ಸಮಗ್ರ ಸುದ್ದಿ

ರಾಜ್ಯದಲ್ಲಿ  ಭ್ರೂಣ ಹತ್ಯೆ ಪ್ರಕರಣ ತಡೆಗಟ್ಟಲು ಸರ್ಕಾರ ಕ್ರಮ: ಸಚಿವ ದಿನೇಶ್ ಗುಂಡೂರಾವ್

Share

ಬೆಂಗಳೂರು:ರಾಜ್ಯದಲ್ಲಿ 13 ಭೂಣ ಹತ್ಯೆ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಡಾ.ಉಮಾಶ್ರೀ ಅವರ ಪರವಾಗಿ ಐವನ್ ಡಿಸೋಜ ಅವರು ಪ್ರಶ್ನಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆಯಡಿ ಬರುವ ಎಲ್ಲಾ ಶಾಸನಬದ್ಧ  ಸಮಿತಿಗಳು ರಾಜ್ಯ ಮತ್ತು ಜಿಲ್ಲೆಗಳಲ್ಲಿ ರಚನೆಗೊಂಡಿರುತ್ತದೆ. ರಾಜ್ಯದಿಂದ “ಬಾಲಿಕಾ” ಆನ್‍ಲೈನ್ ಸಾಫ್ಟ್ ವೇರ್ ಮುಖಾಂತರ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ ಗಳನ್ನು ಕಡ್ಡಾಯವಾಗಿ ನೋಂದಣಿ ಮತ್ತು ನವೀಕರಣ ನಡೆಸಲಾಗುತ್ತಿದೆ. ಅಲ್ಟ್ರಾಸೌಂಡ್ ತಯಾರಕರು ಮತ್ತು ಮಾರಾಟಗಾರರು, ರಿಪೇರಿ ಮಾಡುವವರನ್ನು ನೋಂದಾಯಿಸಿ ತ್ರೈಮಾಸಿಕ ವರದಿ ಪಡೆಯಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಇದುವರೆಗೆ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆಯನ್ನು ಉಲ್ಲಂಘಿಸಿರುವ ಸ್ಕ್ಯಾನಿಂಗ್ ಸೆಂಟರ್,ಮಾಲೀಕರು, ವೈದ್ಯರ ವಿರುದ್ಧ ಒಟ್ಟು 150 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.  ಅವುಗಳಲ್ಲಿ 80 ಪ್ರಕರಣಗಳಿಗೆ ದಂಡ ವಿಧಿಸಲಾಗಿದೆ.  70 ಪ್ರಕರಣಗಳು ನ್ಯಾಯಲಯದಲ್ಲಿ ವಿವಿಧ ಹಂತದಲ್ಲಿ ಬಾಕಿ ಇದೆ ಎಂದರು.

ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡುವಂತಹ ಸ್ಕ್ಯಾನಿಂಗ್ ಸೆಂಟರ್, ಆಸ್ಪತ್ರೆ, ವೈದ್ಯರು, ದಲ್ಲಾಳಿಗಳು, ಗರ್ಭಿಣಿಯರ ಸಂಬಂಧಿಕರ ವಿರುದ್ಧ ಮಾಹಿತಿ ನೀಡಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸಹಕರಿಸುವ ಮಾಹಿತಿದಾರರಿಗೆ ಸರ್ಕಾರದಿಂದ 1 ಲಕ್ಷ ಬಹುಮಾನ ನೀಡಲಾಗುತ್ತಿದೆ. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಯುಕ್ತ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಪಡೆಯನ್ನು ರಚಿಸಲಾಗಿದೆ.
ಎಂಬಿ.ಬಿ.ಎಸ್. ಪದವಿ ಹೊಂದಿ ಸ್ಕ್ಯಾನಿಂಗ್ ಸೆಂಟರ್ ನಡೆಸುತ್ತಿರುವ ವೈದ್ಯರಿಗೆ ಸಾಮಥ್ರ್ಯ ಆಧಾರಿತ ಪರೀಕ್ಷೆ ಮತ್ತು ಸ್ಕ್ಯಾನಿಂಗ್ ಮಾಡಲು ಅರ್ಹ ತರಬೇತಿಯನ್ನು ಇಲಾಖೆಯ ವತಿಯಿಂದ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನೀಡಲಾಗುತ್ತಿದೆ ಎಂದರು.

ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆಯ ಅನುಷ್ಠಾನಕ್ಕೆ ಸಾರ್ವಜನಿಕರಿಗೆ ಹೆಣ್ಣು ಭ್ರೂಣ ಹತ್ಯೆ ಮತ್ತು ಹತ್ಯೆಯ ಅರಿವು ಮೂಡಿಸಲಾಗುತ್ತಿದೆ. ಪ್ರಕರಣಗಳಲ್ಲಿ ಭಾಗಿಯಾಗಿರುವ ವೈದ್ಯರ ವಿರುದ್ಧ ಸರ್ಕಾರದಿಂದ ಎಫ್‍ಐಆರ್ ದಾಖಲಿಸಲಾಗುವುದು. ಈಗಾಗಲೇ ಮೂರು ವೈದ್ಯರ ಮೇಲೆ ಹಾಗೂ ಪ್ರಕರಣಕ್ಕೆ ಸಹಕರಿಸಿದ ಐದು ಜನ ನರ್ಸ್ ಮತ್ತು ಇತರರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.


Share

You cannot copy content of this page