ಚಿಕ್ಕಬಳ್ಳಾಪುರ: ರಾಜ್ಯದ ಗ್ರಾಮಾಂತರ ಪ್ರದೇಶಗಳೂ ಸೇರಿ ಸಾರಿಗೆ ವ್ಯವಸ್ಥೆ ವಂಚಿತ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳ ಮೂಲಕ ಸುಮಾರು 15 ಸಾವಿರ ಹೊಸ ಬಸ್ ಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
80 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಈ ದಿನ ನಾವು ಬ್ರಿಟೀಷರ ದಾಸ್ಯದಿಂದ ಮುಕ್ತಗೊಂಡ ದಿನ. ನಮ್ಮದೇ ಸಂವಿಧಾನ, ನಮ್ಮದೇ ಆಶೋತ್ತರಕ್ಕೆ ರೆಕ್ಕೆಯನ್ನ ನೀಡಿದ ದಿನ. ಈ ಸ್ವಾತಂತ್ರ್ಯಕ್ಕೆ ತಮ್ಮ ಬದುಕನ್ನೇ ತ್ಯಾಗ ಮಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಸ್ಮರಿಸುವ ದಿನವಾಗಿದೆ ಎಂದರು.
ಸರ್ವತೋಮುಖ ಅಭಿವೃದ್ಧಿಗೆ ಒತ್ತು
ಸ್ವಾತಂತ್ರ್ಯವೆಂದರೆ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ. ಅದು ಬಡತನದಿಂದ, ಅನಕ್ಷರತೆಯಿಂದ, ಭ್ರಷ್ಟಾಚಾರದಿಂದ ಮತ್ತು ಅಸಮಾನತೆಯಿಂದ ಮುಕ್ತಿಪಡೆಯುವುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಎಲ್ಲಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟಿದೆ. ಜನರ ಜೀವನಮಟ್ಟ ಸುಧಾರಿಸಲು ಪಂಚ ಗ್ಯಾರೆಂಟಿ ಯೋಜನೆಯನ್ನು ನೀಡಿದೆ ಎಂದು ತಿಳಿಸಿದರು.
ಸಂಕಷ್ಟದ ಈ ಬರ ಪರಿಸ್ಥಿತಿಯಲ್ಲಿಯೂ ರೈತರಿಗೆ ಬೆಂಗಾವಲಾಗಿ ನಿಂತು ಕುಡಿಯುವ ನೀರಿನ ಬವಣೆ, ಜಾನುವಾರುಗಳಿಗೆ ಮೇವು, ಬರಪರಿಹಾರದ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿದೆ. ಶಿಕ್ಷಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ 16 ವರ್ಷದ ಒಳಗಿನ ಮಕ್ಕಳಲ್ಲಿ SCREEN TIME ಕಡಿಮೆ ಮಾಡುವುದು ಹಾಗೂ ಸಾಮಾಜಿಕ ಜಾಲತಾಣ ಬಳಕೆಯನ್ನು ಕಡಿಮೆ ಮಾಡಲು ಯೋಜನೆಯನ್ನು ರೂಪಿಸಲಾಗುತ್ತಿದೆ. ಈಗಿನ ಯುವ ಪೀಳಿಗೆಗಾಗಿ ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸಲು ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯ ಹಾಗೂ ಯುವಕರಲ್ಲಿ ಕ್ರೀಡಾ ಮನೋಭಾವ ಮತ್ತು ನಾಯಕತ್ವದ ಗುಣ ಹೆಚ್ಚಿಸಲು ಯುವಕರ ಭಾರತ್ ಜೋಡೋ ಯೋಜನೆಯನ್ನು ರೂಪಿಸಿದ್ದೇವೆ ಎಂದು ತಿಳಿಸಿದರು.
10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
ನಾನು ಸಾರಿಗೆ ಸಚಿವನಾದ ಕೂಡಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಹಾತ್ವಾಕಾಂಕ್ಷೆಯ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನು 286 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ ಎಂದರು.
