ಕೋಲಾರ: ಅಂಬೇಡ್ಕರ್ ಅವರ ಸಂವಿಧಾನ ಮತ್ತು ವಿಚಾರಗಳನ್ನು ನಿರಂತರವಾಗಿ ವಿರೋಧಿಸಿಕೊಂಡು ಬರುತ್ತಿರುವವರೇ ಇವತ್ತು ಅಂಬೇಡ್ಕರ್ ಜಯಂತಿ ಆಚರಿಸುತ್ತಿರುವ ಸೋಗಲಾಡಿತನ ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
“ಜೈ ಭೀಮ್-ಜೈ ಭಾರತ್” ಸಂಘಟನೆ ಆಯೋಜಿಸಿದ್ದ 135ನೇ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ವಿಚಾರದಲ್ಲಿ ಎರಡು ರೀತಿಯ ರಾಜಕೀಯ ಮತ್ತು ಸಾಂಸ್ಕೃತಿಕ ದಾಳಿ ದೇಶದಲ್ಲಿ ನಡೆಯುತ್ತಿದೆ. ಮೊದಲನೆಯದ್ದು, “ಅಂಬೇಡ್ಕರ್ ಪ್ರತಿಮೆಗೆ ಪೂಜೆ ಮಾಡುತ್ತಲೇ ಅವರ ವಿಚಾರಗಳನ್ನು ಕೊಲ್ಲುವ ದಾಳಿ”,
ಎರಡನೆಯದ್ದು ಅಂಬೇಡ್ಕರ್ ಅವರ ಪ್ರಜ್ವಲಿಸುವ ವಿಚಾರಗಳನ್ನು ಸಹಿಸದೆ ಅವರ ಪ್ರತಿಮೆಗಳ ಮೇಲೆ ನಡೆಯುತ್ತಿರುವ ದೈಹಿಕ ದಾಳಿ ಎಂದು ವಿವರಿಸಿದರು.
ಈ ಎರಡೂ ರೀತಿಯ ದಾಳಿಗಳಿಂದ ಅಂಬೇಡ್ಕರ್ ಚಿಂತನೆಗಳು, ವಿಚಾರಗಳು ಮತ್ತೆ ಮತ್ತೆ ಗಟ್ಟಿಯಾಗಿ ಬೆಳೆಯುತ್ತಿವೆ ಮತ್ತು ಇವತ್ತಿನ ತಲೆಮಾರಿನ ಪ್ರತೀ ಶೋಷಿತನ ಎದೆಯೊಳಗೆ ಅಂಬೇಡ್ಕರ್ ಅವರ ಪ್ರತಿಷ್ಠಾಪನೆ ನಡೆಯುತ್ತಿದೆ.
ಏಕೆಂದರೆ ಅಂಬೇಡ್ಕರ್ ಅವರದ್ದು, ” ಅವಮಾನಗಳಿಂದಲೇ ಹೆಪ್ಪುಗಟ್ಟಿದ ಶಕ್ತಿಶಾಲಿ ವ್ಯಕ್ತಿತ್ವ”. ತಮ್ಮ ಕಾಲ ಬುಡದಲ್ಲಿ ಅನುಭವಿಸಿದ ಅವಮಾನಗಳಿಗೆಲ್ಲಾ ಎದೆಗೊಟ್ಟು ಹೋರಾಡಿ ವಿಶ್ವ ಮಾನ್ಯತೆ ಗಳಿಸಿದ ಮಹಾನ್ ಚೇತನ ಅನ್ನಿಸಿಕೊಂಡರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅಂದರೆ ಕೇವಲ ವ್ಯಕ್ತಿಯಲ್ಲ, ಕೇವಲ ಪ್ರತಿಮೆ ಅಲ್ಲ. ಅಂಬೇಡ್ಕರ್ ಅಂದರೆ ಒಂದು ಮಾದರಿ ಮತ್ತು ಒಂದು ಮಾರ್ಗ. ದೈಹಿಕ ಮತ್ತು ಮಾನಸಿಕ ಗುಲಾಮಗಿರಿಯಿಂದ ವಿಮೋಚನೆ ಹೊಂದುವ ಮಾದರಿ ಮತ್ತು ಈ ವಿಮೋಚನೆಗೆ ರೂಪುಗೊಂಡ ಮಾನವೀಯತೆಯ ರಾಷ್ಟ್ರೀಯ ಹೆದ್ದಾರಿ.
ಅಂಬೇಡ್ಕರ್ ಎಂದರೆ ಅವಮಾನಗಳಿಂದ ಅರಿವಿನ ಕಡೆಗೆ,
ಅರಿವಿನಿಂದ ಜ್ಞಾನದೆ ಕಡೆಗೆ, ಜ್ಞಾನದಿಂದ ವಿಮೋಚನೆಯೆಡೆಗೆ ಕರೆದೊಯ್ಯುವ ದಾರಿಯಾಗಿದ್ದಾರೆ. ಹೆದ್ದಾರಿಯಾಗಿದ್ದಾರೆ ಎಂದು ವಿವರಿಸಿದ್ದಾರೆ.
