ಬೆಂಗಳೂರು:ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆಗಳ ಮೂಲಸೌಕರ್ಯ ಬಲವರ್ಧನೆ, ಸಿಬ್ಬಂದಿ ನೇಮಕಾತಿ ಮತ್ತು ಹೊಸ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಸರ್ಕಾರವು ಹೆಚ್ಚಿನ ಒತ್ತು ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್ ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಶಿವಕುಮಾರ್ ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಂಎಂಸಿಆರ್ ಅಡಿಯಲ್ಲಿ ಒಟ್ಟು 37 ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಎಂ.ಎಂ.ಸಿ.ಆರ್.ಐ ಕಾಲೇಜು 08 ವಿಭಾಗಗಳು, ಕೆ.ಆರ್. ಆಸ್ಪತ್ರೆ 10 ವಿಭಾಗಗಳು, ಚೆಲುವಾಂಬ ಆಸ್ಪತ್ರೆ 03 ವಿಭಾಗಗಳು ಪಿ.ಕೆ.ಟಿ.ಬಿ ಮತ್ತು ಸಿ.ಡಿ. ಆಸ್ಪತ್ರೆ 02 ವಿಭಾಗಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 12 ವಿಭಾಗಗಳು, ಟ್ರಾಮಾ ಕೇರ್ ಸೆಂಟರ್ 02 ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ.
ಸಂಸ್ಥೆಯಲ್ಲಿ ಒಟ್ಟು 445 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 328 ಹುದ್ದೆಗಳು ಭರ್ತಿಯಾಗಿವೆ. ಖಾಯಂ ವೈದ್ಯರು – 229, ಗುತ್ತಿಗೆ ಆಧಾರಿತ ವೈದ್ಯರು – 84 ಮತ್ತು ಒಂದು ವರ್ಷದ ಕಡ್ಡಾಯ ಸೇವೆ – 15, ಖಾಲಿ ಹುದ್ದೆಗಳು 117 ಇವೆ. ಸಂಸ್ಥೆಯ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 2,150 ಹಾಸಿಗೆಗಳು ಲಭ್ಯವಿದ್ದು, ದೈನಂದಿನ ಒಳರೋಗಿ (ಐಪಿಡಿ) ಮತ್ತು ಹೊರರೋಗಿ (ಒಪಿಡಿ) ಸೇವೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ.
ವೈದ್ಯರು ಮತ್ತು ಹಾಸಿಗೆಗಳ ಸಂಖ್ಯೆಯು ಸದ್ಯದ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಸಮರ್ಪಕವಾಗಿದೆ.ಮೈಸೂರು ವೈದ್ಯಕೀಯ ಕಾಲೇಜಿನ ಶತಮಾನೋತ್ಸವದ ನೆನಪಿಗಾಗಿ ಸರ್ಕಾರವು ವಿಶೇಷ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಕೆ.ಆರ್. ಆಸ್ಪತ್ರೆ ಆವರಣದಲ್ಲಿ “ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್” ಹೆಸರಿನಲ್ಲಿ ಸುಸಜ್ಜಿತ ಹೊಸ ಹೊರರೋಗಿ ಕಟ್ಟಡ ನಿರ್ಮಾಣಕ್ಕೆ 75 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಈ ಕಾಮಗಾರಿಗೆ 12.07.2024ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಕಟ್ಟಡದ ಸ್ಥಳದ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಮಣ್ಣು ಅಗೆಯುವ ಕಾರ್ಯ ಆರಂಭವಾಗಿದೆ. ಈಗಾಗಲೇ 10 ಕೋಟಿ ರೂ. ಬಿಡುಗಡೆಯಾಗಿದ್ದು, ಗುತ್ತಿಗೆದಾರರಿಗೆ 2.98 ಕೋಟಿ ರೂ. ಪಾವತಿಸಲಾಗಿದೆ. ಸಂಸ್ಥೆಯ ಆಸ್ಪತ್ರೆಗಳ ಕಟ್ಟಡಗಳಲ್ಲಿನ 14 ನವೀಕರಣ ಕಾಮಗಾರಿಗಳನ್ನು 89 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಅವುಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ತಿಳಿಸಿದರು.
