ಸಮಗ್ರ ಸುದ್ದಿ

ಬೆಂಗಳೂರು ನಗರ ಸಂಚಾರ ದಟ್ಟಣೆ ಸುಧಾರಿಸಲು ಅಧ್ಯಯನ: ಬೆಂಗಳೂರು ಸಂಚಾರ ಪೊಲೀಸ್‌ ಇಲಾಖೆ, ಐಆರ್‌ಟಿಇ ಹಾಗೂ ಡಿಯಾಜಿಯೋ ಸಹಭಾಗಿತ್ವ

Share

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ರಸ್ತೆ ಸುರಕ್ಷತಾ ಸವಾಲನ್ನು ಸುಧಾರಿಸುವ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸ್‌ ಇಲಾಖೆ, ರಸ್ತೆ ಸಂಚಾರ ಶಿಕ್ಷಣ ಸಂಸ್ಥೆ (ಐಆರ್‌ಟಿಇ) ಹಾಗೂ ಡಿಯಾಜಿಯೋ ಇಂಡಿಯಾ ಸಹಯೋಗದಲ್ಲಿ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ಸುಧಾರಣೆಗಾಗಿ ಅಧ್ಯಯನ ನಡೆಸಿದೆ.

ಈ ಅಧ್ಯಯನಕ್ಕಾಗಿ ಚಾಲುಕ್ಯ ಸರ್ಕಲ್‌, ಕಂಟೋನ್ಮೆಂಟ್‌ ರೈಲು ನಿಲ್ದಾಣ ಜಂಕ್ಷನ್‌, ಎಚ್‌. ಸಿದ್ದಯ್ಯ ವೃತ್ತವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು, ಈ ಮೂರು ಜಂಕ್ಷನ್‌ಗಳಲ್ಲಿ ವೈಜ್ಞಾನಿಕ ವಿಧಾನದಲ್ಲಿ ಸಂಚಾರ ಪ್ರಮಾಣ, ರಸ್ತೆ ಬಳಕೆದಾರರ ವರ್ತನೆ ಮತ್ತು ಸುರಕ್ಷತಾ ಅಂಶಗಳ ವಿಶ್ಲೇಷಣೆ ನಡೆಸಿದೆ, ಹಾಗೆಯೇ, ತಳಮಟ್ಟದ ಸಂಶೋಧನೆ, ವಾಹನಗಳ ದಟ್ಟಣೆಯ ಟ್ರಾಕಿಂಗ್‌, ಸಾಮರ್ಥ್ಯ ವೃದ್ಧಿಗೆ ತೆಗೆದುಕೊಳ್ಳಬಹುದಾಗ ಕ್ರಮಗಳ ಬಗ್ಗೆಯೂ ಅಧ್ಯಯನ ನಡೆಸಿದೆ.

ಜೊತೆಗೆ, ಅಧ್ಯಯನವು ಸಂಚಾರ ಚಲನವಲನ, ಪಾದಚಾರಿಗಳ ನಡೆ, ರಸ್ತೆ ವಿನ್ಯಾಸದ ಪರಿಣಾಮ ಹಾಗೂ ಯೋಜನಾ ಸುಧಾರಣೆಗಳ ಬಗ್ಗೆ ಪ್ರಮುಖ ತಿಳುವಳಿಕೆ ನೀಡಿದ್ದು, ಸಂಚಾರ ಮಾರ್ಗ ವಿಭಜನೆ, ಪಾದಚಾರಿಗಳ ಸುರಕ್ಷಿತ ರಸ್ತೆ ದ್ವೀಪಗಳು, ಸಿಗ್ನಲ್ ವ್ಯವಸ್ಥೆ ಸುಧಾರಣೆ ಮತ್ತು ಸೂಚನಾ ಫಲಕಗಳ ಅಭಿವೃದ್ಧಿ ಸೇರಿದಂತೆ ಕಡಿಮೆ ವೆಚ್ಚದ ಕ್ರಮಗಳನ್ನು ಶಿಫಾರಸ್ಸು ಮಾಡಲಾಗಿದೆ.