ಇದಲ್ಲದೇ, ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯ ಸಾರಿಗೆ ವಂಚಿತ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹಾಗೂ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ 15,000 ಕ್ಕೂ ಹೆಚ್ಚು ಹೊಸ ಬಸ್ ಗಳ ಖರೀದಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಹಂತ ಹಂತವಾಗಿ ಹಣಕಾಸಿನ ಲಭ್ಯತೆಗೆ ಅನುಗುಣವಾಗಿ ಬಸ್ ಗಳನ್ನು ಖರೀದಿಸಿ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಬಲಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಈ ಹಿಂದೆ ನಾನು ನಗರಾಭಿವೃದ್ಧಿ ಇಲಾಖೆ ಸಚಿವನಾಗಿದ್ದಾಗ ಸರ್ಕಾರದ 6ನೇ ಗ್ಯಾರೆಂಟಿಯಾದ ಭೂ-ಗ್ಯಾರೆಂಟಿ ಯೋಜನೆ ಅನುಷ್ಠಾನಕ್ಕಾಗಿ KTCP- 1961 ಕಾಯ್ದೆಯಲ್ಲಿ ಹಲವು ತಿದ್ದುಪಡಿಗಳನ್ನು ಮಾಡಿರುತ್ತೇನೆ. ಇ-ಖಾತೆಯು ಎಲ್ಲರಿಗೂ ಸುಲಭವಾಗಿ ಸಿಗುವಂತೆ ಇ-ಖಾತೆ ರೋಲ್-ಔಟ್ ಅಭಿಯಾನವನ್ನು ಆರಂಭಿಸಿರುತ್ತೇನೆ. ಅದರಂತೆ, ಬಿ-ಖಾತದಿಂದ ಎ-ಖಾತೆ ಪರಿವರ್ತನೆ ಮಾಡಲು ನಿಯಮವಾಳಿಗಳನ್ನು ರೂಪಿಸಲಾಗುತ್ತದೆ ಎಂದು ಅವರು ಹೇಳಿದರು.
ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ನಮ್ಮ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ರಾಜ್ಯದ ಜನರಿಗೆ ನೀಡಿದೆ. ಇದರಿಂದ ಕೋಟ್ಯಂತರ ಜನರು ಆರ್ಥಿಕ ಸ್ವಾವಲಂಬಿಗಳಾಗಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರದ ನೂರು ದಿನಗಳ ಆಡಳಿತದಲ್ಲಿ ಹಲವಾರು ಹೊಸ ಕಾರ್ಯಕ್ರಮಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ರೈತ ಮಿತ್ರ / ಬಡವರ ಬಂಧು
ಒಂದು ಹೆಕ್ಟೇರ್‌ವರೆಗಿನ ಜಮೀನು ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಮೊತ್ತದಲ್ಲಿ ಶೇಕಡ 50 ರಷ್ಟು ಸಬ್ಸಿಡಿ, ಗ್ರಾಮಾನುಭವ – ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಗ್ರಾಮೀಣ ಬದುಕಿನ ಅನುಭವಕ್ಕಾಗಿ ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮಗಳನ್ನೂ ಜಾರಿಗೆ ತಂದಿರುವ ಹಿರಿಮೆ ನಮ್ಮ ಸರ್ಕಾರದ್ದಾಗಿದೆ ಎಂದರು.
