ಬೆಂಗಳೂರು:ವಿಧಾನ ಪರಿಷತ್ತಿನ ಮಾಜಿ ಶಾಸಕರಾಗಿದ್ದ ಬಸ್ರೂರು ಅಪ್ಪಣ್ಣ ಹೆಗ್ಡೆ ಹಾಗೂ ಹಿರಿಯ ಪತ್ರಕರ್ತರು ಹಾಗೂ ವಿಧಾನ ಪರಿಷತ್ತಿನ ಮಾಜಿ ಶಾಸಕರಾಗಿದ್ದ ಪಿ.ರಾಮಯ್ಯ ಅವರು ಇತ್ತೀಚೆಗೆ ನಿಧನರಾಗಿದ್ದು ಅವರುಗಳಿಗೆ ವಿಧಾನಪರಿಷತ್ತಿನ ಸಭಾಪತಿಗಳಾದ ಬಸವರಾಜ ಎಸ್ ಹೊರಟ್ಟಿ ಅವರು ಇಂದು ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಸಂತಾಪ ಸೂಚನೆ ಮಂಡಿಸಿದರು.
ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಫೆಬ್ರವರಿ 07, 2026ರಂದು ನಿಧನ ಹೊಂದಿರುತ್ತಾರೆ. ಶ್ರೀಯುತರು 1935ರ ಡಿಸೆಂಬರ್ 24ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಸ್ರೂರು ಗ್ರಾಮದಲ್ಲಿ ಜನಿಸಿದ್ದ ಅವರು ವೃತ್ತಿಯಲ್ಲಿ ಕೃಷಿಕರಾಗಿದ್ದರು. 1960 ರಿಂದ 1968ರವರೆಗೆ ಗ್ರಾಮ ಪಂಚಾಯತ್ ಸದಸ್ಯರಾಗಿ, 1968 ರಿಂದ 1983ರವರೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ, ತಾಲ್ಲೂಕು ಸಹಕಾರ ಮಾರುಕಟ್ಟೆ ಸಂಘದ ಉಪಾಧ್ಯಕ್ಷರಾಗಿ, ತಾಲ್ಲೂಕು ಭೂ ಅಭಿವೃದ್ಧಿ ನಿರ್ದೇಶಕರಾಗಿ, 1962 ರಿಂದ 1977ರ ವರೆಗೆ ಬಸ್ರೂರು ಸ್ಥಳೀಯ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯಸ್ಥರಾಗಿ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಳದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
1983-1985ರ ಅವಧಿಯಲ್ಲಿ ಜನತಾ ಪಕ್ಷದಿಂದ ಉಡುಪಿ ಜಿಲ್ಲೆಯ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಹಾಗೂ 1988 ರಿಂದ 1994ರ ವರೆಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಶಾಸಕರಾಗಿ ಚುನಾಯಿತರಾಗಿ ಸೇವೆ ಸಲ್ಲಿಸಿರುತ್ತಾರೆ. ಧಾರ್ಮಿಕ, ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು. ರಾಜಕೀಯ ಜೀವನದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಿದ್ದರು. ಶ್ರೀಯುತರ ನಿಧನದಿಂದಾಗಿ ರಾಜ್ಯವು ಹಿರಿಯ ಸರಳ ಸಜ್ಜನ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದರು.
ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ತಿನ ಮಾಜಿ ಶಾಸಕರಾಗಿದ್ದ ಪಿ. ರಾಮಯ್ಯ ಅವರು 10ನೇ ಫೆಬ್ರವರಿ 2026 ರಂದು ನಿಧನ ಹೊಂದಿರುತ್ತಾರೆ. 1933ರ ಸೆಪ್ಟೆಂಬರ್ 12ರಂದು ಮಂಡ್ಯ ಜಿಲ್ಲೆಯ, ನಾಗಮಂಗಲ ತಾಲ್ಲೂಕಿನ ಬಿಂದೇನಹಳ್ಳಿಯಲ್ಲಿ ಜನಿಸಿದ್ದ ಶ್ರೀಯುತರು ಬಿ.ಎಸ್ಸಿ. ಪದವೀಧರರಾಗಿದ್ದು, ವೃತ್ತಿಯಲ್ಲಿ ಪತ್ರಕರ್ತರಾಗಿದ್ದರು. ಐದು ದಶಕಗಳ ಕಾಲ ‘ಹಿಂದು’ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿ ‘ಹಿಂದೂ ರಾಮಯ್ಯ’ ಎಂದೇ ಹೆಸರಾಗಿದ್ದರು.