“ಅಂಬೇಡ್ಕರ್ ಆಧುನಿಕ ಭಾರತದ ಮೊದಲ ಮಹಿಳಾ ವಿಮೋಚಕರು”. ಎಲ್ಲಾ ಜಾತಿಯ, ಎಲ್ಲಾ ಧರ್ಮದ ಮಹಿಳೆಯರ ಘನತೆ ಮತ್ತು ಸಮಾನತೆಗಾಗಿ ಅಂಬೇಡ್ಕರ್ ಅವತ್ತು ಮಾಡಿಟ್ಟ ಕಾನೂನಿನ ಆಸ್ತಿ ಇವತ್ತಿಗೂ ಭಾರತೀಯ ಮಹಿಳೆಯರ ಪಾಲಿಗೆ ದೊಡ್ಡ ಠೇವಣೆಯಾಗಿದೆ.
ಹಿಂದೂ ಕೋಡ್ ಬಿಲ್ ರಚಿಸಿದ್ದು ಮತ್ತು ಇದರ ಜಾರಿಗೆ ಹೋರಾಡಿದ್ದುಮಹಿಳೆಯರ ಹಕ್ಕುಗಳಿಗಾಗಿ ಅಂಬೇಡ್ಕರ್ ನೀಡಿದ ಅತಿದೊಡ್ಡ ಕೊಡುಗೆ.
ಈ ಮಸೂದೆಯ ಮೂಲಕ ಮಹಿಳೆಯರಿಗೆ ತಂದೆ ಮತ್ತು ಪತಿಯ ಆಸ್ತಿಯಲ್ಲಿ ಸಮಾನ ಪಾಲು ಒದಗಿ ಬಂತು.
ಶೋಷಣೆಯಿಂದ ಸ್ವತಂತ್ರವಾಗಿ ಹೊರಗೆ ಬರಲು ಮಹಿಳೆಯರಿಗೂ ವಿಚ್ಛೇದನ ಪಡೆಯುವ ಹಕ್ಕು ದೊರೆಯಿತು.
ಮಹಿಳೆಯರಿಗೂ ಮಕ್ಕಳನ್ನು ದತ್ತು ಪಡೆಯುವ ಹಕ್ಕು ಸಿಕ್ಕಿತು.
ಅಂಬೇಡ್ಕರ್ ಅವರು ಕೇವಲ ಮಹಿಳೆಯರ ಪರವಾಗಿ ಮಸೂದೆ ಬರೆಯಲಿಲ್ಲ, ಕಾನೂನು ಮಾಡಲಿಲ್ಲ. ಈ ಕಾನೂನು ಜಾರಿಗೆ ಯಾವ ಮಟ್ಟಕ್ಕೆ ಹೋದರು ಎನ್ನುವುದನ್ನು ದೇಶದ ಪ್ರತಿಯೊಬ್ಬ ಮಹಿಳೆ ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಮಹಿಳಾ ಮಸೂದೆಗೆ ಸಂಸತ್ತಿನಲ್ಲಿ ಪುರುಷ ಜಗತ್ತು ತೀವ್ರ ವಿರೋಧ ವ್ಯಕ್ತಪಡಿಸಿದಾಗ, ಮಹಿಳೆಯರ ಹಕ್ಕುಗಳಿಗಾಗಿ ಅಂಬೇಡ್ಕರ್ ಅವರು ತಮ್ಮ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದು ಅವರ ಬದ್ಧತೆಗೆ ಸಾಕ್ಷಿ ಎನ್ನುವುದನ್ನು ನಾವು ಮರೆಯಬಾರದು. ಎಲ್ಲಾ ಜಾತಿಯ ಮತ್ತು ಎಲ್ಲಾ ಧರ್ಮದ ಮಹಿಳಾ ಕುಲಕ್ಕೆ ಸಂವಿಧಾನಾತ್ಮಕ ರಕ್ಷಣೆ ಒದಗಿಸಿದವರು ಅಂಬೇಡ್ಕರ್.
ಕಾನೂನಿನ ಮುಂದೆ ಎಲ್ಲರೂ ಸಮಾನರು ಮತ್ತು ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎನ್ನುವ ಕಾನೂನು ರಚಿಸಿದವರು, ಅಮೆರಿಕ ಮತ್ತಿತರ ದೇಶಗಳ ಮಹಿಳೆಯರಿಗಿಂತ ಮೊದಲೇ ಭಾರತದ ಮಹಿಳೆಯರಿಗೆ ಸಮಾನ ಮತದಾನದ ಹಕ್ಕನ್ನು ಅಂಬೇಡ್ಕರ್ ಸಂವಿಧಾನದ ಮೂಲಕ ಖಚಿತಪಡಿಸಿದ್ದನ್ನು ವಿವರಿಸಿದರು.