ಯುವ ಯುಗ – ಯುವ ಕರ್ನಾಟಕ ನಿರ್ಮಾಣ :
ಭಾರತ್ ಜೋಡೋ ಯುವಕ ಸಂಘ ಮಿಷನ್ (BJYS) – ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 6000, ನಗರ ಪ್ರದೇಶಗಳಲ್ಲಿ 4000 ಸಂಘಗಳ ಸ್ಥಾಪನೆ ; ವಾರ್ಷಿಕ ತಲಾ 10 ಲಕ್ಷ ಅನುದಾನದಂತೆ ವಾರ್ಷಿಕ 1000 ಕೋಟಿಗಳ ವೆಚ್ಚ. ಯುವಕರಲ್ಲಿ ಆರೋಗ್ಯ, ಕೌಶಲ್ಯ, ಸಾಮಾಜಿಕ ಸಾಮರಸ್ಯ ಉತ್ತೇಜನ.
ಯುವ ಉದ್ಯೋಗ ಸೇತು – ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಸಚಿವರು ತಿಳಿಸಿದರು.
ಸರ್ಕಾರಿ ಅಸ್ಪತ್ರೆಗಳ ದತ್ತು ಯೋಜನೆ
ರಾಜ್ಯದ ಮೆಡಿಕಲ್ ಕಾಲೇಜುಗಳು CHC and PHC ಗಳಿಗೆ ಅವಶ್ಯ ಮಾನವ ಸಂಪನ್ಮೂಲ ಒದಗಿಸಲು ಉತ್ತೇಜನ, ನಶೆ ಮುಕ್ತ ಕರ್ನಾಟಕ – RISE Karnataka (Refuse, Inform, Support and Empower) ಯುವಕರಲ್ಲಿ ಜಾಗೃತಿ ಮೂಡಿಸಿ ತ್ಯಜಿಸುವಿಕೆ, ತಿಳಿಸು, ಬೆಂಬಲ ಮತ್ತು ಸಬಲೀಕರಣ ಉಪಕ್ರಮಗಳ ಮೂಲಕ ನಶೆ ಪದಾರ್ಥಗಳ ವ್ಯಸನ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಜಾಸೇವೆ ಇಲಾಖೆ
ಸಾರ್ವಜನಿಕರ ಕುಂದುಕೊರತೆ ಆಲಿಸಲು ಪ್ರತ್ಯೇಕ ಇಲಾಖೆ ಸ್ಥಾಪಿಸಿ ಆಧುನಿಕ ತಂತ್ರಜ್ಞಾನದ ಮೂಲಕ ತ್ವರಿತ ಸ್ಪಂದನೆಗೆ ಕ್ರಮ ವಹಿಸಲಾಗಿದ್ದು, ಭೂ ಗ್ಯಾರೆಂಟಿ – ರಾಜ್ಯದ ಎಲ್ಲಾ ಕೃಷಿಯೇತರ ಸ್ವತುಗಳಿಗೆ ಇ-ಖಾತೆ ಸೇರಿದಂತೆ ಸಮಗ್ರ ಡಿಜಿಟಲ್ ಆರ್.ಟಿ.ಸಿ ಗಳು ಮತ್ತು ಅರ್ಹ ಬಿ-ಖಾತೆಗಳನ್ನು ಎ- ಖಾತೆಗಳಾಗಿ ಪರಿರ್ವತಿಸಿ ಭೂಮಾಲೀಕತ್ವದ ಹಕ್ಕುಗಳನ್ನು ಖಾತ್ರಿಪಡಿಸಿ ವ್ಯಾಜಗಳನ್ನು ಕಡಿಮೆ ಮಾಡಲಾಗುವುದು ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಪುಣ್ಯಭೂಮಿ
ಚಿಕ್ಕಬಳ್ಳಾಪುರ ಜಿಲ್ಲೆಯು ಅತ್ಯಂತ ವಿಶೇಷ ಜಿಲ್ಲೆಯಾಗಿದ್ದು, ಚಿಕ್ಕಬಳ್ಳಾಪುರದ ವಿದುರಾಶ್ವತವು “ಕರ್ನಾಟಕ ಜಲಿಯನ್ ವಾಲಾಬಾಗ್” ಎಂದೇ ಪ್ರಸಿದ್ಧವಾಗಿದೆ. ಈ ಜಿಲ್ಲೆಯು ವಿಶ್ವವಿಖ್ಯಾತ ಸರ್.ಎಂ. ವಿಶ್ವೇಶ್ವರಯ್ಯನವರನ್ನು, ಶ್ರೇಷ್ಠ ರಸಾಯನ ಶಾಸ್ತ್ರ ವಿಜ್ಞಾನಿಯಾದ ಡಾ.ಸಿ. ಎನ್.ಆರ್. ರಾವ್ ರವನ್ನು, ಶಿಕ್ಷಣ ತಜ್ಞರಾದ ಡಾ.ಹೆಚ್. ನರಸಿಂಹಯ್ಯನವರನ್ನು, ಕೈವಾರದ ಯೋಗಿ ನಾರಾಯಣ ಯತೀಂದ್ರರವರನ್ನು ನೀಡಿದ ಪುಣ್ಯ ಭೂಮಿಯಾಗಿದೆ.
