ಬೆಂಗಳೂರು:ಬೆಂಗಳೂರು ನಾಗರೀಕರಿಗೆ ಜಲಮಂಡಳಿಯು ಯುಗಾದಿ ಉಡುಗೊರೆ ನೀಡಿದ್ದು, ದೀರ್ಘಕಾಲದಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು, ಒನ್ ಟೈಮ್ ಸೆಟಲ್‌ಮೆಂಟ್ (𝗢𝗧𝗦 – 𝗢𝗻𝗲 𝗧𝗶𝗺𝗲 𝗦𝗲𝘁𝘁𝗹𝗲𝗺𝗲𝗻𝘁) ಯೋಜನೆಯನ್ನು ಬರುವ ಏಪ್ರಿಲ್ ತಿಂಗಳಿನಿಂದ ಜಾರಿಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬೆಂಗಳೂರು ನಗರದ ಜನರಿಗೆ ಅನುಕೂಲ ಮಾಡಿಕೊಡಲು ಬಾಕಿ ಉಳಿಸಿಕೊಂಡಿರುವ ಬಿಲ್ ನ ಅಸಲು ಪಾವತಿಸಿದಲ್ಲಿ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ.
ಯೋಜನೆಯ ಹಿನ್ನಲೆ:
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬಿಡಬ್ಲ್ಯೂಎಸ್.ಎಸ್.ಬಿ ವ್ಯಾಪ್ತಿಯಲ್ಲಿರುವ ಸುಮಾರು 11 ಲಕ್ಷ ನೀರಿನ ಸಂಪರ್ಕಗಳ ಪೈಕಿ, 5.11 ಲಕ್ಷ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. 2026ರ ಫೆಬ್ರವರಿ ಅಂತ್ಯದ ಮಾಹಿತಿಯಂತೆ, ಒಟ್ಟು ಬಾಕಿ ಮೊತ್ತ ರೂ. 851.33 ಕೋಟಿಗಳಾಗಿದ್ದು, ಇದರಲ್ಲಿ ಅಸಲು ಮೊತ್ತ ರೂ. 539.43 ಕೋಟಿ ಹಾಗೂ ಬಡ್ಡಿ ರೂ. 311.90 ಕೋಟಿ ಸೇರಿದೆ.
ಬಾಕಿಯನ್ನು ಸುಲಭವಾಗಿ ಪಾವತಿಸಲು ಹಾಗೂ ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು, ಏಪ್ರಿಲ್ 2026 ರಿಂದ ಜೂನ್ 2026 ರವರೆಗೆ (3 ತಿಂಗಳ ಅವಧಿ) ಈ 𝗢𝗧𝗦 ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.
ಯೋಜನೆಯ ಪ್ರಮುಖ ನಿಯಮಗಳು ಹಾಗೂ ಪ್ರಯೋಜನಗಳು:ಶೇ. 100 ರಷ್ಟು ಬಡ್ಡಿ ಮನ್ನಾ:
ಈ 3 ತಿಂಗಳ ಯೋಜನೆ ಅವಧಿಯಲ್ಲಿ ಗ್ರಾಹಕರು ತಮ್ಮ ಅಸಲು ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದರೆ, ಏಪ್ರಿಲ್ 2026ರವರೆಗೆ ಸಂಗ್ರಹವಾಗಿರುವ ಸಂಪೂರ್ಣ ಬಡ್ಡಿಯನ್ನು ಶೇ. 100ರಷ್ಟು ರಿಬೇಟ್ ರೂಪದಲ್ಲಿ ಮನ್ನಾ ಮಾಡಲಾಗುತ್ತದೆ.
ಯಾರಿಗೆಲ್ಲ ಅನ್ವಯ?:
ಈ ಯೋಜನೆಯು ಗೃಹ (𝗗𝗼𝗺𝗲𝘀𝘁𝗶𝗰), ವಾಣಿಜ್ಯ (𝗖𝗼𝗺𝗺𝗲𝗿𝗰𝗶𝗮𝗹), ಕೈಗಾರಿಕಾ (𝗜𝗻𝗱𝘂𝘀𝘁𝗿𝗶𝗮𝗹) ಸೇರಿದಂತೆ 𝗕𝗪𝗦𝗦𝗕 ಯ ಎಲ್ಲ ವರ್ಗದ ಗ್ರಾಹಕರಿಗೂ ಅನ್ವಯವಾಗಲಿದೆ. ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಬಾಕಿಗಳಿಗೂ ಲೆಕ್ಕಪತ್ರ ಸಮನ್ವಯದ ಮೂಲಕ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಪಾವತಿ ಪ್ರಕ್ರಿಯೆ:
ಗ್ರಾಹಕರಿಗೆ ಮಾಹಿತಿ ಒದಗಿಸುವ ಹಾಗೂ ಪಾವತಿ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸುವ ನಿಟ್ಟಿನಲ್ಲಿ, 𝗕𝗪𝗦𝗦𝗕 ವತಿಯಿಂದ ಪ್ರತಿ ಬಾಕಿದಾರರಿಗೆ ಅವರ 𝗥𝗥 ಸಂಖ್ಯೆ, ಅಸಲು ಮೊತ್ತ, ಮನ್ನಾ ಆಗುವ ಬಡ್ಡಿ ಮೊತ್ತ ಹಾಗೂ ಪಾವತಿಸಬೇಕಾದ ಅಂತಿಮ ಮೊತ್ತದ ವಿವರಗಳನ್ನು ಒದಗಿಸಲಾಗುವುದು. ಗ್ರಾಹಕರು 𝗕𝗪𝗦𝗦𝗕 ಕಿಯೋಸ್ಕ್, ಆನ್‌ಲೈನ್ ಪೋರ್ಟಲ್ ಹಾಗೂ ವಿವಿಧ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಸುಲಭವಾಗಿ ಹಣ ಪಾವತಿಸಬಹುದು.
ನಗರದ 5.11 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಆರ್ಥಿಕ ನೆರವು ನೀಡುವ ಹಾಗೂ ಮಂಡಳಿಯ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ದ್ವಿಮುಖ ಉದ್ದೇಶದಿಂದ ಈ ಯುಗಾದಿ ಕೊಡುಗೆಯನ್ನು ಜಾರಿಗೊಳಿಸಲಾಗುತ್ತಿದೆ. ಬರೋಬ್ಬರಿ 311 ಕೋಟಿ ರೂ.ಗಳ ಬಡ್ಡಿ ಮನ್ನಾ ಮಾಡುವ ಮೂಲಕ ನಾಗರಿಕರ ಮೇಲಿನ ಹೊರೆಯನ್ನು ಗಣನೀಯವಾಗಿ ಇಳಿಸಲಾಗುತ್ತಿದೆ. ಸಾರ್ವಜನಿಕರು ಮುಂಬರುವ 3 ತಿಂಗಳ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