ಶ್ರೀಯುತರು ಪತ್ರಿಕೋದ್ಯಮದಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಮತ್ತು ಜನಪರ ಕಾಳಜಿಯನ್ನು ಪರಿಗಣಿಸಿ ಮಾನ್ಯರನ್ನು 1998 ರಿಂದ 2004ರ ಅವಧಿಗೆ ವಿಧಾನ ಪರಿಷತ್ತಿಗೆ ಶಾಸಕರನ್ನಾಗಿ ನಾಮನಿರ್ದೇಶನ ಮಾಡಲಾಗಿತ್ತು. ಶ್ರೀ ರಾಮಮಂದಿರ ಟ್ರಸ್ಟ್, ಶ್ರೀ ರಾಮ ಕಲ್ಯಾಣ ಮಂಟಪ ಮತ್ತು ಶ್ರೀ ರಾಮ ವೃದ್ಧಾಶ್ರಮದ ಟ್ರಸ್ಟಿಯಾಗಿ, ರಾಜ್ಯ ಮಾನ್ಯತಾ ಸಮಿತಿ, ಟೆಲಿಕಾಂ ಸಲಹಾ ಸಮಿತಿ, ಸಂದರ್ಶಕರ ಮಂಡಳಿ ಹಾಗೂ ಕಿದ್ವಾಯಿ ಸ್ಮಾರಕ ಅಂಕೊಲಾಜಿ ಸಂಸ್ಥೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಲ್ಲದೆ ಇವರು ಪತ್ರಿಕಾ ಅಕಾಡೆಮಿ ಹಾಗೂ ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿ, ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರ ನಿಷ್ಠಾವಂತೆ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಹಾಗೂ ಕೆಂಪೇಗೌಡ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಮಾನವೀಯತೆ, ಪ್ರಾಮಾಣಿಕತೆ ಹಾಗೂ ಮೌಲ್ಯಧಾರಿತ ಪತ್ರಿಕಾ ಧರ್ಮದ ಶ್ರೇಷ್ಠ ಪ್ರತಿನಿಧಿಯಾಗಿದ್ದ ಇವರು ಸರಳತೆ ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದರು. ಶೀಯುತರ ನಿಧನದಿಂದಾಗಿ ರಾಜ್ಯವು ಸರಳ ಸಜ್ಜನ ರಾಜಕಾರಣಿ ಹಾಗೂ ಹಿರಿಯ ಪತ್ರಕರ್ತರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದರು.
ಸಭಾಪತಿಗಳು ಸಂತಾಪ ಸೂಚನೆ ನಿರ್ಣಯ ಮಂಡಿಸಿದ ನಂತರ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ:ಶರಣಪ್ರಕಾಶ ಆರ್.ಪಾಟೀಲ್, ವಿರೋಧಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಹಾಗೂ ಸದಸ್ಯರಾದ ಕೆ.ಶಿವಕುಮಾರ್ ಅವರುಗಳು ಮಾತನಾಡಿ, ಅಗಲಿದ ಗಣ್ಯರ ಸೇವೆಯನ್ನು ಸ್ಮರಿಸಿದರು.
ನಂತರ ಮೃತರ ಗೌರವಾರ್ಥ ಸದಸ್ಯರುಗಳು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಲಾಯಿತು. ಸದನದಲ್ಲಿ ಪ್ರಸ್ಥಾಪಿಸಿದ ಸಂತಾಪ ಸೂಚನೆಯ ನಿರ್ಣಯವನ್ನು ಮೃತ ಗಣ್ಯರ ಕುಟುಂಬ ವರ್ಗದವರಿಗೆ ಕಳುಹಿಸಲಾಗುವುದು ಎಂದು ಸಭಾಪತಿಗಳು ಸದನಕ್ಕೆ ತಿಳಿಸಿದರು.
