. ಯಾರಿಗೆ ಯೋಗ್ಯತೆ ಇದೆ ಅವರನ್ನು ಪ್ರೋತ್ಸಾಹಿಸಿ ರಾಷ್ಟ್ರ ಮಟ್ಟಕ್ಕೆ ಕಳುಹಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಮನುಷ್ಯನಿಗೆ ಗುಣ ಬಹಳ ಮುಖ್ಯ. ಕ್ರೀಡೆ ಆಡಿದರೆ ಶಿಸ್ತು ಬರುತ್ತದೆ. ಶಿಸ್ತು ಇದ್ದರೆ ಒಳ್ಳೆಯ ಆರೋಗ್ಯ ಇರುತ್ತದೆ. ಒಳ್ಳೆಯ ಆರೋಗ್ಯ ಇದ್ದರೆ ಒಳ್ಳೆಯ ಚಿಂತನೆ ಬರುತ್ತದೆ. ಈ ದೇಶಕ್ಕೆ ಒಳ್ಳೆಯ ಚರಿತ್ರೆ ಇದೆ. ಚಾರಿತ್ರ್ಯ ಬೇಕಿದೆ. ನಮ್ಮ ಸಂಸ್ಕಾರ, ಸಂಸ್ಕೃತಿ, ಶಿಕ್ಷಣ ಜ್ಞಾನದ ಜೊತೆಗೆ ಕ್ರೀಡೆಯ ಮೂಲಕ ಚಾರಿತ್ರ್ಯ ಗಳಿಸಲು ಸಾಧ್ಯವಾಗುತ್ತದೆ. ಪಧಾನಿ ನರೇಂದ್ರ ಮೋದಿಯವರು ಕಂಡ ಕನಸು ಹಿರೆಕೆರೂರು, ರಟ್ಟಿಹಳ್ಳಿ ತಾಲೂಕಿನಲ್ಲಿ ನನಸಾಗುತ್ತಿದೆ. ಇದನ್ನು ಆಯೋಜನೆ ಮಾಡಿ ಯಶಸ್ವಿಗೊಳಿಸಿರುವ ಮಾಜಿ ಸಚಿವರಾದ ಬಿ.ಸಿ. ಪಾಟೀಲರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕ್ರೀಡೆಯಲ್ಲಿ ಕೆಲವರು ಸೋಲಬಾರದು ಎಂದು ಆಡುತ್ತಾರೆ. ಕೆಲವರು ಗೆಲ್ಲಬೇಕೆಂದು ಆಡುತ್ತಾರೆ. ಬದುಕಿನಲ್ಲಿ ಆಕ್ರಮಣಕಾರಿ ಆಟ ಆಡಿದಾಗ ಮಾತ್ರ ಗೆಲ್ಲಲು ಸಾಧ್ಯ. ಗೆಲ್ಲಬೇಕೆಂದು ಆಡಿದರೆ ಮಾತ್ರ ಯಶಸ್ಸು ಸಿಗುತ್ತದೆ. ಸಕಾರಾತ್ಮಕ ಚಿಂತನೆ ಇರಬೇಕು. ಸೋಲಲು ಭಯ ಪಡಬಾರದು. ಯಾರು ಸೋಲಿಗೆ ಭಯ ಪಡುತ್ತಾರೆ. ಅವರು ಜೀವನದಲ್ಲಿ ಯಶಸ್ವಿಯಾಗುವುದಿಲ್ಲ. ಯಾರು ಸೋಲಿಗೆ ಭಯ ಪಡುಪುದಿಲ್ಲ. ಅವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ಬಿ.ಸಿ ಪಾಟೀಲ್, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ ಪ್ರಮುಖರು ಉಪಸ್ಥಿತರಿದ್ದರು.