ಈ ಯೋಜನೆಯ ಭಾಗವಾಗಿ ಎರಡು ದಿನಗಳ ಕಾಲ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಡೆಸಲಾಗಿದ್ದು, ಸಂಚಾರ ಅಭಿಯಂತ್ರಣ, ರಸ್ತೆ ಸುರಕ್ಷತಾ ಪರಿಶೀಲನೆ ಹಾಗೂ ನಿಯಮಗಳ ಅನುಷ್ಠಾನ ಕುರಿತು ತಿಳುವಳಿಕೆ ನೀಡಲಾಗಿದೆ.

ಈ ಕುರಿತು ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, “ಬೆಂಗಳೂರಿನಂತಹ ನಗರದಲ್ಲಿ ಸಂಚಾರ ನಿರ್ವಹಣೆಗೆ ಕೇವಲ ಕಾನೂನು ಜಾರಿಯಷ್ಟೇ ಸಾಲದು; ರಸ್ತೆ ವಿನ್ಯಾಸ ಮತ್ತು ನೆಲಮಟ್ಟದ ವಾಸ್ತವತೆಗಳ ಅರಿವು ಅಗತ್ಯ. ಇಂತಹ ಉಪಕ್ರಮಗಳು ಅಧಿಕಾರಿಗಳ ಸಾಮರ್ಥ್ಯವನ್ನು ಹೆಚ್ಚಿಸಿ, ದೈನಂದಿನ ಸಂಚಾರ ನಿರ್ವಹಣೆಗೆ ತಾಂತ್ರಿಕ ತಿಳುವಳಿಕೆಯನ್ನು ಒದಗಿಸುತ್ತವೆ,” ಎಂದರು.

ಡಿಯಾಜಿಯೋ ಇಂಡಿಯಾದ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ದೇವಾಶಿಶ್ ದಾಸ್‌ಗುಪ್ತ ಮಾತನಾಡಿ, “ನಗರ ಸಂಚಾರ ಸಮಸ್ಯೆಗಳನ್ನು ವೈಜ್ಞಾನಿಕ ಹಾಗೂ ಅಂಕಿ-ಅಂಶ ಆಧಾರಿತವಾಗಿ ಎದುರಿಸಲು ಈ ಸಹಭಾಗಿತ್ವ ಸಹಕಾರಿಯಾಗುತ್ತದೆ. ಪ್ರಾರಂಭದಲ್ಲಿ ಮೂರು ಪ್ರಮುಖ ಜಂಕ್ಷನ್‌ಗಳಲ್ಲಿ ಅಧ್ಯಯನ ನಡೆಸಿ, ಹಂತ ಹಂತವಾಗಿ ವಿಸ್ತರಿಸುವ ಉದ್ದೇಶವಿದೆ,” ಎಂದು ಹೇಳಿದರು.

ಐಆರ್‌ಟಿಇ ಅಧ್ಯಕ್ಷ ರೋಹಿತ್ ಬಲೂಜಾ ಮಾತನಾಡಿ, “ಸಂಚಾರ ನಿಯಂತ್ರಣವು ಕೇವಲ ಕಾನೂನು ಜಾರಿಯ ವಿಷಯವಲ್ಲ; ಅದು ಸಂಚಾರ ಅಭಿಯಂತ್ರಣದ ತತ್ವಗಳ ಮೇಲೆ ಆಧಾರಿತವಾಗಿದೆ. ರಸ್ತೆ ವಿನ್ಯಾಸ, ಜಾರಿಗೆ ಮತ್ತು ನಿರ್ವಹಣೆಯ ಸಮನ್ವಯದಿಂದ ಮಾತ್ರ ದೀರ್ಘಕಾಲಿಕ ಸುಧಾರಣೆ ಸಾಧ್ಯ. ಸಂಚಾರ ಪೊಲೀಸರ ತಾಂತ್ರಿಕ ಸಾಮರ್ಥ್ಯವನ್ನು ಬಲಪಡಿಸುವುದು ಅತ್ಯಗತ್ಯ,” ಎಂದು ಹೇಳಿದರು.

ಈ ಉಪಕ್ರಮವು ಸಂಶೋಧನೆ, ಅಭಿಯಂತ್ರಣ ಪರಿಹಾರ ಮತ್ತು ತರಬೇತಿಯನ್ನು ಒಟ್ಟುಗೂಡಿಸಿ, ನಗರ ಸಂಚಾರ ಸುಧಾರಣೆಗೆ ಮಾದರಿಯಾಗಿ ಪರಿಣಮಿಸುವ ನಿರೀಕ್ಷೆ ಇದೆ.


Share

You cannot copy content of this page