ಬೆಂಗಳೂರು:ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಶೀಘ್ರದಲ್ಲೇ ಉಪನ್ಯಾಸಕರಿಗೆ ಪದೋನ್ನತಿ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ಪರಿಷತ್ ಸದಸ್ಯರಾದ ಡಿ.ಟಿ. ಶ್ರೀನಿವಾಸ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಂದ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡಲು ಈಗಾಗಲೇ ಕರಡು ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಗೆ ಸಂಬಂಧಿಸಿದಂತೆ ಸ್ವೀಕೃತವಾಗಿರುವ 461 ಆಕ್ಷೇಪಣೆಗಳನ್ನು ಪ್ರಸ್ತುತ ಪರಿಶೀಲಿಸಲಾಗುತ್ತಿದೆ. ಈ ಪ್ರಕ್ರಿಯೆ ಮುಗಿದ ತಕ್ಷಣ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.
ಬಳಿಕ ಚಾಲ್ತಿಯಲ್ಲಿರುವ ನಿಯಮಗಳನ್ವಯ ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಮೂಲಕ ಅರ್ಹ ಉಪನ್ಯಾಸಕರಿಗೆ ಪ್ರಾಂಶುಪಾಲರಾಗಿ ಬಡ್ತಿ ನೀಡಲು ಕ್ರಮ ವಹಿಸಲಾಗುವುದು.ರಾಜ್ಯದಲ್ಲಿ ಒಟ್ಟು 1225 ಪ್ರಾಂಶುಪಾಲರ ವೃಂದದ ಹುದ್ದೆಗಳು ಮಂಜೂರಾಗಿವೆ.ಇವುಗಳಲ್ಲಿ 306 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಮೀಸಲಿಡಲಾಗಿದೆ.
ಈ ಪೈಕಿ 247 ಹುದ್ದೆಗಳನ್ನು ಸೇವಾನಿರತ ಉಪನ್ಯಾಸಕರಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಸ್ತುತ ಖಾಲಿ ಇರುವ 561 ಪ್ರಾಂಶುಪಾಲರ ಹುದ್ದೆಗಳಿಗೆ, ಕಾಲೇಜಿನ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ನಿಯಮ-68 ರಡಿ ಆಯಾ ಕಾಲೇಜಿನ ತಾತ್ಕಾಲಿಕವಾಗಿ ಹಿರಿಯ ಉಪನ್ಯಾಸಕರಿಗೆ ಪ್ರಭಾರ ಜವಾಬ್ದಾರಿಯನ್ನು ನೀಡಲಾಗಿದೆ.
ಇದರಿಂದಾಗಿ ಪರೀಕ್ಷೆ ಹಾಗೂ ದಾಖಲಾತಿ ಪ್ರಕ್ರಿಯೆಗಳಿಗೆ ಯಾವುದೇ ಅಡೆತಡೆ ಉಂಟಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ. ಬಡ್ತಿ ನೀಡುವ ಉದ್ದೇಶದಿಂದ ಅರ್ಹ ಉಪನ್ಯಾಸಕರ ಪೂರ್ವೋತ್ತರ ದಾಖಲೆಗಳು ಮತ್ತು ಸಿ.ಆರ್ (Confidential Reports) ಗಳನ್ನು ಈಗಾಗಲೇ ನಿರ್ದೇಶನಾಲಯದಲ್ಲಿ ಸ್ವೀಕರಿಸಲಾಗಿದ್ದು, ಅವುಗಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ.
ಸರ್ಕಾರವು ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಕಾಲೇಜುಗಳ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಬದ್ಧವಾಗಿದ್ದು, ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟವಾದ ತಕ್ಷಣವೇ ನೇಮಕಾತಿ ಮತ್ತು ಪದೋನ್ನತಿ ಪ್ರಕ್ರಿಯೆಗಳು ವೇಗವನ್ನು ಪಡೆದುಕೊಳ್ಳಲಿವೆ ಎಂದು ಸಚಿವರು ಭರವಸೆ ನೀಡಿದರು