ಮಾದಕ ವಸ್ತುಗಳಿಂದ ದೂರವಿರಿ
ಇಂದಿನ ಯುವಕರೇ ನಮ್ಮ ಮುಂದಿನ ಭವಿಷ್ಯ. ನಾವೆಲ್ಲರೂ ಒಗ್ಗೂಡಿ ಸುಳ್ಳು ಸುದ್ದಿಯ ವಿರುದ್ಧ, ಮಾದಕ ವಸ್ತುಗಳ ವಿರುದ್ಧ, ಮೂಢ ನಂಬಿಕೆಯ ವಿರುದ್ಧ, ಸ್ವಚ್ಛತೆಗಾಗಿ ಹಾಗೂ ಉತ್ತಮ ಶಿಕ್ಷಣಕ್ಕಾಗಿ ಹೋರಾಡಬೇಕಾಗಿದೆ. ಭವ್ಯ ಭವಿಷ್ಯದ ಭಾರತವನ್ನು ನಾವೆಲ್ಲರೂ ಸೇರಿ ನಿರ್ಮಾಣ ಮಾಡಬೇಕಾಗಿದೆ ಎಂದು ಬೈರತಿ ಸುರೇಶ್ ಕರೆ ನೀಡಿದರು.
ಜಲಸುರಕ್ಷಿತ ಜಿಲ್ಲೆಯಾಗಿ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರವನ್ನು ನೀರಿನ ಕೊರತೆಯ ಜಿಲ್ಲೆಯಿಂದ ಜಲಸುರಕ್ಷಿತ ಜಿಲ್ಲೆಯನ್ನಾಗಿ, ಕೃಷಿ ಆಧಾರಿತ ಆರ್ಥಿಕತೆಯಿಂದ ಕೈಗಾರಿಕೆ ಮತ್ತು ಉದ್ಯೋಗ ಆಧಾರಿತ ಆರ್ಥಿಕತೆಯತ್ತ ಕೊಂಡೊಯ್ಯುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಅವರು ತಿಳಿಸಿದರು.
ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಧ್ಯೇಯದೊಂದಿಗೆ ಅಭಿವೃದ್ಧಿ ಫಲ ಜಿಲ್ಲೆಯ ಪ್ರತಿಯೊಂದು ಕುಟುಂಬಕ್ಕೂ ತಲುಪಬೇಕು. ಸರ್ಕಾರದ ಯೋಜನೆಗಳು ಕೇವಲ ಕಡತಗಳಲ್ಲಿ ಅಥವಾ ಕಾಗದಗಳಲ್ಲಿ ಉಳಿಯದೆ, ಜನರ ಬದುಕಿನಲ್ಲಿ ನಿಜವಾದ ಬದಲಾವಣೆ ತರಬೇಕು. ಇದಕ್ಕಾಗಿ ಅಧಿಕಾರಿಗಳು ಜನಪರ ಮನೋಭಾವದಿಂದ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