“ಒಬ್ಬ ಪುರುಷ ಶಿಕ್ಷಿತನಾದರೆ ಅವನು ಮಾತ್ರ ಜ್ಞಾನಿಯಾಗುತ್ತಾನೆ, ಆದರೆ ಒಬ್ಬ ಮಹಿಳೆ ಶಿಕ್ಷಿತಳಾದರೆ ಇಡೀ ಕುಟುಂಬವೇ ಜ್ಞಾನಿಯಾಗುತ್ತದೆ” ಎಂದು ಅಂಬೇಡ್ಕರ್ ನಂಬಿದ್ದರು. ಆದ್ದರಿಂದ ಇಲ್ಲಿ ಸೇರಿರುವ ಪ್ರತೀ ಮಹಿಳೆಯರೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆಧ್ಯತೆ ನೀಡಬೇಕು ಎಂದರು.
1942 ರಲ್ಲಿ ನಾಗ್ಪುರದಲ್ಲಿ ನಡೆದ ಮಹಿಳಾ ಸಮ್ಮೇಳನದಲ್ಲಿ, “ಒಂದು ಸಮಾಜದ ಪ್ರಗತಿಯನ್ನು ಆ ಸಮಾಜದ ಮಹಿಳೆಯರು ಸಾಧಿಸಿರುವ ಪ್ರಗತಿಯ ಆಧಾರದ ಮೇಲೆ ನಾನು ಅಳೆಯುತ್ತೇನೆ” ಎಂದು ಘೋಷಿಸಿದರು.
ಪಾರ್ಲಿಮೆಂಟಿನಲ್ಲಿ ದೇವದಾಸಿ ಪದ್ಧತಿ ಮತ್ತು ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳ ವಿರುದ್ಧ ತೀವ್ರವಾಗಿ ಧ್ವನಿ ಎತ್ತಿದವರಲ್ಲಿ ಅಂಬೇಡ್ಕರ್ ಮೊದಲಿಗರು.
ಈ ಎಲ್ಲಾ ಕಾರಣಗಳಿಂದಾಗಿ ನಾವು ಅಂಬೇಡ್ಕರ್ ಅವರನ್ನು ‘ದಲಿತರ ನಾಯಕ’ ಎಂದು ನೋಡುವ ಮಿತಿಯನ್ನು ಮೀರಿ, ಅವರು ಇಡೀ ಭಾರತೀಯ ಸ್ತ್ರೀಕುಲದ ವಿಮೋಚಕ ಎನ್ನುವುದನ್ನು ಒಪ್ಪಿಕೊಳ್ಳಬೇಕು.ಎಂದು ಕರೆ ನೀಡಿ,
ನಾನು ಇಂದು ಇಲ್ಲಿ ನಿಮ್ಮ ಮುಂದೆ ಹೀಗೆ ನಿಂತಿದ್ದೇನೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರು ನೀಡಿದ ಶಿಕ್ಷಣದ ಹಕ್ಕು ಮತ್ತು ಅವರು ಬರೆದ ಸಂವಿಧಾನವೇ ಕಾರಣ ಎಂದು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟವನ್ನು ಕೇವಲ ರಾಜಕೀಯ ದೃಷ್ಟಿಕೋನದಿಂದ ನೋಡದೆ, ಒಬ್ಬ ವ್ಯಕ್ತಿಯಾಗಿ ಅವರ ಸಂವೇದನೆ ಮತ್ತು ಮಾನವೀಯತೆಯನ್ನು ಎತ್ತಿ ಹಿಡಿಯುವ ಕೆಲಸ ಇವತ್ತಿನ ಕಾರ್ಯಕ್ರಮದ ಮೂಲಕ ಆಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ರೂವಾರಿ ದಲಿತ್ ನಾರಾಯಣಸ್ವಾಮಿ, ಡಿಎಸ್ ಎಸ್ ಸಂಸ್ಥಾಪಕರಾದ ವಿಜಯಕುಮಾರ್, ಹಿರಿಯ ಪತ್ರಕರ್ತ ಗಣೇಶ್, ಕುರುಬರ ಪೇಟೆ ವೆಂಕಟೇಶ್, ಆಸೀಫ್, ಸಚಿವ ಜಮೀರ್ ಅಹಮದ್ ಅವರ ಮಾಧ್ಯಮ ಸಂಯೋಜಕ ಲಕ್ಷ್ಮೀನಾರಾಯಣ್, ತೆಂಗಿನನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ನಟರಾಜ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
