ಬೆಂಗಳೂರು:ತೋಟಗಾರಿಕೆ ಇಲಾಖೆ, ಲಾಲ್‍ಬಾಗ್‍ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ “ರಾಜ್ಯ ಸರ್ಕಾರಿ ಸಂಸ್ಥೆಗಳ ಉದ್ಯಾನವನಗಳು” ವಿಭಾಗದಲ್ಲಿ ಲೋಕಭವನದ ಉದ್ಯಾನವನವು ಪ್ರಥಮ ಬಹುಮಾನ ಪಡೆದುಕೊಂಡಿದೆ.
ಈ ಸಾಧನೆಯೊಂದಿಗೆ ಲೋಕಭವನದ ಉದ್ಯಾನವನವು ಸತತ 8ನೇ ಬಾರಿಗೆ ಪ್ರಥಮ ಸ್ಥಾನ ಗಳಿಸಿದ್ದು, ಉದ್ಯಾನವನದ ಉತ್ತಮ ನಿರ್ವಹಣೆ, ಸ್ವಚ್ಛತೆ, ಅಂದಗೊಳಿಸುವಿಕೆ ಹಾಗೂ ಹಸಿರು ಪರಿಸರ ಕಾಪಾಡುವಲ್ಲಿ ಕೈಗೊಂಡಿರುವ ನಿರಂತರ ಪ್ರಯತ್ನಗಳಿಗೆ ಮತ್ತೊಂದು ಗೌರವ ದೊರೆತಂತಾಗಿದೆ.
ಈ ಹಿನ್ನೆಲೆಯಲ್ಲಿ ಲೋಕಭವನದ ಉದ್ಯಾನವನವನ್ನು ಅತ್ಯುತ್ತಮವಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರಾಮಮೂರ್ತಿ ಎನ್. ಅವರ ನೇತೃತ್ವದ ತಂಡವನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿನಂದಿಸಿದರು.
ಲೋಕಭವನದ ಉದ್ಯಾನವನವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ವಹಿಸಿ, ಸ್ವಚ್ಛತೆ, ಹಸಿರು ಪರಿಸರ ಹಾಗೂ ಸುಂದರ ವಿನ್ಯಾಸವನ್ನು ಕಾಪಾಡಿಕೊಂಡು ಬರುತ್ತಿರುವ ತಂಡದ ಸಮರ್ಪಣಾ ಮನೋಭಾವ ಮತ್ತು ಪರಿಶ್ರಮವನ್ನು ರಾಜ್ಯಪಾಲರು ಶ್ಲಾಘಿಸಿದರು.
